ಯಾದಗಿರಿ ನಗರದ ಶಾಸಿ ಚೌಕ್ನಿಂದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಾಣೆಯಾದ ಪುಟ್ಪಾತ್ ಶುಕ್ರವಾರ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಪರಿಶೀಲಿಸಿದರು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾ ಕೇಂದ್ರದಲ್ಲಿ ಕಾಣೆಯಾದ ಪುಟ್ಪಾತ್ಗಳ ಹುಡುಕಾಟ
ಕಬಳಿಸಿದವರು ತೆರವುಗೊಳಿಸಲು ತಾಕೀತು
ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ವ್ಯಾಪಾರಿಗಳು ಇತರರಿಂದ ಒತ್ತುವರಿಯಾಗಿರುವ ಪುಟ್ಪಾತ್ ಹುಡುಕಾಟ ಶುರು ಮಾಡಿರುವ ನಗರಸಭೆ ಮತ್ತು ನಗರಾಭಿವೃದ್ದಿ ಪ್ರಾಧಿಕಾರ, ಸಾರ್ವಜನಿಕರಿಗೆ ನಡೆದುಕೊಂಡು ಹೊಗಲು ಅನುವು ಆಗುವಂತೆ ಕ್ರಮ ಕೈಗೊಳ್ಳಲು ಮುಂದಾಗಿವೆ.
31 ವಾರ್ಡ್ ಜತೆ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರದ ಮುಖ್ಯ ರಸ್ತೆ ಮತ್ತು ಒಳರಸ್ತೆಗಳಲ್ಲಿದ್ದ ಪುಟ್ಪಾತ್ಗಳು ಸಂಪೂರ್ಣ ಮಾಯಾವಾಗಿವೆ. ಮಳಿಗೆಗಳ ಮುಂದಿನ ಪುಟ್ಪಾತ್ ಅತಿಕ್ರಮಕ್ಕೆ ಒಳಗಾಗಿ ದಶಕಗಳೇ ಕಳೆದಿದೆ. ಒಂದು ರೀತಿಯಲ್ಲಿ ಪುಟ್ಪಾತ್ಗಳಿಲ್ಲದ ನಗರವೆಂದರೂ ತಪ್ಪಾಗಲಿಕ್ಕಿಲ್ಲ.
ಇಂತಹ ನಗರದಲ್ಲಿ ತಡವಾದರೂ ಎಚ್ಚೆತ್ತುಕೊಂಡಿರುವ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾಡ್ಲೂರ ಅವರು ತಮ್ಮ ಇಲಾಖೆ ತಂಡದೊಂದಿಗೆ ಒತ್ತುವರಿಯಾಗಿರುವ ಪುಟ್ಪಾತ್ಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಆರಂಭಿಕ ಹಂತದಲ್ಲಿ ಶಾಸಿ ಚೌಕ್ನಿಂದ ಹೊಸ ಬಸ್ ನಿಲ್ದಾಣ ರಸ್ತೆಯನ್ನು ಎರಡು ದಿನ ಹಿಂದೆ ಪರಿಶೀಲಿಸಿ ಸ್ಥಳ ಗುರುತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪುಟ್ಪಾತ್ ರಸ್ತೆ ಕಬಳಿಸಿದವರು ತಾವಾಗಿಯೇ ತೆರವುಗೊಳಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಿದೆ. ಇದೇ ರೀತಿ ಬರುವ ದಿನಗಳಲ್ಲಿ ಇಡೀ ನಗರದಲ್ಲಿ ಕಾಣೆಯಾಗಿರುವ ಪುಟ್ಪಾತ್ಗಳನ್ನು ಹುಡುಕಿ ಕಬಳಿಕೆದಾರರಿಂದ ಬಿಡಿಸಿ ರಸ್ತೆ ನಿರ್ಮಾಣದ ಯೋಜನೆ ಹೊಂದಲಾಗಿದೆ. ಕಾರಣ ಅತಿಕ್ರಮಣ ಮಾಡಿರುವ ಪುಟ್ಪಾತ್ ರಸ್ತೆ ಜಾಗವನ್ನು ತಾವಾಗಿಯೇ ತೆರವುಗೊಳಿಸಬೇಕು ಎಂದು ಪೌರಾಯುಕ್ತ ಉಮೇಶ ಚವ್ಹಾಣ್ ಮತ್ತು ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಮನವಿ ಮಾಡಿದ್ದಾರೆ.
"
ನಗರವೆಂದ ಮೇಲೆ ಅಲ್ಲಲ್ಲಿ ಪುಟ್ಪಾತ್ ರಸ್ತೆ ಇರಲೇಬೇಕು. ಆದರೆ ಜಿಲ್ಲಾ ಕೇಂದ್ರದ ಬಹುತೇಕ ಕಡೆ ಈ ರಸ್ತೆಗಳೇ ಕಾಣಿಸುತ್ತಿಲ್ಲ. ನಗರಸಭೆ ಮತ್ತು ಯುಡಾ ಈಗ ಪರಿಶೀಲನೆಗೆ ಮುಂದಾಗಿದ್ದು, ಕಬಳಿಸಿದವರು ತಕ್ಷಣ ಜಾಗ ಖಾಲಿ ಮಾಡಬೇಕು. ಇಲ್ಲವಾದರೆ ಹಂತ-ಹಂತವಾಗಿ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
— > ಉಮೇಶ ಚವ್ಹಾಣ್ ಪೌರಾಯುಕ್ತ, ನಗರಸಭೆ ಯಾದಗಿರಿ
"
ಜನರಿಗೆ ಸರ್ಕಾರದಿಂದ ನೀಡುವ ಅಗತ್ಯ ಮೂಲಸೌಕರ್ಯಗಳಲ್ಲಿ ಪುಟ್ಪಾತ್ ರಸ್ತೆಯೂ ಒಂದು. ಆದರೆ ನಗರದಲ್ಲಿದ್ದ ಅನೇಕ ಪುಟ್ಪಾತ್ ರಸ್ತೆಗಳು ಮಾಯವಾಗಿದ್ದು, ಪತ್ತೆ ಹಚ್ಚಿ ತೆರವುಗೊಳಿಸಲಾಗುವುದು.