ನೀರಿಲ್ಲದೆ ಬರಿದಾಗಿದೆ ಕೆರೆ-ಕಟ್ಟೆ ಒಡಲು

ನೀರಿಲ್ಲದೆ ಭತ್ತಿ ಹೋಗಿರುವ ಪಡುವಳಲು ಕೆರೆ.
ನೀರಿಲ್ಲದೆ ಭತ್ತಿ ಹೋಗಿರುವ ಪಡುವಳಲು ಕೆರೆ.
Published on

ಪ್ರಮುಖ ಮುಖ್ಯಾಂಶಗಳು

  • ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲಿ ನೀರಿಲ್ಲ
  • ದನಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ
ಹಗರೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನ ಹಾಗೂ ಮಳೆ ಕೊರತೆಯಿಂದಾಗಿ ಕೆರೆಗಳೆಲ್ಲ ಬತ್ತಿ ನೀರಿನ ಪರಿತಾಪ ಹೆಚ್ಚಾಗಿದೆ.
ಮಲೆನಾಡು ಪ್ರದೇಶ ಎಂದು ಕರೆಸಿಕೊಳ್ಳುವ ಬಿಕ್ಕೋಡು ಹೋಬಳಿಯ ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ ದನಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ.
ಬೇಲೂರು ತಾಲೂಕಿನಿಲ್ಲಿರುವ ವಾಟೆಹೊಳೆ ಜಲಾಶಯದ ಕೆಳಭಾಗದಲ್ಲಿನ ಗ್ರಾಮಗಳಾದ ಮದಘಟ್ಟ, ಎಡೇಹಳ್ಳಿ, ಕೃಷ್ಣಾಪುರ, ದೊಡ್ಡಿಹಳ್ಳಿ, ಪಡುವಳಲು ಗ್ರಾಮಗಳಿಗೆ ಜಲಾಶಯದ ಎಡಭಾಗದ ಕಾಲುವೆ ಮೂಲಕ ಪ್ರತಿ ವರ್ಷ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದ ನೀರು ಹರಿಸಿಲ್ಲ. ಸರ್ಕಾರದ ಸೂಚನೆ ಮೇರೆಗೆ ಎಚ್ಚೆತ್ತ ವಾಟೆಹೊಳೆ ಕೆಳಭಾಗದ ರೈತರು ಜಮೀನನ್ನು ಪಾಳು ಬಿಟ್ಟಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಬಿರು ಬಿಸಿಲು ಹೆಚ್ಚಾಗುತ್ತಿರುವುದರಿಂದ ಕೆರೆಗಳಲ್ಲಿನ ನೀರು ಬತ್ತಿ ಹೋಗುತ್ತಿದ್ದು, ದನಕರು-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಬಂದೊದಗಿದೆ.
ವಾಟೆಹೊಳೆ ಜಲಾಶಯದಲ್ಲೂ ಕೊರತೆ: ವಾಟೆಹೊಳೆ ಜಲಾಶಯವು ಒಟ್ಟು 1.5 ಟಿ.ಎಂ.ಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಜಲಾಶಯದಲ್ಲಿ 1.018 ಟಿ.ಎಂ.ಸಿ ನೀರಿದೆ. ಡೆಡ್ ಸ್ಟೋರೇಜ್ ಹೊರೆತುಪಡಿಸಿ ಪ್ರಸ್ತುತ 0.87 ಸಂಗ್ರಹವಿದೆ. 0.95 ಟಿಎಂಸಿ ಮೇಲೆ ನೀರು ಸಂಗ್ರಹವಾಗಿದ್ದರೆ ಮಾತ್ರ ಕಾಲುವೆ ಮೂಲಕ ಬೆಳೆಗೆ ನೀರು ಹರಿಸಬಹುದು.
