ಬೆಂಗಳೂರಿನ ಸಿಗ್ನಲ್‌ಗಳಲ್ಲಿ ರಾರಾಜಿಸುತ್ತಿರುವ ಕನ್ನಡ ಧ್ವಜ

ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರ ಕ್ರಮ
A digital Kannada flag shining brightly at traffic signals in Bengaluru (AI Photo)
ಬೆಂಗಳೂರಿನ ಸಿಗ್ನಲ್‌ಗಳಲ್ಲಿ ರಾರಾಜಿಸುತ್ತಿರುವ ಡಿಜಿಟಲ್ ಕನ್ನಡ ಧ್ವಜ (ಎಐ ಚಿತ್ರ)
Published on: 

ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು : ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ನಗರದ ಸಂಚಾರ ಸಿಗ್ನಲ್‌ಗಳಲ್ಲಿರುವ ಡಿಜಿಟಲ್ ಡಿಸ್‌ಪ್ಲೇ ಪರದೆಗಳಲ್ಲಿ ಕನ್ನಡದ ಕೆಂಪುಹಳದಿ ಧ್ವಜವನ್ನು ಪ್ರದರ್ಶಿಸುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಹೊಸ ಕ್ಷಣಗಣನೆ (ಕೌಂಟ್‌ಡೌನ್) ಸಿಗ್ನಲ್ ಸಿಸ್ಟಮ್‌ಗಳನ್ನು ಅಳವಡಿಸಿರುವ ನಗರ ಸಂಚಾರ ಪೊಲೀಸರು ಆ ಡಿಜಿಟಲ್ ಡಿಸ್‌ಪ್ಲೇಗಳನ್ನು ಸಾಮಾಜಿಕ ಜಾಗೃತಿಗೆ ಬಳಸುತ್ತಿದ್ದಾರೆ.

ಕೆಲವೇ ನಿಮಿಷ ಅಥವಾ ಸೆಕೆಂಡುಗಳ ಕೌಂಟ್‌ಡೌನ್ ಸಂದರ್ಭವನ್ನು ಬಳಸಿಕೊಂಡು ಪ್ರದರ್ಶಿಸುವ ನಾಡ ಧ್ವಜ ಸಿಗ್ನಲ್‌ಗಾಗಿ ಕಾಯುತ್ತಿರುವ ಅನೇಕರ ಗಮನ ಸೆಳೆದಿದೆ. ಅಲ್ಪ ಸಮಯವಾದರೂ ಜನರ ಗಮನ ಕೇಂದ್ರೀಕರಿಸುವ ಮೂಲಕ ರಾಜ್ಯೋತ್ಸವದ ನೆನಪು ಮತ್ತು ಮಹತ್ವವನ್ನು ಸಾರುವಲ್ಲಿ ಈ ಪ್ರಯತ್ನ ಗಮನಾರ್ಹವಾಗಿದೆ.

ಸಂಚಾರ ನಿರ್ವಹಣೆಯಲ್ಲಿ ತಂತ್ರಜ್ಞಾನವನ್ನು ಬಳಸುತ್ತಿರುವ ಬೆಂಗಳೂರು ಸಂಚಾರ ಪೊಲೀಸರು, ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸಲು ಡಿಜಿಟಲ್ ಪ್ರದರ್ಶನ ವ್ಯವಸ್ಥೆಯನ್ನೂ ಬಳಸುವುದು ಸಾಮಾನ್ಯ. ಜೊತೆಗೆ ಸಂಚಾರ ಸಿಗ್ನಲ್‌ಗಳ ಕೌಂಟ್‌ಡೌನ್ ಪರದೆಗಳನ್ನು ವಿಶೇಷ ಸಂದರ್ಭಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಸಾಮಾಜಿಕ ಜಾಗೃತಿಗೆ ಸಮಯದ ಸದ್ಭಳಕೆ

