

ವಿಷಯಕ್ಕೆ ಬರೋಣ. ಹುಲಿ ಹುಲ್ಲು ತಿನ್ನುವುದಿಲ್ಲ ಎಂಬುದು ಹಳೆಯ ನಾಣ್ಣುಡಿ. ಆದರೆ ನಿಜಕ್ಕೂ ಅದು ಸತ್ಯವಾ? ಖಂಡಿತ ಇಲ್ಲ. ಹುಲಿಯೂ ಹುಲ್ಲು ತಿನ್ನುತ್ತದೆ. ಕಳೆದ ಏಪ್ರಿಲ್ನಲ್ಲಿ ಉತ್ತರಪ್ರದೇಶದ ಪಿಲಿಭಿತ್ ಹುಲಿಸಂರಕ್ಷಿತ ಪ್ರದೇಶದಲ್ಲಿ ಜರುಗಿದ ಘಟನೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿ ಆ ಕುರಿತು ವನ್ಯಜೀವಿತಜ್ಞರಲ್ಲಿ ಬಹಳಷ್ಟು ಚರ್ಚೆಗಳಾದವು. ಆಗಿದ್ದಿಷ್ಟೇ- ಆ ಘಟನೆ ನಡೆದ ದಿನದಂದು ಹುಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆಯೇ ಹುಲಿಯ ದರ್ಶನವಾಯಿತು. ಪ್ರವಾಸಿಗರು ಪಯಣಿಸುತ್ತಿದ್ದ ವಾಹನದ ಅನತಿ ದೂರದಲ್ಲಿದ್ದು ಹಸಿದಂತಿದ್ದ ಹುಲಿಯು ದಾರಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ಮೂಸಿ ನೋಡಿ ನುಂಗಲಾರಂಭಿಸಿತು. ಹುಲಿ ಜಠರಾಗ್ನಿ ತಣಿಸಲು ಹೆಬ್ಬಾವನ್ನೇನೋ ನುಂಗಿತು. ಆದರೆ ಹೊಟ್ಟೆಯೊಳಗಿಳಿದಿದ್ದ ಹಾವು ಒಳಗೆ ತನ್ನ ಆಟ ಆರಂಭಿಸಿದ್ದೇ ತಡ ತಳಮಳ ತಾಳಲಾರದ ಹುಲಿರಾಯ ಸುಸ್ತು ಹೊಡೆಯುತ್ತಿದ್ದುದ್ದನ್ನು ಅಲ್ಲಿದ್ದ ಪ್ರವಾಸಿಗರ ಕ್ಯಾಮೆರಾಗಳು ಸೆರೆ ಹಿಡಿದವು. ಚಡಪಡಿಸುತ್ತಿದ್ದ ಹುಲಿರಾಯ ಅಲ್ಲೇ ಮೂಲೆಯಲ್ಲಿದ್ದ ಹುಲ್ಲನ್ನು ತಿಂದ. ಅಷ್ಟೇ, ಎರಡೇ ನಿಮಿಷದಲ್ಲಿ ವಾಂತಿ ಮಾಡಿಕೊಂಡ ಹುಲಿಯ ಹೊಟ್ಟೆಯೊಳಗಿಂದ ಪೂರ್ತಿ ಹೆಬ್ಬಾವು ಹೊರಬಂತು.
