ಶ್ರೀನಿವಾಸಪುರ: ಗುರಿಯಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತೆ. ಬದುಕಿನಲ್ಲಿ ಗುರಿ ಇಟ್ಟುಕೊಂಡು ಅದರ ಸಿದ್ಧಿಗಾಗಿ ಶ್ರಮಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ವಾರದಿ ಫೌಂಡೇಷನ್ ಅಧ್ಯಕ್ಷ ನಾಗರಾಜ್ ತಿಳಿಸಿದರು.goal
ತಾಲೂಕಿನ ಇಮರಕುಂಟೆ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಗುರಿ ಮುಟ್ಟಬೇಕಾದರೆ ಅಭ್ಯಾಸ ಮಾಡಬೇಕು. ಪಾಲಕರ ಮತ್ತು ಶಿಕ್ಷಕಕರ ಮೇಲೆ ಗುರುಭಕ್ತಿ ಮೂಡಬೇಕು ಎಂದು ತಿಳಿಸಿದರು.
ವಾರದಿ ಫೌಂಡೇಷನ್ ಕಾರ್ಯಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪ್ರತಿಭಾನ್ವಿತ, ನುರಿತ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಭೋದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯೆ ಕಲಿತು ಶಾಲೆಗೆ ಕೀರ್ತಿ ತರಬೇಕು ಎಂದರು.
ಮುಖ್ಯಶಿಕ್ಷಕ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿ ಹೊಂದಲು ಸಹಕಾರ ಮಾಡಬೇಕು. ಶಿಕ್ಷಣಕ್ಕೆ ಬೇಕಾದ ಸಾಮಗ್ರಿಗಳ ಕೊಡುಗೆ ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.