ರಾಜ್ಯದಲ್ಲಿ ತೀವ್ರ ಮಳೆಯಾಗದೆ ರೈತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಕೆಂಪೇಗೌಡ ರೈತ ಸಂಘದಿಂದ ತಹಸೀಲ್ದಾರ್ ಕೆ. ಆರ್. ರಂಜಿತ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಕರಲಮಂಗಲ ಮಂಜುನಾಥ್, ಯುವ ಘಟಕ ಜಿಲ್ಲಾಧ್ಯಕ್ಷ ಹಾರೋಹಳ್ಳಿ ರಮೇಶ್, ತಾಲೂಕು ಅಧ್ಯಕ್ಷ ಎಸ್. ಲಿಂಗರಾಜು, ಆರ್. ಜುಟ್ನಹಳ್ಳಿ ದಿನೇಶ್, ಮಂಜುನಾಥ್,ರಾಜಣ್ಣ ಇತರರು ಇದ್ದರು.
Published on:
Copied
Follow Us
ಮಾಗಡಿ :ರಾಜ್ಯದಲ್ಲಿ ತೀವ್ರ ಮಳೆಯಾಗದೆ ರೈತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಕೆಂಪೇಗೌಡ ರೈತ ಸಂಘದಿಂದ ತಹಸೀಲ್ದಾರ್ ರಂಜಿತ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಕೆಂಪೇಗೌಡ ರೈತ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಾಳೇನಹಳ್ಳಿ ಶಿವಣ್ಣಗೌಡ ಮಾತನಾಡಿ, ರಾಜ್ಯಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆ ಮಾಡಿ ತಿಂಗಳುಗಳೇ ಕಳೆದರೂ ಸೂಕ್ತ ಮಳೆಯಿಲ್ಲದೆ ಬೆಳೆ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ತೀವ್ರ ಅಭಾವ ಎದುರಾಗಿದೆ ಎಂದು ತಿಳಿಸಿದರು.
ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗುತ್ತಿದ್ದು, ರೈತರು ತೀವ್ರ ಆರ್ಥಿಕ ನಷ್ಟದ ಭೀತಿಗೆ ಸಿಲುಕಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಎದುರಾಗಿರುವ ಭೀಕರ ಪರಿಸ್ಥಿತಿ ಬಗ್ಗೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಸಂಪೂರ್ಣ ಗೊತ್ತಿದೆ. ಈ ಹಿಂದೆ ಹೇಮಾವತಿ ನೀರು ಹರಿಸುವ ಭರವಸೆ ನೀಡಿದ್ದರಿಂದ ಹಾಗೂ ಅವರ ಮೇಲಿನ ಗೌರವದಿಂದ ನಾವು ಪ್ರತಿಭಟನೆ, ಹೋರಾಟ ತಾತ್ಕಾಲಿಕವಾಗಿ ತಡೆಹಿಡಿದಿದ್ದೆವು. ಆದರೆ, ಈಗ ಪರಿಸ್ಥಿತಿ ಮೀರಿದ್ದು, ಸರ್ಕಾರ ಹಾಗೂ ಶಾಸಕರು ತಕ್ಷಣ ಸ್ಪಂದಿಸಬೇಕಿದೆ ಎಂದರು.
ರಾಜ್ಯ ಕೆಂಪೇಗೌಡ ರೈತ ಸಂಘಟನೆ ಯುವ ಅಧ್ಯಕ್ಷ ಆರ್. ಜುಟ್ನಹಳ್ಳಿ ದಿನೇಶ್ ಮಾತನಾಡಿ, ಈ ಭಾರಿ ತೀವ್ರ ಮಳೆ ಅಭಾವ ಉಂಟಾಗಿರುವುದರಿಂದ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬೆಳೆಗಳಿಲ್ಲದೆ ಹಾಗೂ ಜಾನುವಾರುಗಳಿಗೆ ಮೇವಿಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಕರಲಮಂಗಲ ಮಂಜುನಾಥ್, ಯುವ ಘಟಕ ಜಿಲ್ಲಾಧ್ಯಕ್ಷ ಹಾರೋಹಳ್ಳಿ ರಮೇಶ್, ತಾಲೂಕು ಅಧ್ಯಕ್ಷ ಎಸ್. ಲಿಂಗರಾಜು, ಉಪಾಧ್ಯಕ್ಷ ಗೊಲ್ಲಹಳ್ಳಿ ರಾಜಣ್ಣ, ಕೃಷ್ಣಮೂರ್ತಿ, ಸುರೇಶ್, ಚಲುವೇಗೌಡ, ರಿಯಾಜ್, ರಾಮಣ್ಣ, ವೆಂಕಟಪ್ಪ, ಹುಚ್ಚೇಗೌಡ ಇತರರು ಇದ್ದರು.