ವೈರಲ್ ಆದ ಪೂರ್ತಿ ದೃಶ್ಯಾವಳಿಯನ್ನು ಪರೀಕ್ಷಿಸಿದ ಪರಿಣತರು ಅಂದು ಹುಲಿಯು ನುಂಗುವ ಮೊದಲು ಹೆಬ್ಬಾವಿನ ಚಟುವಟಿಕೆಗಳನ್ನು ಗಮನಿಸಿ ಅದು ಮೊದಲೇ ಸತ್ತಿರುವ ಸಾಧ್ಯತೆ ಹೆಚ್ಚಿದ್ದ ಕಾರಣ ಅದೊಂದು ಚರ್ಚೆಗೊಳಗಾಗಬೇಕಾಗಿರುವ ವಿಷಯವೆಂದು ಷರಾ ಬರೆದರು. ಆದರೆ ಹುಲಿ ಹುಲ್ಲು ತಿನ್ನುವ ಪ್ರಕ್ರಿಯೆ ಮಾತ್ರ ಅಪರೂಪದ್ದಲ್ಲ ಎಂಬುದು ಅವರೆಲ್ಲರ ಅಭಿಪ್ರಾಯವಾಗಿತ್ತು. ಹುಲಿಯ ದೈನಂದಿನ ದಿನಚರಿಯ ಭಾಗವಾಗಿರದಿದ್ದರೂ ಅಪರೂಪಕ್ಕೊಮ್ಮೆ ಹೊಟ್ಟೆ ಕೆಟ್ಟಾಗ ಕಲ್ಮಷವನ್ನು ಹೊರಹಾಕಲು ಕಂಡುಕೊಂಡ ನೈಸರ್ಗಿಕ ಉಪಾಯವದು. ಥೇಟು ಇಂತಹುದೇ ಪ್ರಕ್ರಿಯೆಯನ್ನು ನಾವು ಶ್ವಾನಗಳಲ್ಲೂ ಕಾಣಬಹುದು. ಆರೋಗ್ಯ ಕೆಟ್ಟಾಗ ಅಥವಾ ವೈರಸ್ ಅಥವಾ ಶಿಲಿಂಧ್ರಗಳಂತಹ ಸೂಕ್ಷ್ಮಜೀವಿಗಳಿಂದ ತನ್ನ ಆರೋಗ್ಯಕ್ಕೆ ಅಪಾಯವೊದಗಿದಾಗ ಜೀವರಕ್ಷಣೆಗೆ ನಿಸರ್ಗದಲ್ಲೇ ಉತ್ತರವಿದೆಯೆಂಬುದನ್ನು ಈ ಪ್ರಾಣಿಪಕ್ಷಿಗಳು ಚೆನ್ನಾಗಿ ಅರಿತಿವೆ.
ವನ್ಯಜೀವಿಗಳ ಸ್ವಯಂ ಔಷಧೋಪಚಾರವನ್ನು ಅಭ್ಯಸಿಸುವ ವೈಜ್ಞಾನಿಕ ವಿಭಾಗಕ್ಕೆ ಝುೂಫಾರ್ವಕೊಗ್ನೋಸಿ ಎಂದು ಹೆಸರು. ಝುೂ (ವನ್ಯಜೀವಿಗಳು) ಫಾರ್ವ (ಔಷಧಿ) ಮತ್ತು ಗ್ನೋಸಿ (ಅರಿವು) ಈ ಪದಗಳನ್ನು ಸೇರಿಸಿ ಕಟ್ಟಲಾಗಿರುವ ಪದವದು. ಸಾಮಾನ್ಯವಾಗಿ ವನ್ಯಜೀವಿಗಳಲ್ಲಿ ಹೆಚ್ಚಿನ ರೋಗಗಳು ಹರಡುವುದು ಅವು ನೇರವಾಗಿ ಸಂಪರ್ಕಕ್ಕೆ ಬರುವ ಉಣ್ಣಿ, ಸೊಳ್ಳೆ, ಚಪ್ಪಟೆ ಹುಳುಗಳಂತಹ ಪರಾವಲಂಬಿ ಜೀವಿಗಳಿಂದ. ಹೀಗಾಗಿ ಅವು ಅಂತಹ ಪರಾವಲಂಬಿ ಜೀವಿಗಳನ್ನು ದೂರವಿಡಲು ಬಹಳಷ್ಟು ಎಚ್ಚರ ವಹಿಸುತ್ತವೆ. ಝುೂಫಾರ್ವಕೊಗ್ನೋಸಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಪರಿಣತರು ವನ್ಯಜೀವಿಗಳಿಗೆ ರೋಗ ಬಂದ ನಂತರದ ಸ್ವಯಂ ಔಷಧೋಪಚಾರದ ಕುರಿತಷ್ಟೇ ಅಲ್ಲ, ಆರೋಗ್ಯವಾಗಿರುವಾಗಲೂ ಅವು ಹೇಗೆ ರೋಗವನ್ನು ಹೊತ್ತು ತರುವ ಪರಾವಲಂಬಿ ಜೀವಿಗಳಿಂದ ಅಂತರ ಕಾಯ್ದುಕೊಳ್ಳುತ್ತವೆ ಎಂಬುದನ್ನೂ ಅಭ್ಯಸಿಸುತ್ತಿದ್ದಾರೆ. ಇಂತಹ ಸಂಶೋಧನೆಗಳು ವನ್ಯಜೀವಿಗಳು ತಮ್ಮ ಸ್ವಆರೋಗ್ಯದ ಕುರಿತು ಎಷ್ಟೊಂದು ಕಾಳಜಿ ವಹಿಸುತ್ತವೆ ಎಂಬುದರ ಕುರಿತು ನಮ್ಮ ಊಹೆಗೂ ಮೀರಿದಂತಹ ವಿಷಯಗಳನ್ನು ಹೊರಹಾಕಿವೆ.
