ವಿದ್ಯುತ್ ಖಾಸಗೀಕರಣವನ್ನು ಸರ್ಕಾರ ತಕ್ಷಣವೇ ಕೈಬಿಡಲಿ

ದೇವರಹಿಪ್ಪರಗಿ ಪಟ್ಟಣದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತಪರ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ  ಮನವಿ ಸಲ್ಲಿಸಿದರು. ರೆಹಮಾನ ಕನಕಾಲ್, ರಾಮು ದೇಸಾಯಿ, ಅಜೀಜ್ ಯಲಗಾರ, ಮುನ್ನಾ ಮಳಖೇಡ ಮತ್ತಿತರರಿದ್ದರು.
ದೇವರಹಿಪ್ಪರಗಿ ಪಟ್ಟಣದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತಪರ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್ ನಿಂಗಪ್ಪ ಬಿರಾದಾರಗೆ ಮನವಿ ಸಲ್ಲಿಸಿದರು. ರೆಹಮಾನ ಕನಕಾಲ್, ರಾಮು ದೇಸಾಯಿ, ಅಜೀಜ್ ಯಲಗಾರ, ಮುನ್ನಾ ಮಳಖೇಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರೈತ ಸಂಘ, ವಿವಿಧ ಸಂಘಟನೆಗಳ ಜಂಟಿ ಹೋರಾಟ
  • ತಹಸೀಲ್ದಾರ್‌ಗೆ ಮನವಿ
  • ನೂರಾರು ಜನ ಭಾಗಿ
ದೇವರಹಿಪ್ಪರಗಿ : ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಪ್ರಗತಿಪರ, ಕನ್ನಡಪರ, ದಲಿತಪರ ಸಂಘಟನೆಗಳು ಜಂಟಿಯಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದ ಶುಕ್ರವಾರ ಹೊಸನಗರದಲ್ಲಿರುವ ಟಿಪ್ಪುಸುಲ್ತಾನ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು, ಸಾರ್ವಜನಿಕರು ಮೆರವಣಿಗೆಯೊಂದಿಗೆ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ದಿಕ್ಕಾರ ಕೂಗುತ್ತ ರಾಜ್ಯ ಹೆದ್ದಾರಿ ಮೂಲಕ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮಾರ್ಗವಾಗಿ ಡಾ. ಅಂಬೇಡ್ಕರ್ ವತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ಪಾದಯಾತ್ರೆಯ ಮುಖಾಂತರ ತಹಸೀಲ್ದಾರ್ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರಾಜ್ಯದ ರೈತರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು. ವಿದ್ಯುತ್ ಖಾಸಗೀಕರಣದಿಂದ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ. ಇಲ್ಲಿಯವರೆಗೆ ಕೃಷಿ ಚಟುವಟಿಕೆಗಳಿಗೆ ಉಚಿತವಾಗಿ ವಿದ್ಯುತ್ ದೊರಕುತ್ತಿತ್ತು. ಖಾಸಗಿಕರಣ ಮಾಡಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಲಕ್ಷಾಂತರ ರೂ. ನೀಡಿ ವಿದ್ಯುತ್ ಪರಿವರ್ತಕ ಪಡೆಯ ಬೇಕಾಗುತ್ತದೆ. ದೇಶದಲ್ಲಿ ಬಿಎಸ್‌ಎನ್‌ಎಲ್ ಸೇರಿ ಹತ್ತು ಹಲವು ಜನೋಪಯೋಗಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿರುವುದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಅಧಿಕಾರಿಗಳು, ರೈತರ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ಶಂಕರಗೌಡ ಪಾಟೀಲ ಹಾಗೂ ಅಜೀಜ್ ಯಲಗಾರ ಮಾತನಾಡಿ, ಎಲ್ಲ ಸರ್ಕಾರಗಳು ರೈತರ ಮೇಲೆಯೇ ಬ್ರಹ್ಮಾಸ ಪ್ರಯೋಗಿಸುತ್ತಿವೆ. ವಿದ್ಯುತ್ ಖಾಸಗೀಕರಣದಿಂದ ರೈತರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ವಿದ್ಯುತ್ ಇಲ್ಲದೆ ರೈತರ ಗೋಳು ಕೇಳುವವರು ಯಾರು? ಎನ್ನುವಂತಾಗುತ್ತದೆ. ಇದರಿಂದ ರಾಜ್ಯದಲ್ಲಿ ಆತ್ಮಹತ್ಯೆಗೆ ಪ್ರೋತ್ಸಾಹಿಸಿದಂತಾಗುತ್ತದೆ. ಅದಕ್ಕಾಗಿ ತಕ್ಷಣವೇ ವಿದ್ಯುತ್ ಖಾಸಗೀಕರಣ ಕೈಬಿಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ರಾಮು ದೇಸಾಯಿ, ಅಜೀಜ್ ಯಲಗಾರ, ಮುನ್ನಾ ಮಳಖೇಡ, ಸೋಮು ಹಿರೇಮಠ, ಕರವೇ ಅಧ್ಯಕ್ಷ ರೆಹಮಾನ ಕನಕಾಲ್, ಸಂಪತ್ ಜಮಾದಾರ, ಕಾಶೀನಾಥ ಕೋರಿ, ಸಿದ್ದನಗೌಡ ಹರನಾಳ, ಕಾಶೀನಾಥ ಬಿರಾದಾರ, ಮಲ್ಲಪ್ಪ ಬಿರಾದಾರ, ಹಣಮಂತ್ರಾಯಗೌಡ ಬಿರಾದಾರ, ರಾಜು ನಾಟೀಕಾರ, ಚಂದ್ರಕಾಂತ ಕುಂಬಾರ, ಯಲ್ಲಪ್ಪ ನಾಲತವಾಡ, ಗುರು ಜಡಿಗೊಂಡ ಸೇರಿದಂತೆ ದೇವರಹಿಪ್ಪರಗಿ ಪಟ್ಟಣದ ಮುತ್ತಲಿನ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net