ಬಡತನದ ಕತ್ತಲೆಗೆ ದಾಸೋಹದ ಹಣತೆ

the-darkness-of-poverty-is-a-source-of-slavery
the-darkness-of-poverty-is-a-source-of-slavery
Published on

ಪ್ರಶಾಂತ ರಿಪ್ಪನ್​​ಪೇಟೆ

ಜಗತ್ತಿನಲ್ಲಿರುವ ಎಲ್ಲ ಜ್ಞಾನ, ಸಿದ್ಧಾಂತ, ತತ್ವ, ಸಂದೇಶಗಳು ಸಮಾಜದ ಹಿತಕ್ಕಾಗಿ ಇವೆ. ಅದನ್ನೇ ಸಂವಿಧಾನ ಎಂಬ ಚೌಕಟ್ಟಿನಲ್ಲಿ ರಚಿಸಲಾಗಿದೆ. ಸಂವಿಧಾನದ ಆಶಯವೂ ದುರ್ಬಲರನ್ನು ಮೇಲಕ್ಕೆತ್ತುವ, ಸಮಸಮಾಜ ನಿರ್ವಿುಸುವುದೇ ಆಗಿದೆ. ಸಮಾಜೋನ್ನತಿಗೆ, ಸರ್ವತೋಮುಖ ಅಭಿವೃದ್ಧಿಗೆ ಪ್ರಥಮ ಮೆಟ್ಟಿಲೇ ದಾಸೋಹ. ತನ್ನಲ್ಲಿರುವ ಅಹಂಭಾವ ತೊಡೆದು ಹಾಕಿ, ಸತ್ಯಶುದ್ಧ ಕಾಯಕದಿಂದ ಬಂದ ಆದಾಯದಲ್ಲಿ ಇತರರಿಗೆ ನೀಡುವುದೇ ದಾಸೋಹ. ಇದು ಕೇವಲ ಅನ್ನಕ್ಕೆ ಸೀಮಿತವಲ್ಲ. ಜ್ಞಾನ, ವಸ್ತ್ರ, ಆಶ್ರಯ ಹೀಗೆ ತನ್ನಲ್ಲಿರುವುದನ್ನು ಇತರರಿಗೆ ನೀಡುವುದೆಲ್ಲವೂ ದಾಸೋಹ ಎನಿಸಿಕೊಳ್ಳುತ್ತದೆ. ಅದನ್ನೇ ಶರಣರು ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂದು ಹೇಳಿದ್ದಾರೆ.
12ನೇ ಶತ ಮಾನದಲ್ಲಿ ಶರ ಣರು ಮಾಡಿದ ಬಹು ದೊಡ್ಡ ಪರಿವರ್ತನೆಗಳಲ್ಲಿ 3 ಪರಿವರ್ತನೆಗಳು ಮುಖ್ಯವಾಗಿವೆ. ಅವರು ದಾನವನ್ನು ದಾಸೋಹ, ಕೆಲಸವನ್ನು ಕಾಯಕ, ಪದಾರ್ಥವನ್ನು ಪ್ರಸಾದ ಮಾಡಿದರು. ದಾನ ಎನ್ನುವಲ್ಲಿ ಕೊಡುವವನ ದೌಲತ್ತು, ಪಡೆಯುವವನ ದೈನ್ಯತೆ, ದಾಸೋಹ ಎನ್ನುವಲ್ಲಿ ನೀಡುವವನ ನಿಯತ್ತು, ಪಡೆಯುವವನ ಸಂತೃಪ್ತಿ ವ್ಯಕ್ತವಾಗುತ್ತವೆ.
ಕೆಲಸ ಎಂಬಲ್ಲಿ ಮಾಲೀಕ, ನೌಕರನೆಂಬ ತರತಮ ಮೂಡಿದರೆ, ಕಾಯಕ ಎಂಬಲ್ಲಿ ಸರ್ವರೂ ಸಮಾನವೆಂಬ ಭಾವ ಮೂಡುತ್ತದೆ. ಪದಾರ್ಥವೆಂದರೆ ಜಡವಸ್ತು ಎಂಬ ಲಘು ಅರ್ಥ ವ್ಯಕ್ತವಾದರೆ, ಪ್ರಸಾದವೆಂದಾಗ ಜಗತ್ತಿನ ಚೈತನ್ಯದ ಸ್ವರೂಪ ಅನಾವರಣಗೊಳ್ಳುತ್ತದೆ. ಇಂತಹ ಭಾವಶುದ್ಧಿಯ ಬದಲಾವಣೆಗೆ ಅಂಕಿತ ಹಾಕಿದವರು ಬಸವಾದಿ ಶರಣರು.