ಅಧ್ಯಯನಗಳು ಹೇಳುವಂತೆ ವನ್ಯಜೀವಿಗಳಲ್ಲಿ ಅದರಲ್ಲೂ ವಿಶೇಷವಾಗಿ ಸ್ತನಿಗಳಲ್ಲಿ ಹೆಣ್ಣು ಮಿಲನಕ್ರಿಯೆಗೆ ಗಂಡನ್ನು ಆಯ್ಕೆ ಮಾಡುವಾಗ ಆತನಲ್ಲಿರುವ ಪರಾವಲಂಬಿ ಜೀವಿಗಳ ಪ್ರಮಾಣವೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಕೇವಲ ಗಂಡಿನ ದೇಹದ ವಾಸನೆಯಿಂದಲೇ ಅದನ್ನು ಪತ್ತೆ ಹಚ್ಚಿ ಹೆಚ್ಚು ಅರೋಗ್ಯವಂತ ಮತ್ತು ಶುಚಿಯಾಗಿರುವ ಗಂಡಿಗೆ ಆದ್ಯತೆಯನ್ನು ನೀಡುವ ಮೂಲಕ ತನ್ನ ಮುಂದಿನ ಪೀಳಿಗೆಯ ಅರೋಗ್ಯದ ಕುರಿತು ಮಿಲನದ ಪೂರ್ವದಲ್ಲೇ ಎಚ್ಚರ ವಹಿಸುವುದರಲ್ಲಿ ಅಮ್ಮನ ದೂರಾಲೋಚನೆ ಅಡಗಿದೆ. ಆಹಾರದ ಆಯ್ಕೆಯಲ್ಲೂ ಅಷ್ಟೇ, ಪರಾವಲಂಬಿ ಜೀವಿಗಳು ತಮ್ಮ ದೇಹದೊಳಗೆ ಪ್ರವೇಶ ಪಡೆಯದಂತೆ ಎಚ್ಚರ ವಹಿಸುವ ವನ್ಯಜೀವಿಗಳು ಅಂತಹ ಜೀವಿಗಳನ್ನು ಹೊಂದಿರುವಂತಹ ಆಹಾರದಿಂದ ದೂರವಿರುತ್ತವೆ. ಇವೆಲ್ಲ ಅನಾರೋಗ್ಯ ಕಾಡದಂತಿರಲು ವಹಿಸುವ ಎಚ್ಚರದ ನಡೆಯಾಗಿದ್ದರೆ ಈ ಎಲ್ಲ ಕಾಳಜಿಯ ನಂತರವೂ ಕಾಯಿಲೆ ವಕ್ಕರಿಸಿಕೊಂಡರೆ ಅದನ್ನು ಗುಣಪಡಿಸಲು ಅವು ಔಷಧೀಯ ಸಸ್ಯಗಳ ಮೊರೆ ಹೋಗುವುದು ಒಂಥರ ವನ್ಯಜೀವಿಗಳ ಮತ್ತು ನಿಸರ್ಗದ ನಡುವಿನ ಸಂಬಂಧದ ದ್ಯೋತಕದಂತಿದೆ.
