ಗಾಂಧಿ, ಲೋಹಿಯಾ, ಜೆ.ಪಿ. ಚಿಂತನೆಗಳು ಶಾಶ್ವತ; ಸಿದ್ದರಾಮಯ್ಯ ಅಭಿಮತ

ವಿ.ಎಸ್.ಉಗ್ರಪ್ಪಗೆ ಜೆ.ಪಿ. ಪ್ರಶಸ್ತಿ ಪ್ರದಾನ
Former Chief Minister Siddaramaiah honored former MP V.S. Ugrappa with the J.P. Award. K.C. Tyagi, V.R. Sudarshan, B.L. Shankar, and others were present.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಜೆ.ಪಿ. ಪ್ರಶಸ್ತಿ ನೀಡಿ ಗೌರವಿಸಿದರು. ಕೆ.ಸಿ.ತ್ಯಾಗಿ, ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್ ಮತ್ತಿತರರಿದ್ದರು.
Published on: 

ಬೆಂಗಳೂರು : ಮಹಾತ್ಮ ಗಾಂಧೀಜಿ, ರಾಮಮನೋಹರ ಲೋಹಿಯಾ, ವಿನೋಬಾ ಭಾವೆ ಹಾಗೂ ಜಯಪ್ರಕಾಶ್ ನಾರಾಯಣ್ (ಜೆ.ಪಿ.) ಅವರ ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ವಿಚಾರಧಾರೆಗಳು, ಹೋರಾಟಗಳ ಮೂಲಕ ಇಂದಿಗೂ ಇದ್ದಾರೆ. ಅವರ ಚಿಂತನೆಗಳು ಎಂದಿಗೂ ಶಾಶ್ವತವಾಗಿರುತ್ತವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಗಾಂಧಿ ಭವನದಲ್ಲಿ ಭಾರತ ಯಾತ್ರಾ ಟ್ರಸ್ಟ್, ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಜೆ.ಪಿ. ಜನ್ಮದಿನಾಚರಣೆ ಮತ್ತು ಜೆ.ಪಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜಕೀಯಕ್ಕೆ ಪ್ರವೇಶ ಮಾಡದೇ ಅನೇಕರು ತಮ್ಮ ಹೋರಾಟ ಮತ್ತು ಸಾಮಾಜಿಕ ಕ್ರಾಂತಿಗಳಿಂದ ನಾಯಕರಾಗಿ ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಅಂತಹವರ ಆದರ್ಶಗಳು ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡಲಿವೆ. ಜೆ.ಪಿಯವರು ತಮ್ಮ ಸಂಪೂರ್ಣ ಕ್ರಾಂತಿಯ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಯುವಜನರು ಹಾಗೂ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೇರೇಪಿಸುವ ಮೂಲಕ ಹೊಸ ಚೈತನ್ಯ ಮೂಡಿಸಿದ್ದರು. ಅವರ ವಿಚಾರಗಳಿಂದ ನಾವೆಲ್ಲರೂ ಪ್ರಭಾವಿತರಾಗಿದ್ದೇವೆ. ಅವರ ಹೆಸರಿನಲ್ಲಿ ನೀಡುತ್ತಿರುವ ಜೆ.ಪಿ. ಪ್ರಶಸ್ತಿಗೆ ಭಾಜನರಾಗಿರುವ ವಿ.ಎಸ್. ಉಗ್ರಪ್ಪನವರು ಆ ಪ್ರಶಸ್ತಿಗೆ ಯೋಗ್ಯರು ಎಂದು ಸಿದ್ದರಾಮಯ್ಯ ಅಭಿನಂದಿಸಿದರು.

ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ರಾಜಕಾರಣದ ಮೂಲವಾಗಬೇಕು. ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜಕೀಯ ಕ್ಷೇತ್ರ ಕಲುಷಿತಗೊಂಡಿದ್ದು, ಪ್ರಮಾಣಿಕರು ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಈ ವ್ಯವಸ್ಥೆಯ ವಿರುದ್ಧ ಹೋರಾಟದ ಅಗತ್ಯವಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಸಮಾರಂಭದಲ್ಲಿ ವಿ.ಎಸ್.ಉಗ್ರಪ್ಪ ಅವರಿಗೆ ಜೆ.ಪಿ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಮಾಜಿ ಸಂಸದ ಕೆ.ಸಿ.ತ್ಯಾಗಿ, ರಾಷ್ಟ್ರೀಯ ಮುಖಂಡ ಸುದೀಂದ್ರ ಬದೋರಿಯಾ, ಶಾಸಕ ಬಿ.ಆರ್.ಪಾಟೀಲ್, ಕವಯತ್ರಿ ಡಾ.ಕೆ.ಶರೀಾ, ಸಂಘಟಕ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Dignitaries paid floral tributes to the portrait of JP on the occasion of his birth anniversary.
ಜೆಪಿ ಜನ್ಮದಿನದ ಹಿನ್ನೆಲೆಯಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಮಾಣಿಕರು, ಹೋರಾಟಗಾರರು ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ ಈ ಅನ್ಯಾಯ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕು. ದೇಶದಲ್ಲಿ 3ನೇ ಸಂಗ್ರಾಮದ ಅಗತ್ಯವಿದೆ. ಇದಕ್ಕೆ ಸಿದ್ದರಾಮಯ್ಯನವರೇ ಮುಂದಾಳತ್ವ ವಹಿಸಲಿ.
ವಿ.ಎಸ್.ಉಗ್ರಪ್ಪ, ಜೆ.ಪಿ. ಪ್ರಶಸ್ತಿ ಪುರಸ್ಕೃತ

ಸಮಾಜವಾದಿಗಳು ಅಧಿಕಾರ ರಾಜಕಾರಣದಲ್ಲಿ ಯಶಸ್ವಿಯಾಗದಿದ್ದರೂ, ದೇಶಕ್ಕೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಸಂತೆಯೊಳಗಿದ್ದು ಸಂತರಂತೆ ಕೆಲಸ ಮಾಡಿದವರಲ್ಲಿ ಜೆ.ಪಿ., ಗಾಂಧಿ, ಭಾವೆಯವರ ಪಾತ್ರ ಪ್ರಮುಖವಾಗಿವೆ.

ಬಿ.ಎಲ್.ಶಂಕರ್, ಮಾಜಿ ಸಭಾಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net