ಸಕ್ರೀಯ ರಾಜಕಾರಣಿಗಳ ಆತ್ಮಚರಿತ್ರೆಗಳು ಬಹುತೇಕ ಅರ್ಧಸತ್ಯ; ಪುರುಷೋತ್ತಮ ಬಿಳಿಮಲೆ

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಆತ್ಮಚರಿತ್ರೆ ಬಿಡುಗಡೆ
B.L. Shankar released the autobiography of former MLA Shakuntala Shetty. Purushothama Bilimale and others were present.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಆತ್ಮಚರಿತ್ರೆ ಕೃತಿಯನ್ನು ಬಿ.ಎಲ್.ಶಂಕರ್ ಬಿಡುಗಡೆ ಮಾಡಿದರು. ಪುರುಷೋತ್ತಮ ಬಿಳಿಮಲೆ ಮತ್ತಿತರರು ಉಪಸ್ಥಿತರಿದ್ದರು.
Published on: 

ಬೆಂಗಳೂರು : ಸಕ್ರಿಯ ರಾಜಕಾರಣಿಗಳು ಬರೆಯುವ ಆತ್ಮಚರಿತ್ರೆಗಳಲ್ಲಿ ಪೂರ್ಣ ಸತ್ಯ ಅನಾವರಣಗೊಳ್ಳುವುದು ಅಪರೂಪ. ಬಹುತೇಕ ಕೃತಿಗಳು ಅರ್ಧಸತ್ಯವನ್ನೇ ಒಳಗೊಂಡಿರುತ್ತವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಗಾಂಧಿಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ಆತ್ಮಚರಿತ್ರೆ ‘ಚಿತ್ತ ಭಿತ್ತಿಯ ಪತ್ತಾಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಸಕ್ರಿಯ ರಾಜಕಾರಣಿಗಳು ತಮ್ಮ ಸಮಕಾಲೀನ ರಾಜಕೀಯದ ಎಲ್ಲ ಘಟನೆಗಳನ್ನು ಆತ್ಮಚರಿತ್ರೆಯಲ್ಲಿ ದಾಖಲಿಸಲು ಸಾಧ್ಯವಾಗುವುದಿಲ್ಲ. ತಮ್ಮ ರಾಜಕೀಯ ಬದುಕಿಗೆ ಅನುಕೂಲವಾಗುವಂತೆ ಕೆಲವು ಘಟನೆಗಳನ್ನು ಮಾತ್ರ ಆಯ್ದುಕೊಂಡು ಬರೆಯುವ ಸಾಧ್ಯತೆ ಹೆಚ್ಚು. ಇರುತ್ತದೆ. ಹೀಗಾಗಿ ಇಂತಹ ಆತ್ಮಚರಿತ್ರೆಗಳಲ್ಲಿ ಕೆಲವು ಪ್ರಮುಖ ಅಂಶಗಳು, ಘಟನೆಗಳು ಮತ್ತು ಪಾತ್ರಗಳು ಕಾಣೆಯಾಗಿರುತ್ತವೆ. ವಸ್ತುನಿಷ್ಠವಾಗಿ ಆತ್ಮಚರಿತ್ರೆಯನ್ನು ಬರೆದವರು ಮಹಾತ್ಮ ಗಾಂಧೀಜಿ ಒಬ್ಬರೆ. ಈ ಹಿನ್ನೆಲೆಯಲ್ಲಿ ಶಕುಂತಲಾ ಶೆಟ್ಟಿಯವರು ಸಕ್ರೀಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವುದರಿಂದ ಬಹುತೇಕ ಎಲ್ಲ ಅಂಶಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಎಂದಿಗೂ ಯಾರ ಮೇಲೂ ಅಪವಾದ-ಆರೋಪಗಳನ್ನು ಮಾಡದ ಅವರು, ತಾವು ಈ ಹಿಂದೆ ಇದ್ದ, ಈಗ ಇರುವ ಪಕ್ಷಗಳ ಬಗ್ಗೆಯೂ ಎಲ್ಲಿಯೂ ಅಸಮಾಧಾನ ಹೊರಹಾಕಿಲ್ಲ ಎಂದು ಹೇಳಿದರು. ಯಾವುದೇ ಬರಹಗಾರರಾದರೂ ಕೇವಲ ಗ್ರಂಥಸ್ಥ ಭಾಷೆಯನ್ನು ಬಳಸಿದರೆ ಸಾಲದು, ಸ್ಥಳೀಯ ಬಳಕೆಯ ಪದಗಳನ್ನು ಹಾಗೆಯೇ ಬಳಸಬೇಕು. ಆಗ ನಮ್ಮ ಭಾಷೆಯ ಸೊಗಡು ಉಳಿಯಲು ಸಾಧ್ಯ ಆ ನಿಟ್ಟಿನಲ್ಲಿ ಶಕುಂತಲ ಅವರ ಪ್ರಯತ್ನ ಅಭಿನಂದನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಶಕುಂತಲಾ ಶೆಟ್ಟಿ, ಲೇಖಕಿಯರ ಸಂಘದ ಅಧ್ಯಕ್ಷೆ ಸುನಂದಮ್ಮ, ಲೇಖಕಿಯರಾದ ಡಾ.ಜ್ಯೋತಿ, ಡಾ.ರೋಜ, ಪ್ರಕಾಶಕ ಕಲ್ಲೂರು ನಾಗೇಶ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರಿದ್ದರು.

ಒಬ್ಬ ಮಹಿಳೆಯ ಜೀವನ ಚರಿತ್ರೆಯನ್ನು ದಾಖಲಿಸುವುದು ಕೇವಲ ವ್ಯಕ್ತಿಯೊಬ್ಬರ ಬದುಕನ್ನು ದಾಖಲಿಸುವ ಕೆಲಸವಲ್ಲ. ಅದು ದೇಶದ ಸಾಮಾಜಿಕ ಇತಿಹಾಸದ ಒಂದು ಭಾಗವನ್ನು ದಾಖಲಿಸಿದಂತೆ. ಆ ನಿಟ್ಟಿನಲ್ಲಿ ಶಕುಂತಲಾ ಶೆಟ್ಟಿಯವರ ಆತ್ಮಚರಿತ್ರೆ ಉತ್ತಮ ಬೆಳವಣಿಗೆ. ಶಾಸಕಾಂಗದ ಹೊರಗಿದ್ದೂ ದೇಶದ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಮೇಲೆ ಪ್ರಭಾವ ಬೀರಿದವರು ಸಾಕಷ್ಟಿದ್ದಾರೆ. ಶಕುಂತಲಾ ಅವರು ಸಾಮಾಜಿಕ ಹೋರಾಟಗಳ ಮೂಲಕ ತಮ್ಮ ಸೇವೆ ಮುಂದುವರೆಸಬೇಕು.
ಬಿ.ಎಲ್.ಶಂಕರ್, ಮಾಜಿ ಸಭಾಪತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net