ಕೆಲ ಸಸ್ಯಗಳೇಕೆ ಔಷಧೀಯ ಗುಣಗಳನ್ನು ಹೊಂದಿರುತ್ತವೆ?: ನಾವು ಆಹಾರವನ್ನು ಸೇವಿಸಿದ ನಂತರ ನಡೆಯುವ ಚಯಾಪಚಯ ಕ್ರಿಯೆಯಲ್ಲಿ ಜೀರ್ಣವಾಗದೇ ಉಳಿಯುವ ಆಹಾರವು ತ್ಯಾಜ್ಯವಾಗಿ ಹೊರಹೋಗುತ್ತದೆಯಷ್ಟೇ. ಸಸ್ಯಗಳ ವಿಷಯದಲ್ಲಿ ಕತೆ ಬೇರೆಯೇ ಇದೆ. ಅವುಗಳ ಜೀವಕೋಶಗಳಲ್ಲಿ ಆಹಾರದ ಜತೆಗೆ ಕೆಲ ರಾಸಾಯನಿಕಗಳೂ ಉತ್ಪತ್ತಿಯಾಗುತ್ತವೆ. ಇಂತಹ ರಾಸಾಯನಿಕಗಳಿಗೆ ಈ ಮೊದಲು ಸಸ್ಯಗಳ ಪಚನಕ್ರಿಯೆಯ ತ್ಯಾಜ್ಯಗಳೆಂದೂ ಅಂತಹ ತ್ಯಾಜ್ಯಗಳನ್ನು ಹೊರಹಾಕಲು ಬೇರ್ಯಾವ ದಾರಿಯಿಲ್ಲದ ಕಾರಣ ಸಸ್ಯಗಳು ಆ ತ್ಯಾಜ್ಯಗಳನ್ನು ತಮ್ಮ ಎಲೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆಯೆಂದು ಅಂದುಕೊಳ್ಳಲಾಗಿತ್ತು. ಆದರೆ ನಂತರ ಗೊತ್ತಾಗಿದ್ದು ಈ ತ್ಯಾಜ್ಯಗಳೇ ಹೊರಗಿನ ವೈರಿಗಳ ಆಕ್ರಮಣ ತಡೆಗಟ್ಟಲು ಅವುಗಳಿಗಿರುವ ಢಾಲುಗಳೆಂದು. ಸಸ್ಯವೊಂದು ತನ್ನ ಜೀವಿತಕಾಲದಲ್ಲಿ ಹಲವು ರೀತಿಯ ವೈರಿಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕೆಂದೇ ಅವು ಪಚನಕ್ರಿಯೆಯ ತ್ಯಾಜ್ಯಗಳಿಂದ ವಿವಿಧ ರಾಸಾಯನಿಕಗಳನ್ನು ಉತ್ಪಾದಿಸಿ ತಮ್ಮ ಸುರಕ್ಷತೆಗೆ ಬಳಸಿಕೊಳ್ಳುತ್ತವೆ. ಉದಾಹರಣೆಗೆ ಕೆಲ ಸಸ್ಯಗಳು ನಿಕೊಟಿನ್ ಮತ್ತು ಕೆಫಿನ್ನಂತಹ ಸಾವಯವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಈ ಸಂಯುಕ್ತಗಳು ರುಚಿಯಲ್ಲಿ ತುಂಬ ಕಹಿಯಾಗಿದ್ದು ಘಾಟು ವಾಸನೆ ಹೊಂದಿರುವ ಕಾರಣ ಅಂತಹ ಸಸ್ಯಗಳಿಂದ ಪ್ರಾಣಿಗಳು ಮತ್ತು ಕೀಟಗಳು ದೂರವುಳಿಯುತ್ತವೆ. ಮತ್ತೊಂದೆಡೆ ಮತ್ತೆ ಕೆಲವು ಸಸ್ಯಗಳು ಇಂತಹುದೇ ಪ್ರಕ್ರಿಯೆಯಲ್ಲಿ ಫಿನಾಲ್ ಮತ್ತು ಪಾಲಿ ಫಿನಾಲ್ನಂತಹ ರಾಸಾಯನಿಕಗಳನ್ನು ಉತ್ಪಾದಿಸಿ ಬ್ಯಾಕ್ಟಿರಿಯಾ, ವೈರಸ್ ಮತ್ತು ಶಿಲೀಂಧ್ರಗಳ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತವೆ. ಸಸ್ಯಗಳು ತಮ್ಮ ಆರೋಗ್ಯ ರಕ್ಷಣೆಗೆಂದು ಉತ್ಪಾದಿಸುವ ಇಂತಹ ರಾಸಾಯನಿಕಗಳು ಒಂದು ಹಂತದವರೆಗೆ ಮನುಷ್ಯನೂ ಸೇರಿದಂತೆ ಎಲ್ಲ ಜೀವಿಗಳಲ್ಲಿಯೂ ಅಂತಹ ಮೂಲಗಳಿಂದ ಹರಡುವ ರೋಗಗಳ ತಡೆಯಲ್ಲಿ ಔಷಧವಾಗಿ ಕೆಲಸ ಮಾಡುತ್ತವೆ.