ಸಮಾಜದ ಪ್ರಗತಿಗೆ ನಾಂದಿ

ಮನುಷ್ಯನ ಅಹಂಭಾವವನ್ನು ನಿವಾರಿಸಿ, ಅಹಂ ದಾಸಃ ಎಂಬ ಸಾತ್ವಿಕ ಭಾವನೆಯನ್ನು ದಾಸೋಹ ಮೂಡಿಸುತ್ತದೆ. ನೀಡುವ, ಪಡೆಯುವ ಇಬ್ಬರಲ್ಲೂ ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರೂ ತಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಮರಳಿಸಬೇಕೆಂಬ ಭಾವ ಮೂಡಿದರೆ ದೇಶದಲ್ಲಿನ ಬಹುತೇಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಆ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿದ್ದ ಕಿತ್ತು ತಿನ್ನುವ ಬಡತನಕ್ಕೆ ತಕ್ಕಮಟ್ಟಿನ ಪರಿಹಾರ ನೀಡಿದ್ದು ದಾಸೋಹ ತತ್ವ.
ಕಲಬುರಗಿ ಶರಣಬಸವೇಶ್ವರ ಸಂಸ್ಥಾನವು ದಾಸೋಹ ಪೀಠ ಎಂದೇ ಪ್ರಸಿದ್ಧ. ಇಂದಿಗೂ ಶರಣಬಸಪ್ಪನ ದಾಸೋಹವನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ. ಮೈಸೂರು ಭಾಗದಲ್ಲಿ ಸುತ್ತೂರು ಮಠ ಸುಮಾರು 5 ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ವಿದ್ಯೆಯನ್ನು ನೀಡುವ ಮೂಲಕ ಸಮಾಜದ ಪ್ರಗತಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ವಿದ್ಯಾರ್ಥಿಗಳ ದಾಸೋಹಕ್ಕಾಗಿ ತಮ್ಮ ಚಿನ್ನದ ಕರಡಿಗೆಯನ್ನೇ ಮಾರಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ದಾಸೋಹ ತತ್ವ ಎತ್ತಿಹಿಡಿದ ಮಠಗಳು

ಜಗತ್ತಿನಲ್ಲಿ ಭಾರತ ಒಂದು ದೇವಾಲಯ ಎನಿಸಿಕೊಂಡರೆ, ಆ ದೇವಾಲಯದ ಗರ್ಭಗುಡಿ ಕರ್ನಾಟಕ. ದೇಶದಲ್ಲಿರುವ ಬಹುತೇಕ ತತ್ವ-ಸಿದ್ಧಾಂತಗಳು, ನೈತಿಕ ಮೌಲ್ಯಗಳು, ಸಾಮಾಜಿಕ ಚಿಂತನೆಗಳು ಚಿಗುರೊಡೆದ ಪುಣ್ಯನೆಲ ಇದು. ಇಲ್ಲಿರುವಷ್ಟು ಮಠಗಳು ಮತ್ತೆಲ್ಲೂ ಇಲ್ಲ. ಅವೆಲ್ಲವೂ ಜಾತಿ, ಮತ, ಪಂಥ, ಪ್ರದೇಶ, ಭಾಷೆಯನ್ನು ಮೀರಿ ಜಗತ್ತಿಗೆ ನೀಡಿದ ಅಪೂರ್ವ ಕೊಡುಗೆ ದಾಸೋಹ ಎಂಬ ಪರಿಕಲ್ಪನೆ.
ಇದ್ದವರಿಂದ ತರುವುದು, ಇಲ್ಲದವರಿಗೆ ನೀಡುವುದು ಎಂಬ ವ್ಯಾಖ್ಯಾನಕ್ಕೆ ಬಹುತೇಕ ಮಠಗಳು ಅನ್ವರ್ಥಕ. ಮಠಗಳ ಭೌತಿಕ ಆಸ್ತಿ, ಆದಾಯದಲ್ಲಿ ವ್ಯತ್ಯಾಸ ಇದ್ದರೂ ಅವುಗಳ ಸಾಮಾಜಿಕ ಕಳಕಳಿಯಲ್ಲಿ ವ್ಯತ್ಯಾಸವಿಲ್ಲ. ಬೃಹತ್ ಮಠಗಳು ಮಾತ್ರವಲ್ಲದೆ ಸಣ್ಣ ಸಣ್ಣ ಮಠಗಳು ಕೂಡ ತಮ್ಮ ಶಕ್ತ್ಯಾನುಸಾರ ದಾಸೋಹ ಮಾಡುತ್ತಾ ಸಮಾಜದ ಶ್ರೇಯೋಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

