_1769624743921.webp?w=480&auto=format%2Ccompress&fit=max)
_1769624743921.webp?w=480&auto=format%2Ccompress&fit=max)
ಶರೀರದಲ್ಲಿ ಬೊಜ್ಜು ಉಂಟಾಗುವುದಕ್ಕೆ ಆಹಾರ ಮಾತ್ರವಲ್ಲ, ವ್ಯಾಯಾಮ ಮಾಡದೆ ಇರುವುದೇ ಮೊದಲ ಕಾರಣ. ತಿಂದಿರುವ ಆಹಾರಕ್ಕೆ ಸಮನಾದ ಕಾರ್ಯಚಟುವಟಿಕೆ ಬೇಕು. ಕೂಲಿಕೆಲಸ ಮಾಡುವವರು ಹೆಚ್ಚು ಉಣ್ಣುತ್ತಾರೆ ಎಂದೆನಿಸಿದರೂ ಅದಕ್ಕಿಂತ ಹೆಚ್ಚು ಶ್ರಮದಾಯಕ ದೈಹಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ಅವರ ದೇಹದತ್ತ ಬೊಜ್ಜು ಇಣುಕಿಯೂ ನೋಡುವುದಿಲ್ಲ. ಹಗಲು ನಿದ್ರೆ ಇನ್ನೊಂದು ಕಾರಣ. ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದರಿಂದ ಕಫವು ವೃದ್ಧಿಯಾಗಿ ದೇಹತೂಕ ಹೆಚ್ಚುತ್ತಾ ಹೋಗುತ್ತದೆ. ಕಫದೋಷವನ್ನು ಹೆಚ್ಚಿಸುವ ಆಹಾರ ವಿಹಾರಗಳು ಮೇದೋರೋಗಕ್ಕೆ ಮತ್ತೊಂದು ಕಾರಣ. ಸಿಹಿರುಚಿಯ ಅನ್ನಪಾನಾದಿಗಳು ಮತ್ತು ಸಿಹಿತಿಂಡಿಗಳು, ಸ್ನೇಹ ಅಂಶ ಹೆಚ್ಚಿರುವ ಎಣ್ಣೆಯ ತಿಂಡಿತಿನಿಸುಗಳನ್ನೂ ಆಯುರ್ವೆದ ಕಾರಣ ಪಟ್ಟಿಯಲ್ಲಿ ಸೇರಿಸಿದೆ. ಅತಿಯಾಗಿ ಆಹಾರ ಸೇವಿಸುವುದಂತೂ ನೇರವಾಗಿ ಮೇದೋರೋಗವನ್ನು ತಂದೊಡ್ಡುತ್ತದೆ. ಮಾನಸಿಕ ಒತ್ತಡಗಳಿದ್ದಾಗಲೂ ತಾತ್ಕಾಲಿಕ ಮನಶಾಂತಿಗಾಗಿ ಅತಿಯಾಗಿ, ಆಗಾಗ ತಿನ್ನುವ ಅಭ್ಯಾಸ ಆಗುವುದಿದೆ. ಇದರಿಂದಲೂ ಸ್ಥೂಲದೇಹ ಕಟ್ಟಿಟ್ಟ ಬುತ್ತಿ. ದೇಹಕ್ಕೆ ಕಡಿಮೆ ಕೆಲಸ ನೀಡುವ ಆರಾಮವೇ ಪ್ರಧಾನವಾಗಿರುವ ಆಧುನಿಕ ಜೀವನ ಶೈಲಿಯಿಂದಾಗಿ ಸ್ಥೂಲಕಾಯವನ್ನು ಹೆಚ್ಚು ಜನರು ಹೊಂದುತ್ತಿರುವುದು ಆತಂಕಕಾರಿ ಬೆಳವಣಿಗೆ.
ಮೇದಸ್ಸಿನಿಂದ ಆವೃತವಾದ ವಾತವು ಉದರ ಸೇರಿ ಅಲ್ಲಿ ಅಗ್ನಿಯನ್ನು ಪ್ರಚೋದಿಸಿ ಆಹಾರವನ್ನು ಶೀಘ್ರವಾಗಿ ಜೀರ್ಣಿಸುವುದರಿಂದ ಬೇಗನೆ ಹಸಿವೆ ಮತ್ತೆ ಉಂಟಾಗಿ ಪುನಃ ಆಹಾರ ಸೇವಿಸುವ ಪ್ರಬಲ ಇಚ್ಛೆಯಾಗುತ್ತದೆ. ಆಗ ಆಹಾರ ಸೇವಿಸದೆ ತಡೆದರೆ ಬಲಹೀನತೆಯೂ ಸೇರಿ ತೀವ್ರ ತೊಂದರೆ ಉಂಟುಮಾಡುತ್ತದೆ. ಆಹಾರ ಸೇವಿಸದೇ ಇದ್ದಲ್ಲಿ ಕಾಡ್ಗಿಚ್ಚಿನಿಂದ ಅರಣ್ಯವೇ ಭಸ್ಮವಾಗಿ ಹೋಗುವಂತೆ ಅಗ್ನಿ ಹಾಗೂ ವಾಯು ಎರಡೂ ಸೇರಿಕೊಂಡು ದೇಹವನ್ನು ದಹಿಸುತ್ತವೆ. ಮಿತಿಮೀರಿ ಆಹಾರ ಸೇವಿಸುತ್ತಾ ಮೇದ, ಮಾಂಸಗಳು ಅತಿಯಾಗಿ ವೃದ್ಧಿಯಾಗಿ ಪೃಷ್ಠ ಭಾಗ, ಹೊಟ್ಟೆ ಹಾಗೂ ಸ್ತನ ಪ್ರದೇಶಗಳಲ್ಲಿ ಶೇಖರಗೊಳ್ಳುತ್ತಾ ಸಾಗಿ ಕಾಲಕ್ರಮೇಣ ಶರೀರವನ್ನೇ ಆವರಿಸುತ್ತದೆ.
