ಮುಪ್ಪು ಮುಂದೂಡುವ ಹಪಾಹಪಿ ಎಲ್ಲ ಕಾಲದಲ್ಲೂ ಇತ್ತು - ಪಿ. ಚಂದ್ರಿಕಾ

Sharmishthe drama book release
Sharmishthe drama book release
Published on

ಪ್ರಮುಖ ಮುಖ್ಯಾಂಶಗಳು

  • - ಬೇಲೂರು ರಘುನಂದನ್ ಅವರ ಶರ್ಮಿಷ್ಠೆ ನಾಟಕ ಕೃತಿ ಬಿಡುಗಡೆ
ಬೆಂಗಳೂರು: ಯೌವನವನ್ನು ಕಾಪಿಡುವ ಹಪಾಹಪಿ ಎಲ್ಲ ಕಾಲದಲ್ಲಿಯೂ ಇತ್ತು. ಅದಕ್ಕೆ ಈ ಕಾಲವೂ ಹೊರತಾಗಿಲ್ಲ. ಹಾಗಾಗಿ ವಿಜ್ಞಾನದ ಮೂಲಕ ಶಸಚಿಕಿತ್ಸೆ ಮಾಡಿಸಿ ಮುಪ್ಪನ್ನು ಮುಂದೂಡುವ ಮಟ್ಟದಲ್ಲಿದ್ದೇವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಪಿ. ಚಂದ್ರಿಕಾ ಹೇಳಿದರು.
ರಂಗ ಚಂದಿರ ಟ್ರಸ್ಟ್ ನಗರದ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ
ಬೇಲೂರು ರಘುನಂದನ್ ಅವರ ಶರ್ಮಿಷ್ಠೆ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.
ಯಯಾತಿ ಮುಪ್ಪನ್ನು ದೂರ ಮಾಡಲು ತನ್ನ ಮಗನ ಆಯಸ್ಸನ್ನು ಕೇಳುವ ಪ್ರಸಂಗವು ಕಾರ್ನಾಡ್ ಅವರ ಯಯಾತಿ ನಾಟಕದಲ್ಲಿ ಪುರುಷಾಹಾಂಕಾರದ ದೃಷ್ಟಿ ಕಂಡರೆ, ಶರ್ಮಿಷ್ಠೆ ನಾಟಕದಲ್ಲಿ ಯಯಾತಿಯನ್ನು ಅವನ ಪತ್ನಿ ಶರ್ಮಿಷ್ಠೆ ಪ್ರಶ್ನೆ ಮಾಡುವುದನ್ನು ಕಾಣಬಹುದು. ತಾಯಿಯ ಹೃದಯ ಮಗನಿಗೆ ಹೇಗೆಲ್ಲ ತುಡಿಯಬಹುದು ಎಂಬುದನ್ನು ಈ ನಾಟಕ ಬಿಂಬಿಸುತ್ತಿದೆ ಎಂದು ವಿವರಿಸಿದರು.
ಪುರಾಣ, ಇತಿಹಾಸ, ದಂತ ಕಥೆಗಳು, ಜಾನಪದ ಮತ್ತೆ ಮತ್ತೆ ನಮ್ಮನ್ನು ಸೆಳೆಯುವ ಕಾಲಘಟ್ಟದಲ್ಲಿ ಯಾಕೆ ಶರ್ಮಿಷ್ಠೆಯನ್ನು ನಾಟಕವಾಗಿ ನೋಡಬೇಕು ಎಂಬ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಬೇಲೂರು ರಘುನಂದನ್ ಅವರ ಎಲ್ಲ ನಾಟಕಗಳು ಸೀತ್ವದ ದಾರಣ ಶಕ್ತಿ ಹೊಂದಿರುವಂತಹದ್ದು, ಅದು ಎಲ್ಲೂ ಹಿಂಸೆಯನ್ನು ಬಯಸದೆ, ಅತಿರೇಖಗಳಿಗೆ ಹೋಗದೆ, ಕಟ್ಟುವ ಮತ್ತು ಪ್ರೀತಿಯಿಂದ ಎಲ್ಲರನ್ನು ಒಳಗೊಳ್ಳುವ ಅಪರೂಪದ ಸ್ಥಿತಿಯಾಗಿದೆ. ಹೆಣ್ಣು ಕ್ರೌರ್ಯದ ಪರವಾಗದೆ, ಪ್ರಕೃತಿಯ ವಿರುದ್ಧವಾಗದೆ ಇರುವುದು ಸೀತ್ವದ ಬಹು ದೊಡ್ಡ ಶಕ್ತಿ ಯಾಗಿದೆ. ಅದನ್ನು ರಘುನಂದನ್ ಶರ್ಮಿಷ್ಠೆಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಸಾಹಿತಿ ಹಂಪನಾಗರಾಜಯ್ಯ ಮಾತನಾಡಿ, ಮಹಾಭಾರತದಲ್ಲಿ ಅಲ್ಲಲ್ಲಿ ಚದುರಿದ್ದ, ಹರಿವಂಶದಲ್ಲಿ ಪ್ರಧಾನವಾಗಿ ಇದ್ದ ಯಯಾತಿಯ ಲಾಲಸೆ, ಇಂದ್ರಿಯ ಚಪಲ, ಕಾಮದ ಮೋಹದ ಕಥೆಯನ್ನೇ ಭೂಮಿಗಳಿಸಿ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳಂತೆ ರಘುನಂದನ್ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ರಂಗ ಸಂಘಟಕ ಆರ್. ನರೇಂದ್ರ ಬಾಬು, ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನದ ನಂದೀಶ್ ದೇವ್, ರಂಗಚಂದಿರ ಟ್ರಸ್ಟ್ ಕಾರ್ಯದರ್ಶಿ ಎ.ಎಸ್. ಚಂದ್ರಶೇಖರ್ (ಜಿಪಿಒ ಚಂದ್ರು) ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net