ಹೊಸ ವ್ಯಾಖ್ಯಾನ ಬರೆದ ಸಿದ್ಧಗಂಗೆ

ದಾಸೋಹ ಎಂಬ ಪದ ಜಾಗತಿಕವಾಗಿ ಮನ್ನಣೆ ಪಡೆಯುವಂತೆ ಹೊಸ ವ್ಯಾಖ್ಯಾನ ನೀಡಿದ ಕೀರ್ತಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಲ್ಲುತ್ತದೆ. ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ 88 ವರ್ಷಗಳ ಸನ್ಯಾಸ ಜೀವನವನ್ನು ದಾಸೋಹಕ್ಕಾಗಿ ಮುಡಿಪಾಗಿಟ್ಟವರು. ಕೇವಲ 50 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶ್ರೀಮಠದ ವಿದ್ಯಾರ್ಥಿನಿಲಯದಲ್ಲಿ 10 ಸಾವಿರ ವಿದ್ಯಾರ್ಥಿಗಳಾದಾಗಲೂ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿ ತ್ರಿವಿಧ ದಾಸೋಹಿ ಎನಿಸಿಕೊಂಡವರು ಡಾ. ಶಿವಕುಮಾರ ಸ್ವಾಮಿಗಳು. ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು, ಜಂಗಮಕ್ಕೆ ಧನವ ಕೊಟ್ಟು ನಿಶ್ಚಿಂತನಾಗಿರು ಎಂಬ ವಚನದ ಸಾಲಿನಂತೆ ವಿದ್ಯಾರ್ಥಿಗಳನ್ನು ಜಂಗಮ ರೂಪದಲ್ಲಿ ಕಂಡು ಅವರಿಗೆ ದಾಸೋಹ ಮಾಡಿ ಅವರಲ್ಲೇ ಭಗವಂತನನ್ನು ಕಂಡ ತೃಪ್ತಿ ಶ್ರೀಗಳದ್ದು. ಗುರುಗಳಾಗಿದ್ದ ಶ್ರೀ ಉದ್ದಾನ ಶಿವಯೋಗಿಗಳಿಗಿಂತ ಮೊದಲಿದ್ದ ಶ್ರೀ ಅಟವಿ ಸ್ವಾಮಿಗಳು ಅನ್ನದಾಸೋಹಕ್ಕಾಗಿ ಮಠದಲ್ಲಿ ಹಾಕಿದ ಅಗ್ನಿ ಇಂದಿಗೂ ಆರಿಲ್ಲ ಎಂಬ ಮಾತಿದೆ. ಒಂದೂವರೆ ಶತಮಾನದಿಂದ ಸಿದ್ಧಗಂಗೆ ಮಠದಲ್ಲಿ ನಿತ್ಯ ದಾಸೋಹ ನಡೆದುಕೊಂಡು ಬಂದಿದೆ.

