ಇ-ಸ್ವತ್ತು ಸರಿಯದ ಗ್ರಹಣ: ಆಸ್ತಿ ದಾಖಲೆ ಡಿಜಿಟಲೀಕರಣದ ನೆಪ, ಸೇವೆ ಅಯೋಮಯ; ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಸಿಗದ ಪ್ರಯೋಜನ!

ಸ್ಥಿರಾಸ್ತಿಗಳ ಖಾತಾ ವಿತರಣೆ ಮತ್ತು ಅಧಿಕಾರ ವರ್ಗಾವಣೆ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡುವ ಸಲುವಾಗಿ ರಾಜ್ಯ ಸರ್ಕಾರ ಪರಿಚಯಿಸಿರುವ ಇ-ಆಸ್ತಿ, ಇ-ಸ್ವತ್ತು, ನಂಬಿಕೆ ನಕ್ಷೆ ಮತ್ತು ಕಾವೇರಿ 2.0 ತಂತ್ರಾಂಶ ಬಂದು ವರ್ಷಗಳೇ ಕಳೆದರೂ ದೋಷಮುಕ್ತವಾಗಿಲ್ಲ. ಒಂದಿಲ್ಲೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಸಾರ್ವಜನಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.
Representative image
ಸಾಂದರ್ಭಿಕ ಚಿತ್ರ
Published on: 

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸ್ಥಿರಾಸ್ತಿಗಳ ಖಾತಾ ವಿತರಣೆ ಮತ್ತು ಅಧಿಕಾರ ವರ್ಗಾವಣೆ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡುವ ಸಲುವಾಗಿ ರಾಜ್ಯ ಸರ್ಕಾರ ಪರಿಚಯಿಸಿರುವ ಇ-ಆಸ್ತಿ, ಇ-ಸ್ವತ್ತು, ನಂಬಿಕೆ ನಕ್ಷೆ ಮತ್ತು ಕಾವೇರಿ 2.0 ತಂತ್ರಾಂಶ ಬಂದು ವರ್ಷಗಳೇ ಕಳೆದರೂ ದೋಷಮುಕ್ತವಾಗಿಲ್ಲ. ಒಂದಿಲ್ಲೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಸಾರ್ವಜನಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.

ಅಕ್ರಮ ಬಡಾವಣೆ (ರೆವಿನ್ಯೂ ಲೇಔಟ್) ತಡೆಗಟ್ಟುವ ಸಲುವಾಗಿ 2024ರ ಅಕ್ಟೋಬರ್​ನಿಂದ ಸ್ಥಿರಾಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಲಾಯಿತು. ಅದಕ್ಕಾಗಿ ಕಾಯ್ದೆಗೂ ತಿದ್ದುಪಡಿ ತರಲಾಯಿತು. ಇದೇ ವೇಳೆ ಸ್ಥಿರಾಸ್ತಿಗಳಿಗೆ ಇ-ಖಾತಾ ವಿತರಣೆ ಜತೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶಕ್ಕೆ ದತ್ತಾಂಶ ಸಂಯೋಜನೆ ಮಾಡಲಾಯಿತು. ಇದೇ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೇರಿದಂತೆ ಮಹಾನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ಖಾತಾ ನೀಡುವ ಸಲುವಾಗಿ ಇ-ಆಸ್ತಿ ತಂತ್ರಾಂಶವನ್ನು ಸರ್ಕಾರ ಪರಿಚಯಿಸಿದೆ. ಇತ್ತೀಚೆಗೆ ಜನರಿಗೆ ಮತ್ತಷ್ಟು ಸುಲಭವಾಗಿ ಖಾತಾ ವಿತರಿಸುವ ಸಲುವಾಗಿ ಇ-ಆಸ್ತಿ 2.0ಕ್ಕೆ ಅಪ್​ಗ್ರೇಡ್ ಮಾಡಿ ಹೊಸದಾಗಿ ಚಾಲನೆ ಸಹ ನೀಡಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದೆ ದೋಷಗಳು ಮುಂದುವರಿದಿವೆ.