ಅನುದಾನದ ಕೊರತೆ ಸ್ವಚ್ಛಗೊಳ್ಳದ ಕಾಲುವೆ: ವಾಟೆಹೊಳೆ ಜಲಾಶಯದಿಂದ ಪ್ರ್ರಾರಂಭವಾದ ಎಡದಂಡೆ ಕಾಲುವೆ ಸುಮಾರು 10 ಕಿ.ಮೀ ದೂರವಿದ್ದು ಪಡುವಳಲು ತಲುಪಿ ಕೊನೆಗೊಳ್ಳುತ್ತದೆ. ಈಗಾಗಲೇ ಸುಮಾರು ಐದು ಕಿ.ಮೀ ನಷ್ಟು ಕಾಲುವೆಯನ್ನು ಸ್ವಚ್ಛಗೊಳಿಸಲಾಗಿದ್ದು, ಉಳಿದ ಐದು ಕಿ.ಮೀ ದೂರವಿವರುವ ಕಾಲುವೆಯಲ್ಲಿ ಹೂಳು ತುಂಬಿದೆ. ಜತೆಗೆ ಗಿಡಹಂಟಿ ಆಳೆತ್ತರಕ್ಕೆ ಬೆಳೆೆದು ನಿಂತಿದೆ. ಕಾಲುವೆಗೆ ಹಾಕಿದ್ದ ಸಿಮೆಂಟ್ ಸಂರ್ಪೂಣ ಕಿತ್ತು ಹೋಗಿದ್ದು, ಕಾಲುವೆಯ ಉದ್ದಕ್ಕೂ ನೀರು ಸೋರಿಕೆಯಾಗುತ್ತಿರುವ ಪರಿಣಾಮ ನೀರು ಹೊಳೆ ಸೇರುವಂತಾಗಿದೆ.
ಸರ್ಕಾರ ಬರಪೀಡಿತ ತಾಲೂಕುಗಳನ್ನು ಜಿಲ್ಲಾವಾರು ಪ್ರಕಟಿಸಿದೆಯಾದರೂ ಬೇಲೂರು ತಾಲೂಕು ಬರಪೀಡಿತ ಪಟ್ಟಿಯಿಂದ ಹೊರಗುಳಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಣ್ಣ ಮುಂದೆ ಕಾಣುವಂತೆ ಅಂಕಿ ಅಂಶಗಳ ಪ್ರಕಾರ ಜಲಾಶಯದಲ್ಲೇ ನೀರಿಲ್ಲ. ಬೆಳೆದ ಬೆಳೆೆ ಒಣಗಿ ಹೋಗಿದ್ದು, ಭತ್ತ ಬೆಳೆಯುವ ರೈತರು ಕೈಚಲ್ಲಿ ತಮ್ಮ ಸಾವಿರಾರು ಎಕರೆ ತರಿ ಜಮೀನನ್ನು ಪಾಳು ಬಿಟ್ಟಿದ್ದಾರೆ. ಹೀಗಿದ್ದರೂ ಸಹ ಬೇಲೂರು ತಾಲೂಕು ಬರ ಪಟ್ಟಿಯಿಂದ ಹೊರಗುಳಿದಿರುವುದು ದುರುದೃಷ್ಟವೇ ಸರಿ. ಇನ್ನಾದರು ಎಚ್ಚೆತ್ತು ಸರ್ಕಾರ ಬೇಲೂರನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಬರ ಪರಿಹಾರ ಘೂಷಣೆ ಮಾಡಬೇಕೆಂಬುದು ಈ ಭಾಗದ ರೈತರ ಆಗ್ರಹ.
ಈ ವರ್ಷ ಮಳೆ ಕೊರತೆಯಿಂದಾಗಿ ಶೇ.60 ನೀರಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಜಲಾಶಯದ ನೀರಿನ ವಾಸ್ತವಾಂಶ ತಿಳಿಸಿದ್ದೇನೆ. ಶೀಘ್ರ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಸಭೆ ನಂತರ ಸರ್ಕಾರದ ಅದೇಶದಂತೆ ಕಾಲುವೆ ಮೂಲಕ ನೀರು ಹರಿಸಲಾಗುವುದು. ಸರ್ಕಾರದ ಅನುದಾನದಲ್ಲಿ 5 ಕಿ.ಮೀ ಕಾಲುವೆ ದುರಸ್ತಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬರುವ ಅನುದಾನಕ್ಕನುಗುಣವಾಗಿ ಸಂಪೂರ್ಣ ದುರಸ್ತಿ ಮಾಡಲಾಗುವುದು.