ದಾಖಲೆಗಳ ಮೇಲೆ ದಾಖಲೆ

ನಾಡಿನ ಬಹುತೇಕ ಮಠ-ಮಂದಿರಗಳು ದಾಸೋಹದ ಮೂಲಕ ಸಮಾಜದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿವೆ. ವಿಶೇಷವಾಗಿ ಕೊಪ್ಪಳ ಗವಿ ಮಠದಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಸುಮಾರು 20 ಲಕ್ಷ ಜನರು ಅನ್ನ ದಾಸೋಹ ಸ್ವೀಕರಿಸಿದ್ದು ದಾಖಲೆಯಾಗಿದೆ. ಇತ್ತೀಚೆಗೆ ಲಿಂಗೈಕ್ಯರಾದ ಬಾಗಲಕೋಟೆ ಜಿಲ್ಲೆಯ ಬಂಡಿಗಣಿ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಸ್ವಾಮಿಗಳು ವರ್ಷಪೂರ್ತಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಹೋಗಿ ಲಕ್ಷಾಂತರ ಜನರಿಗೆ ನಿರಂತರ ಅನ್ನದಾಸೋಹ ಮಾಡುತ್ತಿದ್ದರು. ಇದನ್ನು ಸರಿಗಟ್ಟುವ ಮತ್ತೊಂದು ಉದಾಹರಣೆ ಇಲ್ಲ.
ಪ್ರತಿ ವರ್ಷ ನಡೆಯುವ 6 ದಿನಗಳ ಸುತ್ತೂರು ಜಾತ್ರೆಯಲ್ಲಿ ಸುಮಾರು 20-25 ಲಕ್ಷ ಜನರಿಗೆ ಅನ್ನ ದಾಸೋಹ ಮಾಡುವುದು ಮತ್ತೊಂದು ದಾಖಲೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠವು ಶ್ರೀ ಗುರುಶಾಂತೇಶ್ವರ ಅಕ್ಷರ ದಾಸೋಹ ಯೋಜನೆಯ ಮೂಲಕ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸುಮಾರು 70 ಸಾವಿರ ವಿದ್ಯಾರ್ಥಿಗಳಿಗೆ ನಿತ್ಯ ಅನ್ನ ದಾಸೋಹ ಮಾಡುತ್ತಿರುವುದು ದೊಡ್ಡ ದಾಖಲೆ. ಉಳಿದಂತೆ ಧರ್ಮಸ್ಥಳದಲ್ಲಿ ವರ್ಷದುದ್ದಕ್ಕೂ ಪ್ರತಿದಿನ ಸರಾಸರಿ 25 ಸಾವಿರ ಜನ ಅನ್ನದಾಸೋಹ ಸ್ವೀಕರಿಸುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ ಲಕ್ಷ ಮೀರುತ್ತದೆ. ಅನ್ನಪೂರ್ಣೆಶ್ವರಿ ನೆಲೆಸಿರುವ ಹೊರನಾಡು ಕ್ಷೇತ್ರ ಮೊದಲ್ಗೊಂಡು ನಾಡಿನ ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಭಕ್ತರಿಗೆ ಅನ್ನ ದಾಸೋಹ ನಡೆಯುತ್ತಿದೆ.

ಘೋಷಣೆ ಮಾಡಿದ್ದ ಸರ್ಕಾರ

ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮಿಗಳು 2019ರ ಜ.21ರಂದು ತಮ್ಮ 112ನೇ ವಯಸ್ಸಿನಲ್ಲಿ ಲಿಂಗೈಕ್ಯರಾದ ನಂತರ, ಅವರು ನಾಡಿಗೆ ನೀಡಿದ ಸೇವೆ, ಕೊಡುಗೆಗಳನ್ನು ಶಾಶ್ವತವಾಗಿ ನೆನಪಿನಲ್ಲಿಡಬೇಕೆಂಬ ಕಾರಣಕ್ಕೆ 2021ರ ಸೆ.2ರಂದು ರಾಜ್ಯ ಸರ್ಕಾರ ಜ.21ನ್ನು ದಾಸೋಹ ದಿನ ಎಂದು ಆಚರಿಸಲು ಆದೇಶ ಹೊರಡಿಸಿತು. ಆದೇಶದ ಪ್ರಕಾರ ಜ. 21ರಂದು ತಾಲೂಕು ಮತ್ತು ಜಿಲ್ಲಾ ಮಟ್ಟದ ಕಚೇರಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸಿ ತಮ್ಮ ವ್ಯಾಪ್ತಿಯಲ್ಲಿ ಅನ್ನ ದಾಸೋಹ ನಡೆಸಬೇಕು. ಈ ಬಗ್ಗೆ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಿ. ಮೋಹನ್ ಕುಮಾರ್ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ದಿನಾಚರಣೆಯ ಅನುಷ್ಠಾನಕ್ಕೆ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರಕ್ಕೂ ಪ್ರೇರಣೆ ಆಯ್ತು...

