ಬಾನೆತ್ತರಕ್ಕೆ ಹಾರಾಡಿದ ಕನ್ನಡ ಬಾವುಟ Flag hosting on Bhiravadurga Hill

ಕುದೂರಿನ ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟದ ಮೇಲೆ ಡಾ.ರಾಜ್​ ಹಾಗೂ ಡಾ.ಪುನೀತ್​ ಅಭಿಮಾನಿಗಳ ಬಳಗದಿಂದ 70 ಅಡಿ ಉದ್ದದ ನಾಡಧ್ವಜವನ್ನು ಹಾರಿಸಲಾಯಿತು.
ಕುದೂರಿನ ಇತಿಹಾಸ ಪ್ರಸಿದ್ಧ ಭೈರವದುರ್ಗ ಬೆಟ್ಟದ ಮೇಲೆ ಡಾ.ರಾಜ್​ ಹಾಗೂ ಡಾ.ಪುನೀತ್​ ಅಭಿಮಾನಿಗಳ ಬಳಗದಿಂದ 70 ಅಡಿ ಉದ್ದದ ನಾಡಧ್ವಜವನ್ನು ಹಾರಿಸಲಾಯಿತು.
Published on

ಕುದೂರಿನ ಭೈರವದುರ್ಗದ ಬೆಟ್ಟದಲ್ಲಿ 70 ಅಡಿ ಉದ್ದದ ನಾಡ ಧ್ವಜಾರೋಹಣ

ಕುದೂರು: ನಾಡಪ್ರಭು ಕೆಂಪೇಗೌಡರು ಬೆಂಗಳೂರು ಸುತ್ತಮುತ್ತ ಕಟ್ಟಿರುವ ನವದುರ್ಗಗಳಲ್ಲಿ ಒಂದಾಗಿರುವ ಕುದೂರು ಪಟ್ಟಣದ ಭೈರವದುರ್ಗ ಬೆಟ್ಟದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರ 70 ಅಡಿ ಉದ್ದದ ಕನ್ನಡ ಬಾವುಟ ಬಾನೆತ್ತರಕ್ಕೆ ಹಾರಾಡಿತು.
ಬೆಟ್ಟದ ಮೇಲೆ ಧ್ವಜಾರೋಹಣ ನೆರವೇರಿಸಿದ ಬಳಿಕ ಡಾ.ರಾಜ್​ ಕುಮಾರ್​, ಡಾ.ಪುನೀತ್​ರಾಜ್​ ಕುಮಾರ್​ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಎಚ್​.ನಾಗೇಶ್​ ಮಾತನಾಡಿ, ಕೆಂಪೇಗೌಡರ ನವದುರ್ಗಗಳಲ್ಲಿ ಒಂದಾಗಿರುವ ಭೈರವದುರ್ಗ ಬೆಟ್ಟ ಹತ್ತಲು ಬರುವ ಪ್ರವಾಸಿಗರಿಗೆ, ಚಾರಣಪ್ರಿಯರಿಗೆ ಮೆಟ್ಟಿಲು ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಟ್ಟಕ್ಕೆ ಮೆಟ್ಟಿಲು ವ್ಯವಸ್ಥೆ ಕಲ್ಪಿಸಿ ಎಂದು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಈವರೆಗೆ ಅದು ಕಾರ್ಯಗತಗೊಂಡಿಲ್ಲ. ಪಂಚಾಯಿತಿಯವರಿಗೆ ಸಾಕಷ್ಟು ಬಾರಿ ತಿಳಿಸಿದರೂ ಬೆಟ್ಟದ ಬುಡದಲ್ಲಿ ಪಟ್ಟಣದ ಕಸವನ್ನು ಸುರಿಯುವುದನ್ನು ನಿಲ್ಲಿಸುತ್ತಿಲ್ಲ. ಇದು ಬೆಟ್ಟದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ, ಈ ಬಗ್ಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದು, ಪಂಚಾಯಿತಿಯವರು ಬೇರೆ ಸ್ಥಳದಲ್ಲಿ ಕಸವಿಲೇ ಮಾಡಬೇಕು ಎಂದು ಕೆ.ಎಚ್​.ನಾಗೇಶ್​ ಒತ್ತಾಯಿಸಿದರು.
ಕೆಡಿಪಿ ಸದಸ್ಯ ಜಗದೀಶ್​ ಮಾತನಾಡಿ, ಈ ಹಿಂದೆ ರಾಮನಗರ ಜಿಲ್ಲಾಧಿಕಾರಿ ರಾಕೇಶ್​ ಕುಮಾರ್​ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಬೆಟ್ಟವನ್ನು ಹತ್ತಿ, ಇದನ್ನು ಪ್ರವಾಸಿ ತಾಣವನ್ನಾಗಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದ್ದರು. ಆ ಹೇಳಿಕೆ ಈಗಲೂ ಭರವಸೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಬಳಗದ ಸದಸ್ಯರಾದ ಲೋಕೇಶ್​, ಟೈಲರ್​ ಸುರೇಶ್​, ಜಗದೀಶ್​, ಸಿದ್ಧರಾಜು, ಹರ್ಷ, ಬೆಳ್ಳಿ ಕೃಷ್ಣ ಮತ್ತಿತರರು ಇದ್ದರು.

ಅನಾಥವಾಗಿದೆ ಕೋಟೆ

ಕೆಂಪೇಗೌಡರು ಭೈರವದುರ್ಗ ಬೆಟ್ಟದಲ್ಲಿ ಕಟ್ಟಿದ ಕೋಟೆ, ಬಾಗಿಲುಗಳು ಈಗಲೂ ಅನಾಥವಾಗಿ ಬಿದ್ದಿವೆ. ಸಂತಾನವಿಲ್ಲದ ದಂಪತಿ ಈಗಲೂ ಬೆಟ್ಟಕ್ಕೆ ಬಂದು ಗಂಗಮ್ಮನ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿ ನೀರಿನ ಹೊಂಡವಿದೆ. ಕುಣಿಗಲ್​ನ ಶಾಸಕರು ಹುತ್ರಿದುರ್ಗವನ್ನು ಅಭಿವೃದ್ಧಿಪಡಿಸಿದಂತೆ ಕುದೂರಿನ ಭೈರವದುರ್ಗವನ್ನು ಅಭಿವೃದ್ಧಿಪಡಿಸಲು ಮಾಗಡಿ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕೆಡಿಪಿ ಸದಸ್ಯ ಜಗದೀಶ್​ ಆಗ್ರಹಿಸಿದರು.
"

ಮಾಗಡಿ ಕೋಟೆ, ದೇವಸ್ಥಾನಕ್ಕೆಲ್ಲಾ ನೂರಾರು ಕೋಟಿ ಅನುದಾನ ತರುವ ಶಾಸಕ ಬಾಲಕೃಷ್ಣ ಅವರಿಗೆ ಕೆಂಪೇಗೌಡರು ಆಳ್ವಿಕೆ ನಡೆಸಿದ ಭೈರವದುರ್ಗ ಬೆಟ್ಟವನ್ನು ಅಭಿವೃದ್ಧಿಪಡಿಸಲು ಏಕೆ ಮನಸ್ಸಾಗುತ್ತಿಲ್ಲ? ಪ್ರವಾಸೋದ್ಯಮ ಇಲಾಖೆ ಇನ್ನಾದರೂ ಐತಿಹಾಸಿಕ ಬೆಟ್ಟವನ್ನು ಅಭಿವೃದ್ಧಿಪಡಿಸಿ, ಸುಂದರ ಪ್ರವಾಸಿ ತಾಣವನ್ನಾಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net