_1783879048779.webp?w=480&auto=format%2Ccompress&fit=max)
_1783879048779.webp?w=480&auto=format%2Ccompress&fit=max)
ರಾಜಕೀಯ ಪಕ್ಷಗಳಲ್ಲಿ ತೀವ್ರ ಸಂಚಲನ ಮತ್ತು ವಿವಾದಕ್ಕೆ ಕಾರಣವಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದು, ಕರ್ನಾಟಕದಲ್ಲೂ ಜೂನ್ 30ರಿಂದ ಆರಂಭವಾಗಿದೆ. ಮೃತರ ಹೆಸರನ್ನು ಪಟ್ಟಿಯಿಂದ ತೆಗೆಯಲು ಮತ್ತು ಇತರ ದೋಷಗಳ ನಿವಾರಣೆಗೆ ಚುನಾವಣಾ ಆಯೋಗ ಕಾಲಕಾಲಕ್ಕೆ ಎಸ್ಐಆರ್ ನಡೆಸುತ್ತದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಯಾವುದೇ ತಾರತಮ್ಯವಿಲ್ಲದೆ ಮತದಾನದ ಹಕ್ಕು ಸಿಗುವಂತೆ ಮಾಡುವುದು. ಮರಣ ಹೊಂದಿದವರು, ಬೇರೆ ಊರುಗಳಿಗೆ ಶಾಶ್ವತವಾಗಿ ವಲಸೆ ಹೋದವರು ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರಿಟ್ಟುಕೊಂಡಿರುವ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಎಸ್ಐಆರ್ ಉದ್ದೇಶ. ದೇಶದಲ್ಲಿ ಇದುವರೆಗೂ 11 ಬಾರಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆದಿದ್ದು, ಅನರ್ಹರನ್ನು ಕೈಬಿಡಲಾಗಿದೆ.
ಭಾರತದಲ್ಲಿ ಮತದಾರರ ಪಟ್ಟಿಯ ತಯಾರಿಕೆ ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಿಂದ ಹಿಡಿದು ಇಂದು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಾಗಿ ವಿಕಸನಗೊಂಡಿದೆ. ದೇಶದಲ್ಲಿ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ಸಮಯದಿಂದ ಈವರೆಗೂ ಚುನಾವಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಮತ್ತು ಸುಧಾರಣೆಗಳು ಆಗಿವೆ. ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಿಸುತ್ತ ಪಾರದರ್ಶಕ ಚುನಾವಣೆಗಳನ್ನು ನಡೆಸಲಾಗಿದೆ.
ಯಾವ ವರ್ಷಗಳಲ್ಲಿ ನಡೆದಿವೆ?: 1952-56, 1957, 1961, 1965, 1966, 1983-84, 1987-89, 1992, 1993, 1995 ಹಾಗೂ 2002-04 ಈ ವರ್ಷಗಳಲ್ಲಿ ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗಿದೆ. ಜವಾಹರಲಾಲ್ ನೆಹರು ಕಾಲದಲ್ಲಿ ಮೂರು ಬಾರಿ, ಲಾಲ್ಬಹಾದ್ದೂರ್ ಶಾಸ್ತ್ರೀ, ಅವಧಿಯಲ್ಲಿ ಒಂದು ಬಾರಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಎರಡು ಬಾರಿ, ರಾಜೀವ್ ಗಾಂಧಿ ಅವಧಿಯಲ್ಲಿ ಒಂದು ಬಾರಿ, ಪಿ.ವಿ. ನರಸಿಂಹರಾವ್ ಕಾಲದಲ್ಲಿ ಎರಡು ಬಾರಿ ಹಾಗೂ 2002ರಲ್ಲಿ ಅಟಲ್ಬಿಹಾರಿ ವಾಜಪೇಯಿ ಆಡಳಿತದಲ್ಲಿ ಆರಂಭಗೊಂಡು ಮನಮೋಹನ್ ಸಿಂಗ್ ಆಡಳಿತದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 12ನೇ ಎಸ್ಆರ್ಐ ಪ್ರಕ್ರಿಯೆ ನಡೆದಿದ್ದು, ಎರಡು ಹಂತದಲ್ಲಿ ಮುಗಿದು ಮೂರನೇ ಹಂತದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
1983ರಿಂದ 1995ರವರೆಗೂ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಕ್ಷೇತ್ರಗಳ ಮರು ವಿಂಗಡಣೆ, ಮತದಾರರ ಪಟ್ಟಿಗಳ ದೋಷ ನಿವಾರಣೆ ಮಾಡಲಾಯಿತು. 1989ರಲ್ಲಿ ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು. 1998ರಲ್ಲಿ ಚುನಾವಣಾ ಆಯೋಗ ತನ್ನ ಜಾಲತಾಣ ಪ್ರಾರಂಭಿಸಿತು. 1993ರಲ್ಲಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್) ಪರಿಚಯಿಸಲಾಯಿತು.
ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಅಂದರೆ 1952-1956ರಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಆಧಾರದ ಮೇಲೆ ಪಟ್ಟಿ ತಯಾರಿಸಲಾಯಿತು. ಇದು ಪ್ರಜಾಪ್ರಭುತ್ವಕ್ಕೆ ಭದ್ರ ಅಡಿಪಾಯ ಹಾಕಿತು. ಆಗ 17.3 ಕೋಟಿ ಮತದಾರರಿದ್ದರು. ಸದ್ಯ 99 ಕೋಟಿಗೂ ಅಧಿಕ ಮತದಾರರು ಇದ್ದಾರೆ.
1957-1966ರ ಅವಧಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಶಾಸನಬದ್ಧ ಸುಧಾರಣೆಗಳನ್ನು ತರಲಾಯಿತು. 1957, 61, 65, 66ರಲ್ಲಿ ನಿಯಮಿತವಾಗಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಯಿತು. 1956ರ ತಿದ್ದುಪಡಿಯ ಮೂಲಕ ‘ಮುಖ್ಯ ಚುನಾವಣಾ ಅಧಿಕಾರಿ’ (ಸಿಇಒ) ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ’ ಹುದ್ದೆ ಸೃಷ್ಟಿಸಲಾಯಿತು. 1966ರಲ್ಲಿ ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣೆ ನಡೆಸುವ ಕಡ್ಡಾಯ ನಿಯಮ ಜಾರಿಗೆ ಬಂತು.
2002-2004ರಲ್ಲಿ ನಡೆದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ) ನೇಮಕ ಮಾಡಿ, ಮನೆ ಮನೆಗೆ ಭೇಟಿ ನೀಡಿ ಪಟ್ಟಿ ಪರಿಷ್ಕರಣೆ ಮಾಡಲಾಯಿತು. ಈ ಪ್ರಕ್ರಿಯೆ ವೇಳೆ ಮತದಾರರ ಪಟ್ಟಿಗೆ ಡಿಜಿಟಲ್ ಸ್ಪರ್ಶ ನೀಡಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿ ಪ್ರಮುಖವಾಗಿದ್ದು, ಇದನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಲೇಬೇಕು. ಇಲ್ಲವಾದರಲ್ಲಿ ಅನರ್ಹರು, ಅಕ್ರಮ ವಲಸಿಗರು ಮತದಾನದ ಹಕ್ಕು ಪಡೆದು ವ್ಯವಸ್ಥೆಯನ್ನೇ ಹಾಳು ಮಾಡುವ ಅಪಾಯವಿರುತ್ತದೆ.
2025ರ ಜೂನ್ನಲ್ಲಿ ಬಿಹಾರದಲ್ಲಿ ಮೊದಲ ಹಂತವಾಗಿ ಎಸ್ಐಆರ್ ಆರಂಭಗೊಂಡು ಸೆಪ್ಟೆಂಬರ್ನಲ್ಲಿ ಪೂರ್ಣಗೊಂಡಿತು. 36 ಲಕ್ಷ ವಲಸಿಗರು, ಮೃತಪಟ್ಟ 22 ಲಕ್ಷ ಜನರು ಹಾಗೂ ಇತರ 7 ಲಕ್ಷ ಜನರ ಹೆಸರು ಮತದಾರರ ಯಾದಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿದ್ದು ದೃಢಪಟ್ಟು ಮತದಾರರ ಪಟ್ಟಿಯಿಂದ ಕೈಬಿಡಲಾಯಿತು. ಒಟ್ಟು 66 ಲಕ್ಷ ಮತದಾರರು ಅನರ್ಹರು ಎಂದು ಚುನಾವಣೆ ಆಯೋಗ ತಿಳಿಸಿತು. 2025ರ ಅಕ್ಟೋಬರ್ನಿಂದ ಎರಡನೇ ಹಂತವು ಆರಂಭವಾಗಿ 2026 ಫೆಬ್ರವರಿವರೆಗೂ ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ ದ್ವೀಪಗಳಲ್ಲಿ ನಡೆದಿದೆ. ಅನರ್ಹ ಮತದಾರರ ಮಾಹಿತಿಯನ್ನು ಇನ್ನೂ ನೀಡಿಲ್ಲ. ಮೂರನೇ ಹಂತವು 2026ರ ಜುಲೈನಲ್ಲಿ ಆರಂಭಗೊಂಡಿದ್ದು, ಇದು ಅಕ್ಟೋಬರ್ವರೆಗೂ ನಡೆಯಲಿದೆ. ಇದು 16 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶ ಒಳಗೊಂಡಿದೆ. ಕರ್ನಾಟಕದಲ್ಲಿ 59,050 ಬಿಎಲ್ಒ, 25,284 ಬಿಎಲ್ಎ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,55,74,064 ಮತದಾರರು ಇದ್ದಾರೆ.