ನಾಡಿನ ನೂರಾರು ಮಠ-ಮಂದಿರಗಳು ನಿತ್ಯ ಅನ್ನದಾಸೋಹವನ್ನು ಮಾಡಿ ಸಮಾಜದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಇದರಿಂದ ಪ್ರೇರಿತವಾದ ರಾಜ್ಯ ಸರ್ಕಾರ ಕೂಡ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡುವ ಅಕ್ಷರ ದಾಸೋಹ ಎಂಬ ವಿನೂತನ ಯೋಜನೆಯನ್ನು ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಕಾಲದಲ್ಲಿ ಆರಂಭಿಸಿತು. ಮೊದಲಿಗೆ ಪ್ರಾಥಮಿಕ ಶಾಲೆಗಳಲ್ಲಿ ಆರಂಭವಾದ ಅಕ್ಷರ ದಾಸೋಹ ನಂತರದ ವರ್ಷಗಳಲ್ಲಿ ಪ್ರೌಢಶಾಲೆಗೂ ವಿಸ್ತರಣೆಯಾಯಿತು.
"

ದಾಸೋಹ ಪರಿಕಲ್ಪನೆ ಮಠಗಳಿಗೆ ಶಿಕ್ಷಣ, ಆರೋಗ್ಯ ಮತ್ತಿತರ ಸೇವೆಯನ್ನು ಮಾಡಲು ಪ್ರೇರಣೆಯಾಗಿದೆ. ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನೂರಾರು ವರ್ಷಗಳಿಂದ ಮಾಡಿಕೊಂಡು ಬಂದ ಮಠಗಳ ದಾಸೋಹ, ಸರ್ಕಾರಕ್ಕೂ ಕೂಡ ಅಕ್ಷರ ದಾಸೋಹ ಯೋಜನೆ ಆರಂಭಿಸಲು ಪ್ರೇರಣೆ ನೀಡಿದೆ.

ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಿದ್ಧಗಂಗಾ ಮಠ
"

ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ವಿಶೇಷ ಮಹತ್ವ ಇದೆ. ಧರ್ಮಸ್ಥಳಕ್ಕೆ ಬಂದವರು ಅನ್ನದಾಸೋಹ ಸ್ವೀಕರಿಸದಿದ್ದರೆ ಕ್ಷೇತ್ರ ದರ್ಶನದ ಫಲವಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿದಿನ ಸರಾಸರಿ ದಿನಕ್ಕೆ 25 ಸಾವಿರ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ.ಡಾ. ಡಿ.ವೀರೇಂದ್ರ ಹೆಗ್ಗಡೆ ಧರ್ವಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ

"

ಸಿದ್ದಗಂಗೆಯ ಡಾ. ಶಿವಕುಮಾರ ಸ್ವಾಮಿಗಳನ್ನು ಅರ್ಥಪೂರ್ಣವಾಗಿ ಸ್ಮರಿಸುವ ಉದ್ದೇಶದಿಂದ, ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರ ಜ. 21ನ್ನು ದಾಸೋಹ ದಿನ ಎಂದು ಘೊಷಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರವೂ ಅದನ್ನು ಪಾಲಿಸಿ ಶ್ರೀಗಳ ದಾಸೋಹ-ಕಾಯಕಕ್ಕೆ ಗೌರವ ಸೂಚಿಸುವುದನ್ನು ಮುಂದುವರೆಸಲಿ.ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

"

ಸಿದ್ದಗಂಗಾ ಹಿರಿಯ ಗುರುಗಳ ತಪಸ್ಸು ಸಾಧನೆಯನ್ನು ನೋಡಿ ನಾವು ದಾಸೋಹ ದಿನ ಅಂತ ಘೊಷಿಸಿದ್ದೆವು. ಅದನ್ನು ಮುಂದುವರಿಸದೇ ಇರುವುದಕ್ಕೆ ಕಾರಣವೇನು? ಸರ್ಕಾರದ ಈ ನಡೆಯಿಂದ ಸಿದ್ದಗಂಗಾ ಸ್ವಾಮೀಜಿ ಮತ್ತು ಮಠದ ಭಕ್ತರ ಮನಸ್ಸಿಗೆ ಬಹಳ ನೋವಾಗುತ್ತದೆ. ಕೂಡಲೇ ದಾಸೋಹ ದಿನವನ್ನು ಆಚರಿಸಲು ಸರ್ಕಾರ ಮುಂದಾಗಬೇಕು. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಗಮನಿಸಬೇಕು. ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net