ವಾಹನ ಸವಾರರು ಸಿಗ್ನಲ್‌ನಲ್ಲಿ ಕಾಯುವಾಗ ಹಸಿರು ದೀಪ ಬೆಳಗಲು ಉಳಿದಿರುವ ಸಮಯವನ್ನು ತೋರಿಸುವ ಪುಟ್ಟ ಡಿಜಿಟಲ್ ಪರದೆಗಳಲ್ಲಿ ಈ ಧ್ವಜವನ್ನು ಪ್ರದರ್ಶಿಸಲಾಗುತ್ತಿದೆ. ಕೆಲವೇ ಸೆಕೆಂಡ್‌ಗಳ ಕಾಲ ಕಾಣಿಸಿಕೊಳ್ಳುವ ಧ್ವಜವು ವಾಹನ ಸವಾರರ ಗಮನ ಸೆಳೆಯುತ್ತಿದೆ.

ಸಾಮಾನ್ಯವಾಗಿ ಸಂಚಾರ ಸಿಗ್ನಲ್‌ಗಳಲ್ಲಿ ಕೆಂಪು, ಹಳದಿ ಮತ್ತು ಹಸಿರು ದೀಪಗಳ ಬದಲಾವಣೆಗೆ ಸಂಬಂಧಿಸಿದ ಸಮಯವನ್ನು ಸೂಚಿಸುವ ಕೌಂಟ್‌ಡೌನ್ ಪರದೆಗಳನ್ನು ಬಳಸಲಾಗುತ್ತದೆ. ಈ ಪರದೆಗಳಲ್ಲೇ ಕನ್ನಡ ಧ್ವಜವನ್ನು ಪ್ರದರ್ಶಿಸುವ ಮೂಲಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ಪ್ರಯತ್ನ ಮಾಡಲಾಗಿದೆ.

ಸಂಚಾರ ದಟ್ಟಣೆಯಿಂದ ಕೂಡಿರುವ ಪ್ರಮುಖ ವೃತ್ತಗಳಲ್ಲಿ ಪ್ರತಿದಿನ ಸಾವಿರಾರು ವಾಹನ ಸವಾರರು ಸಿಗ್ನಲ್‌ಗಾಗಿ ಕಾಯುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೇ ಕ್ಷಣಗಳ ಕಾಲ ಪರದೆಯಲ್ಲಿ ಕಾಣಿಸಿಕೊಳ್ಳುವ ಕನ್ನಡ ಧ್ವಜವು ನಾಡಿನ ಮೇಲಿನ ಅಭಿಮಾನ ಮತ್ತು ಗೌರವವನ್ನು ಮೂಡಿಸುತ್ತಿದೆ.

ಸಂಚಾರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ನಾಡಿನ ಸಾಂಸ್ಕೃತಿಕ ಹಿರಿಮೆ ಸಾರುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರ ಈ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಕೂಡ ಸಿಗ್ನಲ್ ಡಿಸ್‌ಪ್ಲೇನಲ್ಲಿ ಹೃದಯದ ಚಿತ್ರವನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರಭಕ್ತಿಗೆ ಪ್ರೇರಣೆ ನೀಡಿದ್ದರು.

ಈ ಹಿಂದೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷೆಯ ಬಳಕೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಸಂಚಾರ ಪೊಲೀಸರು 2024ರ ರಾಜ್ಯೋತ್ಸವದ ಸಂದರ್ಭದಲ್ಲಿ ನಗರದ 5 ಸಾವಿರ ಆಟೊಗಳಲ್ಲಿ ಪ್ರಯಾಣಿಕರಿಗೆ ಕನ್ನಡದ ಸಾಮಾನ್ಯ ಪದ ಮತ್ತು ವಾಕ್ಯಗಳನ್ನು ಪರಿಚಯಿಸುವ ಕಾರ್ಡ್‌ಗಳನ್ನು ವಿತರಿಸುವ ಅಭಿಯಾನ ಮಾಡಿ ಗಮನ ಸೆಳೆದಿದ್ದರು. ಇದೀಗ ನಗರದ ಪ್ರಮುಖ ಸಿಗ್ನಲ್‌ನಲ್ಲಿರುವ ಕೌಂಟ್‌ಡೌನ್ ಡಿಸ್‌ಪ್ಲೇ ಪರದೆಯಲ್ಲಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಧ್ವಜವನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.