ಸರ್ಕಾರಿ ಸ್ವತ್ತೆಂದು ಉಲ್ಲೇಖ: ಬೆಂಗಳೂರು ಒಂದರಲ್ಲಿಯೇ 35 ಲಕ್ಷಕ್ಕೂ ಹೆಚ್ಚು ಆಸ್ತಿ ಇದ್ದು, ಈ ಪೈಕಿ 24 ಲಕ್ಷ ಆಸ್ತಿ ದಾಖಲೆ ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾ ವಿತರಿಸಲಾಗಿದೆ. 11 ಲಕ್ಷ ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಪಡೆದಿದ್ದು, ಉಳಿದವರು ಇ-ಖಾತಾ ಪಡೆಯಬೇಕಾಗಿದೆ. ಇದರಲ್ಲಿ ಕೆಲವರು ಶೇ.5 ಶುಲ್ಕ

ಪಾವತಿ ಮಾಡಿ ಬಿ- ಖಾತಾಯಿಂದ ಎ-ಖಾತಾಗೆ ವರ್ಗಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುವ ಆಸ್ತಿಗಳು ಸಂಪೂರ್ಣ ಸರ್ಕಾರದ ಸ್ವತ್ತು ಎಂದು ಇ-ಆಸ್ತಿಯಲ್ಲಿ ತಪ್ಪಾಗಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆದರಿದ್ದಾರೆ.

ಜಿಬಿಎ ಜಂಟಿ ಆಯುಕ್ತರ ಲಾಗಿನ್​ನಲ್ಲಿ ಉಳಿದುಕೊಂಡಿದ್ದು, ವಿಲೇವಾರಿಗೆ ಸಾಧ್ಯವಾಗುತ್ತಿಲ್ಲ. ಇ-ಆಸ್ತಿ 2.0 ವೆಬ್​ಸೈಟ್ ತಾಂತ್ರಿಕ ಸಮಸ್ಯೆಗಳು ಸೆ.25ರ ವೇಳೆ ಸರಿಹೋಗಲಿವೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿತ್ತು. ಆದರೂ ವೆಬ್​ಸೈಟ್ ದೋಷಮುಕ್ತವಾಗದೆ ಆಸ್ತಿಗಳ ಮಾರಾಟ, ಸಾಲಸೌಲಭ್ಯ ಪಡೆಯಲು ಸಾಧ್ಯವಾಗದೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾವೇರಿ 2.0ಗೂ ಎಫೆಕ್ಟ್: ಉಪ ನೋಂದಣಿ ಕಚೇರಿಯ ಕಾವೇರಿ 2.0 ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಸರ್ವೆ ಸಾಮಾನ್ಯವಾಗಿ ಬಿಟ್ಟಿವೆ. ಇತ್ತೀಚೆಗೆ ಇ-ಆಸ್ತಿ 2.0 ಮತ್ತು ಇ-ಸ್ವತ್ತು 2.0 ವೆಬ್​ಸೈಟ್​ಗಳ ದತ್ತಾಂಶ ಕಾವೇರಿ ತಂತ್ರಾಂಶಕ್ಕೆ ಲಿಂಕ್ ಆಗುವ ಜತೆಗೆ ದೋಷಗಳು ಸಂಯೋಜನೆಯಾಗಿವೆ. ಹೊಸ ಖಾತಾಗಳು ಕಾವೇರಿ 2.0ರಲ್ಲಿ ಸಿಗುತ್ತಿಲ್ಲ ಸಿಕ್ಕರೂ ಇ-ಖಾತಾಗಳಲ್ಲಿ ಲೋಪಗಳು ಹೆಚ್ಚಾಗಿದ್ದು, ರಿಜಿಸ್ಟ್ರೇಷನ್​ಗೆ ಕಾನೂನು ತೊಡಕು ಉಂಟಾಗುತ್ತಿದೆ. ಸಾರ್ವಜನಿಕರು ಪರದಾಡುವಂತೆ ಆಗಿದೆ.