1960ರಲ್ಲಿ ತೋಶಿಯಾಡಾ ನಿಶಿದಾ ಎಂಬ ಜಪಾನ್ ಮೂಲದ ಸಂಶೋಧಕರೊಬ್ಬರು ತಾಂಜಾನಿಯಾ ಕಾಡಿನಲ್ಲಿ ಓಡಾಡುತ್ತಿದ್ದಾಗ ಅಲ್ಲಿನ ಚಿಂಪಾಂಜಿಗಳಲ್ಲಿ ಕೆಲವು ಮಾತ್ರ ಅಸ್ಪೆಲ್ಲಾ ಮರದ ಎಲೆಗಳನ್ನು ತಿನ್ನುವುದನ್ನು ಗಮನಿಸಿದರು. ಅಸ್ಪೆಲ್ಲಾ ಎಂಬುದು ಹಳದಿ ಬಣ್ಣದ ದೊಡ್ಡ ಎಲೆಗಳುಳ್ಳ ಭಾರತದಲ್ಲಿ ಕಂಡುಬರದ ಮರ. ಇದರ ತೊಗಟೆ ಮತ್ತು ಎಲೆಗಳಲ್ಲಿ ಯಾವುದೇ ಪೌಷ್ಟಿಕಾಂಶವಿರದ ಕಾರಣ ಚಿಂಪಾಂಜಿಗಳು ಸಾಮಾನ್ಯವಾಗಿ ಅವುಗಳತ್ತ ಸುಳಿಯುವುದಿಲ್ಲ. ಅಂತಹುದರಲ್ಲಿ ಕೆಲವು ಮಾತ್ರ ಮರದ ಎಲೆಗಳನ್ನು ಆಯ್ದು ಕಚ್ಚದೇ ಇಡಿಯಾಗಿ ನುಂಗುವುದು ತೋಶಿಯಾಡಾ ಅವರಿಗೆ ಪ್ರಶ್ನೆಯಾಗಿ ಕಾಡಿತು. ಈ ಪ್ರಕ್ರಿಯೆಯನ್ನು ಅವರು ತಮ್ಮ ಸಂಶೋಧನಾ ಪತ್ರದಲ್ಲಿ ನಮೂದಿಸಿದ್ದರೂ ಉತ್ತರ ಮಾತ್ರ ಅವರಿಗೆ ಸಿಗಲಿಲ್ಲ. 1996ರಲ್ಲಿ ಜಪಾನಿನಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದ ಅಮೆರಿಕ ಮೂಲದ ವಿಜ್ಞಾನಿ ಮೈಕಲ್ ಹಫ್ವುನ್ ಈ ನಿಟ್ಟಿನಲ್ಲಿ ಸಂಶೋಧನೆಯನ್ನು ಮುಂದುವರಿಸಿ ಉತ್ತರವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ಅವರು ಗಮನಿಸಿದಂತೆ ಅಸ್ಪೆಲ್ಲಾ ಮರದ ಎಲೆಗಳ ಮೇಲ್ಮೈ ಹೇಗಿರುತ್ತದೆ ಎಂದರೆ, ಮರ ಕೆತ್ತಲು ಬಳಸುವ ಮರಳು ಕಾಗದದ ರೀತಿ ಗಡಸಾಗಿರುತ್ತದೆ. ಆ ಕಾರಣಕ್ಕೆ ಅವುಗಳನ್ನು ಹಾಗೆಯೇ ನುಂಗಿ ತಮ್ಮ ಜಠರದಲ್ಲಿರುವ ಜಂತುಗಳ ಕಾಟದಿಂದ ಚಿಂಪಾಂಜಿಗಳು ಮುಕ್ತಿ ಪಡೆಯುತ್ತಿದ್ದವು. ಹೀಗಾಗಿ ಗುಂಪಿನಲ್ಲಿರುವ ಚಿಂಪಾಂಜಿಗಳಲ್ಲಿ ಜಂತುಬಾಧೆಯನ್ನು ಹೊಂದಿರುವಂತವುಗಳು ಮಾತ್ರ ಅಸ್ಪೆಲ್ಲಾ ಮರದತ್ತ ಸಾಗುತ್ತಿದ್ದವು. ಮೈಕಲ್ ಹಫ್ವುನ್ ಗಮನಿಸಿದಂತೆ ಈ ವರ್ತನೆ ತಾಂಜಾನಿಯಾಗಷ್ಟೇ ಸೀಮಿತವಾಗದೇ ಸಂಪೂರ್ಣ ಆಫ್ರಿಕಾದಾದ್ಯಂತ ಚಿಂಪಾಂಜಿಗಳಲ್ಲಿ ಕಂಡುಬರುತ್ತಿತ್ತು.