ಎಂ.ಎಂ.ರವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ವಾಟೆಹೊಳೆ ಜಲಾಶಯ
ಹೋರಾಟ ಮಾಡಿ ಎಲ್ಲವನ್ನೂ ಪಡೆದುಕೊಳ್ಳುವ ಪರಿಸ್ಥಿತಿ ನಮ್ಮದಾಗಿದೆ. ನೀರಿದ್ದರೂ ರೈತರು ಸರ್ಕಾರದ ಮುಂದೆ ಮಂಡಿಯೂರಿ ಕೇಳುವಂತಾಗಿರುವುದು ನಾಚಿಕೆಗೇಡಿನ ಸಂಗತಿ. ಬೆಳೆ ಬೆಳೆಯಲು ನೀರು ಕೊಡಲಿಲ್ಲ. ಕೆರೆ-ಕಟ್ಟೆಗಳಿಗಾದರೂ ನೀರು ಹರಿಸಿದರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಬಹುದು. ಸರ್ಕಾರ ಬೇಲೂರು ತಾಲೂಕನ್ನು ಬರಪೀಡಿತರ ಪಟ್ಟಿಯಿಂದ ಕೈ ಬಿಟ್ಟಿದ್ದು ರೈತರಿಗೆ ಹತಾಶೆ ಮೂಡಿಸಿದೆ. ಬೆಳೆಗಳು ಒಣಗಿವೆ, ಕೆರೆ ಕಟ್ಟೆಗಳೆಲ್ಲ ಬತ್ತಿಹೋಗಿವೆ. ಸರ್ಕಾರಕ್ಕೆ ಇನ್ನೇನು ಸಾಕ್ಷಿ ನೀಡಬೇಕು ಎಂಬುದೇ ತಿಳಿಯದಾಗಿದೆ.
ಡಿ.ಎಚ್.ಭೂಮೇಶ್ ಯುವ ರೈತ, ಡನಾಯ್ಕನಹಳ್ಳಿ
ಸಮುದ್ರದ ಪಕ್ಕದಲ್ಲಿದ್ದರೂ ಉಪ್ಪಿಗೆ ಬರ ಎಂಬಂತಾಗಿದೆ ನಮ್ಮ ಪರಿಸ್ಥಿತಿ. ಜಲಾಶಯದ ಕೆಳ ಬಾಗದಲ್ಲಿದ್ದರೂ ನೀರಿನ ಬರವನ್ನು ನಾವು ಅನುಭವಿಸುತ್ತಿದ್ದೇವೆ. ಯಗಚಿ, ಎತ್ತಿನಹೊಳೆ ಅಕ್ಕ ಪಕ್ಕದಲ್ಲೇ ಹರಿದರೂ ಸಹ ಒಂದು ಹನಿ ನೀರು ನಮಗೆ ಲಭ್ಯವಿಲ್ಲ. ರೈತರಿಗೆ ಅನುಕೂಲವಾಗುವಂತ ಶ್ವಾಶ್ವತ ಪರಿಹಾರ ಹುಡುಕುವ ಪ್ರಯತ್ನವನ್ನು ಯಾವ ಜನಪ್ರತಿನಿಧಿಗಳೂ ಮಾಡದಿರುವುದು ನಮ್ಮಗಳ ದುರದುಷ್ಟ. ದನಕರುಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದ್ದು, ಅಧಿಕಾರಿಗಳು ಶೀಘ್ರ ಕಾಲುವೆ ಮೂಲಕ ನೀರು ಹರಿಸಿ ಜಾನುವಾರುಗಳ ಜೀವ ಉಳಿಸಬೇಕಿದೆ.
ಸ್ವಾಮಿ ಕೃಷಿಕ, ಕೃಷ್ಣಾಪುರ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net