

ಬೆಂಗಳೂರು : ಮನುಷ್ಯನ ಪತನ ಹಾಗೂ ಉತ್ಥಾನದ ಲಕ್ಷಣಗಳನ್ನು ನಮ್ಮಲ್ಲೇ ಕಾಣಬಹುದು. ನಮ್ಮ ಬುದ್ಧಿ ಮತ್ತು ಆಚರಣೆಗಳು ಯಾವ ದಿಕ್ಕಿನಲ್ಲಿ ಸಾಗಿವೆ ಎಂಬುದನ್ನು ಅವಲೋಕಿಸಿಕೊಂಡರೆ ಭವಿಷ್ಯವನ್ನು ಅರಿತುಕೊಳ್ಳಬಹುದು ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ದೇವತೆಗಳು ಕೋಲನ್ನು ತೆಗೆದುಕೊಂಡು ಜೀವಿಗಳಿಗೆ ದಂಡನೆ ಮಾಡುವುದಿಲ್ಲ. ಯಾರನ್ನಾದರೂ ಉದ್ದಾರವಾಗಿಸಬೇಕೆಂದಾಗ ದೇವರು ಜೀವಿಗೆ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುತ್ತಾರೆ. ಹಾಗೆಯೇ ಶಿಕ್ಷೆ ಕೊಡಬೇಕಾದಾಗ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿಯು ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದಲ್ಲಿರುವ ಶಾಖಾಮಠದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ 9ನೇ ದಿನದ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನ ನೀಡಿದರು.
ನಾವು ಸರಿದಾರಿಯಲ್ಲಿದ್ದರೆ ದೇವರು ನಮ್ಮನ್ನು ಅನುಗ್ರಹಿಸುತ್ತಿದ್ದಾನೆ ಎಂದರ್ಥ. ಅದೇ ತಪ್ಪು ದಾರಿಯಲ್ಲಿ ಸಾಗುತ್ತಿದ್ದರೆ ದೇವರು ಅವಕೃಪೆಗೆ ಒಳಗಾಗಿದ್ದೇವೆ ಎಂದರ್ಥ. ದೇವರು ನಮಗೆ ಶಿಕ್ಷೆ ನೀಡಬೇಕೆಂದರೆ ಸಾಮಾನ್ಯರಂತೆ ಕೋಲು ತೆಗೆದುಕೊಂಡು ಹೊಡೆಯುವುದಿಲ್ಲ. ಬದಲಾಗಿ ನಮ್ಮ ಬುದ್ದಿಯನ್ನು ಕೆಡಿಸುತ್ತಾನೆ. ಅದರಿಂದ ಮನುಷ್ಯನ ಪತನ ಆರಂಭವಾಗುತ್ತದೆ. ಸೃಷ್ಟಿಯನ್ನು ಯಾವಾಗಲೂ ಕೆಡಿಸಬಾರದು. ಸೃಷ್ಟಿ ಶಂಕರವಾದರೆ, ಸೃಷ್ಟಿಯಲ್ಲಿ ಮನುಷ್ಯನ ಹಸ್ತಕ್ಷೇಪ ಸಂಕರವಾಗಲಿದೆ. ನೈಸರ್ಗಿಕ ಪ್ರಕ್ರಿಯೆ ಯಾವಾಗಲು ಸುಂದರವಾಗಿದ್ದು, ಅದರಲ್ಲಿ ನಾವು ಹಸ್ತಕ್ಷೇಪವನ್ನು ಮಾಡಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಮಣ್ಯ, ಶಿಲ್ಪಿ ಜಿ.ಎಲ್.ಭಟ್, ಉದ್ಯಮಿ ಅರವಿಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಸರಸ್ವತೀ ಸೂಕ್ತ ಹವನ, ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ, ರಾಜರಾಜೇಶ್ವರೀ ಪೂಜೆ ನಡೆಯಿತು.