ಚಿಂಪಾಂಜಿಗಳು ಸಸ್ಯಗಳ ಎಲೆಗಳ ಬಾಹ್ಯ ರಚನೆಯನ್ನು ರೋಗಗಳ ನಿಗ್ರಹಕ್ಕೆ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದ್ದರೆ ಇಂದಿನ ನವಯುಗದ ತ್ಯಾಜ್ಯಗಳನ್ನೂ ಹೇಗೆ ವನ್ಯಜೀವಿಗಳು ತಮ್ಮ ಆರೋಗ್ಯದ ರಕ್ಷಣೆಗೆ ಉಪಯೋಗಿಸಿಕೊಳ್ಳುತ್ತಿವೆ ಎಂಬುದರ ಕುರಿತು ಹಲವು ಉದಾಹರಣೆಗಳು ನಮ್ಮ ಮುಂದಿವೆ. ಸ್ಕಾಟ್ಲೆಂಡಿನ ಸೇಂಟ್ ಆಂಡ್ರೂಸ್ ವಿಶ್ವವಿದ್ಯಾಲಯವು ಇತ್ತೀಚೆಗೆ ಮೆಕ್ಸಿಕೋದಲ್ಲಿ ಸಂಶೋಧನೆಯೊಂದನ್ನು ನಡೆಸಿತು. ಮಹಾನಗರಗಳಲ್ಲಿನ ಮಾಲಿನ್ಯದ ನಡುವೆ ಹೇಗೆ ಪ್ರಾಣಿಪಕ್ಷಿಗಳು ಹೊಂದಿಕೊಂಡು ಬದುಕಲು ಕಲಿಯುತ್ತಿವೆ ಎನ್ನುವುದು ಆ ಸಂಶೋಧನೆಯ ಉದ್ದೇಶ. ಆ ತಂಡಕ್ಕೆ ನಗರದ ಗುಬ್ಬಚ್ಚಿಗಳ ಗೂಡಿನ ಬಳಿ ಸೇದಿ ಎಸೆದ ಸುಟ್ಟ ಸಿಗರೇಟ್ ಫಿಲ್ಟರ್ ತುದಿಗಳ ತುಂಡುಗಳು ಕಂಡು ಬಂದವು. ಒಳಗೆ ಇಣುಕಿ ನೋಡಿದರೆ ಆ ಪುಟ್ಟ ಹಕ್ಕಿಗಳು ಸಿಗರೇಟ್ ಫಿಲ್ಟರೊಳಗಿನ ದಾರಗಳನ್ನು ಹೊರತೆಗೆದು ಪೋಣಿಸಿ ತಮ್ಮ ಗೂಡಿನೊಳಗೆ ಪೂರ್ತಿ ಬಟ್ಟೆಯ ಪರದೆಯ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದವು. ಕಾರಣವನ್ನು ಹುಡುಕಿದ ಸಂಶೋಧಕರು ಆ ಪಕ್ಷಿಗಳ ಚಾಲಾಕಿಗೆ ಬೇಸ್ತು ಬೀಳಬೇಕಾಯಿತು. ಸುಟ್ಟು ಎಸೆದ ಸಿಗರೇಟ್ ಫಿಲ್ಟರಿನೊಳಗೆ ನಿಕೋಟಿನ್ ಅಂಶವಿನ್ನೂ ಉಳಿದುಕೊಂಡಿರುತ್ತದೆ. ಅದರ ಜತೆಗಿರುವ ಮತ್ತಷ್ಟು ವಿಷಕಾರಿ ರಾಸಾಯನಿಕಗಳು ಗೂಡಿನೊಳಗೆ ಕ್ರಿಮಿ, ಹುಳು ಹುಪ್ಪಡಿಗಳು ಬಾರದಂತೆ ತಡೆಯುತ್ತವೆ. ಮಜ ಎಂದರೆ ಈ ಎಲ್ಲ ರಾಸಾಯನಿಕಗಳು ಸುಡದಿರುವ ಸಿಗರೇಟ್ ಫಿಲ್ಟರಿನೊಳಗಿರುವುದಿಲ್ಲ. ಇದನ್ನು ಚೆನ್ನಾಗಿ ಅರಿತುಕೊಂಡಿರುವ ಆ ಪುಟ್ಟ ಪಕ್ಷಿಗಳು ತಮ್ಮ ಬುದ್ಧಿಮತ್ತೆಗೆ ಮೀರಿ ಸುಟ್ಟು ಎಸೆದಿರುವ ಫಿಲ್ಟರ್ ತುದಿಗಳ ತುಂಡುಗಳನ್ನಷ್ಟೇ ಆಯ್ದುಕೊಂಡು ಗೂಡಿನಲ್ಲಿ ಬಳಸಿಕೊಂಡಿದ್ದವು. ಅಂದ ಹಾಗೆ ತಂಬಾಕಿನ ಗಿಡ ಕೂಡ ನಿಕೋಟಿನ್ಅನ್ನು ತನ್ನ ಎಲೆಗಳನ್ನು ತಿನ್ನುವ ಕೀಟಗಳನ್ನು ದೂರವಿಡಲು ಬಳಸುತ್ತದೆ. ನಾವು ಅದನ್ನೊಂದು ನಶೆಯ ಮೂಲವನ್ನಾಗಿ ಬಳಸಿಕೊಳ್ಳುತ್ತಿರುವುದು ಬೇರೆ ಮಾತು.
ವನ್ಯಜೀವಿಗಳ ನೈಸರ್ಗಿಕ ಸಂಪನ್ಮೂಲಗಳನ್ನು ಔಷಧೋಪಚಾರದಲ್ಲಿ ಬಳಸಿಕೊಳ್ಳಬೇಕೆಂಬ ಜ್ಞಾನ ವನ್ಯಜೀವಿಗಳಿಗೆ ಧಿಡೀರನೆ ಬಂದಿದ್ದಲ್ಲ. ಪರಿಣತರು ಹೇಳುವಂತೆ ವನ್ಯಜೀವಿಗಳು ಒಂದಕ್ಕೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಆರೋಗ್ಯ ಕೆಟ್ಟಾಗ ಒಂದು ಮಂಗವು ಅದ್ಯಾವುದೋ ಮರದ ತೊಗಟೆಯನ್ನು ತಿಂದು ಗುಣವಾಗಿರುವುದನ್ನು ಗಮನಿಸುವ ಮತ್ತೊಂದು ಮಂಗವು ತನಗೂ ಆ ಬಾಧೆ ಕಾಡಿದಾಗ ಅದೇ ಮರವನ್ನು ಹುಡುಕಿಕೊಂಡು ಹೋಗುತ್ತದೆ. ನಮ್ಮ ಹಲವು ನೈಸರ್ಗಿಕ ಔಷಧಿಗಳ ಬಳಕೆಯನ್ನು ವನ್ಯಜೀವಿಗಳನ್ನು ಗಮನಿಸಿ ನಾವು ಅರಿತುಕೊಂಡಿದ್ದೂ ಇದೆ. ಮಾತು ಬಾರದೇ ಅವು ಈ ಅಪೂರ್ವ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸುವುದರ ಜತೆಗೆ ಹೊಸ ಸವಾಲುಗಳನ್ನು ಎದುರಿಸಲು ಅಪ್ಡೇಟ್ ಆಗುತ್ತಿದ್ದರೆ ನಾವು ಶೀತವಾದರೆ ಔಷಧಿಯ ಹೆಸರನ್ನು ಸೂಚಿಸಲು ಕೃತಕ ಬುದ್ಧಿಮತ್ತೆಯ ಮೊರೆ ಹೋಗುತ್ತಿದ್ದೇವೆ!
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)