ಉಳಿದ ಧಾತುಗಳು ಎಷ್ಟೇ ಹೆಚ್ಚಾದರೂ ಮೇದೋ ಧಾತುವಿನಷ್ಟು ಬೆಳೆಯುವುದಿಲ್ಲ. ಒಂದೇ ಧಾತು ಅತ್ಯಧಿಕವಾಗಿ ಹೆಚ್ಚಾಗುವುದರಿಂದ ದೇಹದ ಅಂಗಾಂಗಗಳಲ್ಲಿ ಅಸಮತೋಲನ ಉಂಟಾಗಿ ಆಯಸ್ಸಿಗೆ ಹಾನಿಯಾಗುತ್ತದೆ. ಮೇದೋರೋಗದಲ್ಲಿ ಶರೀರದ ಅಂಗಾಂಗಗಳ ಶಿಥಿಲತೆಯಿಂದ, ದೇಹದ ಗುರುತ್ವದಿಂದ ಚಲನೆಯೇ ಕಡಿಮೆಯಾಗುತ್ತದೆ, ನಿಧಾನವಾಗುತ್ತದೆ. ಶುಕ್ರವು ಕಡಿಮೆಯಾಗಿ ಶುಕ್ರಹೀನತೆ ಹಾಗೂ ಬಲಹೀನತೆಯಿಂದ ಲೈಂಗಿಕಕ್ರಿಯೆ ಕಷ್ಟಕರವಾಗುತ್ತದೆ. ಧಾತು ಅಸಮಾನತೆಯಿಂದ ದೌರ್ಬಲ್ಯ ಉಂಟಾಗುತ್ತದೆ. ಮೇದಸ್ಸು ಹಾಗೂ ಕಫ ಸೇರಿಕೊಂಡು ವ್ಯಾಯಾಮ ಮಾಡಲು ಅನಾಸಕ್ತಿ ಹಾಗೂ ಅತಿಬೆವರಿಗೆ ಕಾರಣವಾಗುತ್ತದೆ. ಮೇದೋರೋಗದ ಇನ್ನೊಂದು ಗಮನಾರ್ಹ ಲಕ್ಷಣವೆಂದರೆ ತೀಕ್ಷ್ಣವಾದ ಅಗ್ನಿ! ಮೊದಲೇ ದೇಹತೂಕ ಕಾಡುತ್ತಿರುತ್ತದೆ. ಅದರೊಂದಿಗೆ ಹಸಿವೂ ಹೆಚ್ಚು! ಇದರಿಂದಾಗಿ ದೇಹತೂಕ ಏರುತ್ತಾ ಹೋಗುತ್ತದೆ. ಜೊತೆಗೆ ಬಾಯಾರಿಕೆಯೂ ಹೆಚ್ಚಾಗುತ್ತದೆ. ಚುರುಕುತನ ಕಡಿಮೆಯಾಗಿ, ದೇಹಾಲಸ್ಯ ಹೆಚ್ಚಾಗಿ ನಿದ್ರೆಯೂ ಹೆಚ್ಚು ಬರುತ್ತದೆ. ಗೊರಕೆ ಹೊಡೆಯಲು ಆರಂಭಿಸುತ್ತಾರೆ. ಸ್ವಲ್ಪ ನಡೆದರೂ ಏದುಸಿರು, ಉಸಿರುಗಟ್ಟುವಿಕೆಯ ಅನುಭವವಾಗುತ್ತದೆ.
ಸ್ಥೌಲ್ಯವು ಮಧುಮೇಹದ ಪೂರ್ವಚಿಹ್ನೆಯಾಗಿಯೂ ಕಾಣಿಸಿಕೊಳ್ಳುತ್ತದೆ ಎಂದು ಆಯುರ್ವೆದವು ಹೇಳಿದೆ. ಜಠರವೇ ಉದ್ಭವ ಸ್ಥಾನ. ವಾತ ಪಿತ್ತ ಕಫ ಮೂರೂ ದೋಷಗಳ ಪಾತ್ರವಿದ್ದು ಮಾಂಸ ಹಾಗೂ ಮೇದೋಧಾತುಗಳು ರೋಗೋತ್ಪತ್ತಿಯಲ್ಲಿ ಪ್ರಮುಖವಾಗಿ ಕಾರ್ಯವೆಸಗುತ್ತವೆ. ದೇಹತೂಕವು ಬಹುಬೇಗನೆ ಅನಾಯಾಸವಾಗಿ ಹೆಚ್ಚಿಬಿಡುತ್ತದೆ. ಆರೋಗ್ಯ ಪ್ರಾಪ್ತಿಗೆ ಬೊಜ್ಜು ಕರಗಿಸುವುದು ಅನಿವಾರ್ಯ. ಸಮತೂಕದ ಶರೀರ ಆರೋಗ್ಯದ, ಸ್ವಾಸ್ಥ್ಯದ ಸಂಕೇತ ಹಾಗೂ ಪ್ರತಿಬಿಂಬ. ಸ್ಥೌಲ್ಯದ ಪರಿಹಾರ ಮಾರ್ಗಗಳು ಹಾಗೂ ನಿವಾರಣೆಯ ಉಪಾಯಗಳನ್ನು ತಿಳಿದುಕೊಳ್ಳುವುದು ಆರೋಗ್ಯ ಅಪೇಕ್ಷೆಯಿಂದಷ್ಟೇ ಅಲ್ಲ, ಶರೀರ ಸೌಂದರ್ಯದ ದೃಷ್ಟಿಯಿಂದಲೂ ಒಳಿತು.