ಭರವಸೆ ನೀಡದ ನಂಬಿಕೆ ನಕ್ಷೆ 2.0

4000 ಚದರಡಿವರೆಗಿನ (50/80 ಅಡಿ ಸೈಟ್) ವಸತಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿಗೆ ಆನ್​ಲೈನ್​ನಲ್ಲಿ ಸೇವೆ ಒದಗಿಸಲು ನಂಬಿಕೆ ನಕ್ಷೆ 2.0 ತಂತ್ರಾಂಶ ಹೊರತಂದಿದ್ದು, ಕೇವಲ 30 ನಿಮಿಷದಲ್ಲಿ ನಕ್ಷೆ ಸಿಗಲಿದೆ ಎನ್ನಲಾಗಿದೆ. ಆದರೆ, 600 ಚದರಡಿ (20/30 ಅಡಿ) ಸೈಟ್​ನಲ್ಲಿ ಸೆಟ್​ಬ್ಯಾಕ್ ಬಿಟ್ಟು ನಕ್ಷೆ ಅಪ್​ಲೋಡ್ ಮಾಡುವಂತೆ ತಾಕೀತು ಮಾಡಲಾಗಿದೆ. 2 ಅಡಿ ಸೆಟ್​ಬ್ಯಾಕ್ ಬಿಟ್ಟು ಉಳಿದ ಸ್ಥಳದಲ್ಲಿ ಕಟ್ಟಡ ನಿರ್ವಣಕ್ಕೆ ಕಷ್ಟಸಾಧ್ಯವಾಗಿದೆ. ಸರ್ಕಾರವೇ ಅಭಿವೃದ್ಧಿಪಡಿಸಿರುವ ಬಿಡಿಎ, ಕೆಎಚ್​ಬಿ ಲೇಔಟ್​ನಲ್ಲಿಯೂ 600 ಚದರಡಿ ಸೈಟ್​ಗಳು ಸಾವಿರಾರು ಇದ್ದು, ಎಲ್ಲರಿಗೂ ಸಮಸ್ಯೆ ಎದುರಾಗಿದೆ. ಒಸಿ, ಸಿಸಿ ವಿನಾಯಿತಿ ಇದ್ದರೂ ನಂಬಿಕೆ ನಕ್ಷೆ 2.0ನಲ್ಲಿ ನಕ್ಷೆ ಸಿಗುತ್ತಿಲ್ಲ. ವಸತಿ ಕಟ್ಟಡಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿವೆ.

ಟೇಕ್ ಆಗದ ಇ-ಸ್ವತ್ತು

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ಖಾತಾ ನೀಡುವ ಸಲುವಾಗಿ ಒಂದು ವರ್ಷಗಳ ಕಾಲ ಇ-ಸ್ವತ್ತು ತಂತ್ರಾಂಶ ಅಭಿವೃದ್ಧಿಪಡಿಸಿ 2025ರ ಡಿಸೆಂಬರ್​ನಲ್ಲಿ ಚಾಲನೆ ನೀಡಲಾಯಿತು. ಆದರೆ ಇಲ್ಲಿಯವರೆಗೆ ಈ ತಂತ್ರಾಂಶದಲ್ಲಿ ಒಂದೇ ಒಂದು ಇ-ಖಾತಾ ವಿತರಣೆ ಮಾಡಿಲ್ಲ. ಅಂದಾಜು 94 ಲಕ್ಷ ಆಸ್ತಿಗಳು ಇ- ಖಾತಾಗಾಗಿ ಕಾಯುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಎರಡೆರಡು ಸಮಿತಿ ರಚಿಸಿ ವರದಿ ಪಡೆದರೂ ಯಾವುದೇ ಯೋಜನ ಆಗಿಲ್ಲ. ಸೆ.21ಕ್ಕೆ ಅಭಿಯಾನ ಮಾದರಿ ಇ-ಖಾತಾ ವಿತರಣೆ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇದೀಗ ಅ.2ಕ್ಕೆ ಗಾಂಧಿ ಜಯಂತಿ ದಿನ ಮತ್ತೊಮ್ಮೆ ಅಭಿಯಾನ ಮಾಡಬೇಕೆಂದು ಸಚಿವರು ಮುಂದಾಗಿದ್ದಾರೆ.

ಪ್ರಮುಖ ಸಮಸ್ಯೆಗಳೇನು?

  • ಇ-ಆಸ್ತಿ 2.0ರಲ್ಲಿ ಹೊಸ ಇ-ಖಾತಾಗೆ ಅರ್ಜಿ ಸ್ವೀಕರಿಸುತ್ತಿಲ್ಲ

  • ಅರ್ಜಿ ವಿಲೇವಾರಿ ಸಾಧ್ಯವಾಗದೆ ಅಧಿಕಾರಿಗಳ ಪರದಾಟ

  • ಇ-ಖಾತಾ ಆಗಿರುವ ಆಸ್ತಿಗಳ ಡೇಟಾದಲ್ಲಿ ಲೋಪದೋಷ

  • ಡೇಟಾಬೇಸ್ ಅಳಕೆ, ಚೆಕ್ಕುಬಂದಿ, ವಿಳಾಸ, ಹೆಸರು ತಪು್ಪ

  • ಇದರಿಂದ ಆಸ್ತಿ ಮಾರಾಟ ಮತ್ತು ವರ್ಗಾವಣೆಗೆ ಸಮಸ್ಯೆ

  • ಕಾವೇರಿ -2.0ದಲ್ಲಿ ಅಪ್ಲೋಡ್ ಮಾಡುವ ವೇಳೆ ದೋಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net