ಮುಧೋಳ ತಾಲೂಕಿನ ಮುದ್ದಾಪೂರದ ಜೆ.ಕೆ. ಸಿಮೆಂಟ್ಸ್ ಅಕ್ರಮ ವಿರುದ್ಧ ರೈತರ ಅಬ್ಬರದ ಹೋರಾಟ ಪ್ರತಿಭಟನೆಯಲ್ಲಿ ಶಂಕರಗೌಡ ಹಿರೇಗೌಡರ, ಸುರೇಶ ಕಿವುಡಿ, ರಂಗಪ್ಪ ತುಳಸಿಗೇರಿ, ಗಣಪತಿ ಹಂಪಿಹೊಳಿ, ಸುನೀಲ್ ನಾವಿ, ಹನುಮಂತ ಕಿವುಡಿ ಸೇರಿ ಭಾಗವಹಿಸಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜೆ.ಕೆ. ಸಿಮೆಂಟ್ಸ್ ಅಕ್ರಮ ವಿರುದ್ಧ ರೈತರ ಅಬ್ಬರದ ಹೋರಾಟ
ಎಂಟನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಮುಧೋಳ: ತಾಲೂಕಿನ ಮುದ್ದಾಪುರ ಭಾಗದಲ್ಲಿ ಜೆ.ಕೆ. ಸಿಮೆಂಟ್ಸ್ ಕಾರ್ಖಾನೆ ಅಕ್ರಮ ಗಣಿಗಾರಿಕೆ ಹಾಗೂ ವಿಸ್ತರಣಾ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ, ನಿಂಗಾಪುರ, ಹಲಕಿ, ಬೊಮ್ಮನಬುದ್ನಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಭಾನುವಾರಕ್ಕೆ ಏಳನೇ ದಿನಕ್ಕೆ ಕಾಲಿಟ್ಟಿತು.
ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾವ ಬಳಸಿ ರೈತರಿಗೆ ದಲ್ಲಾಳಿಗಳ ಮೂಲಕ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು ನಮ್ಮ ಭೂಮಿ ನಮ್ಮ ಹಕ್ಕು, ಕಾರ್ಖಾನೆ ಬೇಡವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ.
ಇತ್ತೀಚೆಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ವರ್ತನೆ ವಿರುದ್ಧ ರೈತರು ತೀವ್ರ ವಾಗ್ವಾದ ನಡೆಸಿದ್ದಾರೆ. ನಾವು ವಿದ್ಯಾವಂತರು, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ರೈತ ಮುಖಂಡ ಶಾಂತೇಶ ಹಂಪಿಹೊಳಿ ಆರೋಪಿಸಿದ್ದಾರೆ.
ಕಾರ್ಖಾನೆ ನಕಲಿ ದಾಖಲೆ ಸೃಷ್ಟಿಸಿ, ಸಾರ್ವಜನಿಕ ವಿಚಾರಣೆ ಹೆಸರಿನಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿ ಉತ್ಪಾದನಾ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ಅನುಮತಿ ಪಡೆದಿದೆ ಎಂಬುದು ರೈತರ ಗಂಭೀರ ಆರೋಪ.
ಅತಿಯಾದ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ದುರ್ಬಳಕೆಯಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ವಿಸ್ತರಣೆಯನ್ನು ತಡೆಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.