ನಗರದಲ್ಲಿ ನಿಲ್ಲದ ಲೀಸ್​ ಧೋಖಾ

ಭೋಗ್ಯದಾರರಿಗೆ ತಿಳಿಯದಂತೆ ಮನೆ ಮಾರಾಟ, ಬ್ಯಾಂಕ್‌ಗಳಲ್ಲಿ ಸಾಲ ಪಡೆದು ವಂಚನೆ, ದೂರು ನೀಡಿದರೂ ನ್ಯಾಯಕ್ಕಾಗಿ ಅಲೆದಾಟ, ಇಬ್ಬರು ಮನೆ ಮಾಲೀಕರಿಂದ 14 ಮಂದಿಗೆ ವಂಚನೆ
Home leese
Home leese
Published on: 

ಬೆಂಗಳೂರು: ಉದ್ಯೋಗ, ವ್ಯಾಪಾರ ಸೇರಿ ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬಂದು ನೆಲೆಸುವವರನ್ನು ಗುರಿಯಾಗಿಸಿಕೊಂಡು, ಮನೆಗಳನ್ನು ಲೀಸ್‌ಗೆ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸುವ ಜಾಲ ನಗರದಲ್ಲಿ ಸಕ್ರಿಯವಾಗಿದೆ.

ಭೋಗ್ಯದ ಕರಾರು ಮಾಡಿಕೊಂಡು ಹಣ ಪಡೆದು, ಅದೇ ಮನೆಗಳನ್ನು ಲೀಸ್‌ದಾರರಿಗೆ ತಿಳಿಯದಂತೆ ಬೇರೆಯವರ ಹೆಸರಿಗೆ ಮಾರಾಟ ಮಾಡುವುದು, ಮನೆಗಳ ದಾಖಲೆಗಳನ್ನು ಅಡಮಾನವಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಸೇರಿ ಹಲವು ರೀತಿಯಲ್ಲಿ ವಂಚನೆ ಎಸಗಲಾಗುತ್ತಿದೆ. ಇದರಿಂದ ಜೀವನಪೂರ್ತಿ ದುಡಿದು ಕೂಡಿಟ್ಟ ಹಣವನ್ನು ಮನೆಗಾಗಿ ಹೂಡಿಕೆ ಮಾಡಿದವರು ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ.

ಮನೆ ಮಾಲೀಕರು ಮತ್ತು ಮಧ್ಯವರ್ತಿಗಳ ಮಾತು ನಂಬಿ ಲಕ್ಷಾಂತರ ರೂಪಾಯಿ ನೀಡಿ ಮನೆ, ಪ್ಲ್ಯಾಟ್‌ಗಳನ್ನು ಲೀಸ್‌ಗೆ ಪಡೆಯುವವರು, ಕೆಲ ತಿಂಗಳ ಬಳಿಕ ಬ್ಯಾಂಕ್‌ಗಳ ನೋಟಿಸ್‌ಗಳಿಂದ ಕಂಗಾಲಾಗುತ್ತಿದ್ದಾರೆ. ತಾವು ಹಣ ನೀಡಿ ಪಡೆದಿರುವ ಮನೆ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿರುವುದು ಅಥವಾ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿರುವುದು ಗೊತ್ತಾದಾಗ ಸಂತ್ರಸ್ತರು ಕಂಗಾಲಾಗುತ್ತಿದ್ದಾರೆ. ಹಣವೂ ಇಲ್ಲ, ನೆಮ್ಮದಿಯಿಂದ ವಾಸಿಸಲು ಮನೆಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

14 ಮಂದಿಗೆ ಕೋಟ್ಯಂತರ ರೂ.ಟೋಫಿ:

ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆ.ಎಸ್. ವಿಶ್ವನಾಥ್ ಮತ್ತು ಗಿರೀಶ್ ಎಂಬುವರ ವಿರುದ್ಧ ಲೀಸ್ ಹೆಸರಿನಲ್ಲಿ 14 ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಆರೋಪಿಗಳು ಮನೆಗಳನ್ನು ಲೀಸ್‌ಗೆ ನೀಡುವ ನೆಪದಲ್ಲಿ ಭೋಗ್ಯದಾರರಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ. ಬಳಿಕ, ಲೀಸ್‌ಗೆ ಪಡೆದವರಿಗೆ ತಿಳಿಯದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿಗೆ ಮನೆಗಳನ್ನು ಮಾರಾಟ ಮಾಡಿರುವುದು ಮತ್ತು ಕ್ರಯಪತ್ರಗಳನ್ನು ಮಾಡಿಕೊಟ್ಟಿರುವ ಆರೋಪಗಳಿವೆ. ಅಷ್ಟೇ ಅಲ್ಲದೆ, ಇದೇ ಆಸ್ತಿಗಳ ದಾಖಲೆಗಳನ್ನು ಬಳಸಿಕೊಂಡು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದು, ಸಾಲ ಮರುಪಾವತಿಸದೆ ಬಿಟ್ಟಿರುವುದಾಗಿ ಸಂತ್ರಸ್ತರು ಆರೋಪಿಸಿದ್ದಾರೆ.

ಕೆಲ ತಿಂಗಳು ಕಳೆದ ಬಳಿಕ ಬ್ಯಾಂಕ್‌ಗಳಿಂದ ಮನೆ ಖಾಲಿ ಮಾಡುವಂತೆ ನೋಟಿಸ್‌ಗಳು ಬಂದಾಗಲೇ ಸಂತ್ರಸ್ತರಿಗೆ ವಂಚನೆಯ ಸ್ವರೂಪ ತಿಳಿಯುತ್ತಿದೆ. ಲಕ್ಷಾಂತರ ರೂಪಾಯಿ ಪಾವತಿಸಿ ಮನೆ ಪಡೆದಿದ್ದರೂ, ಆಸ್ತಿಯ ಮೇಲಿನ ಹಕ್ಕು ಮತ್ತು ವಾಸದ ಭದ್ರತೆ ಇಲ್ಲದಂತಾಗಿದೆ.

ನಾಲ್ಕು ಮನೆಗಳ ಲೀಸ್ ಹೆಸರಿನಲ್ಲಿ

₹1.01 ಕೋಟಿ ವಂಚನೆ ಆರೋಪ

ಸರಸ್ವತಿ ನಗರದಲ್ಲಿ ಕೆ.ಎಸ್. ವಿಶ್ವನಾಥ್ ಎಂಬ ಮನೆ ಮಾಲೀಕ ನಾಲ್ಕು ಮನೆಗಳನ್ನು ಲೀಸ್‌ಗೆ ನೀಡುವ ಮೂಲಕ ಒಟ್ಟು ₹1.01 ಕೋಟಿ ವಂಚಿಸಿದ್ದಾರೆ. ಆರ್. ವಿಜಯ್ ಎಂಬುವರಿಗೆ 20 ಲಕ್ಷ ರೂ. ಎನ್.ಯೋಗೆಶ್ ಅವರಿಗೆ 20 ಲಕ್ಷ ರೂ. ಬಿ.ಎಲ್ ಮಹೇಶ್ ಕುಮಾರ್ ಎಂಬುವರಿಗೆ 19 ಲಕ್ಷ ರೂ. ಜಿ.ಸುವರ್ಣ ಅವರಿಗೆ 21 ಲಕ್ಷ ರೂ ಸೇರಿ ಕೋಟ್ಯಂತರ ರೂ. ಪಡೆದು ಮನೆಗಳನ್ನು ಲೀಜ್‌ಗೆ ನೀಡಿದದಾರೆ. ಇದೀಗ ಸಂತ್ರಸ್ತರು ತಮ್ಮ ಹಣ ವಾಪಸ್ ಪಡೆಯಲು ಪರದಾಡುವಂತಾಗಿದೆ.

ಇದೇ ರೀತಿ, ಸುಬ್ಬಣ್ಣ ಗಾರ್ಡನ್ ನಿವಾಸಿ ಗಿರೀಶ್ ಎಂಬುವರು ಜ್ಯೋತಿ ಎಂಬ ಮಹಿಳೆಗೆ 16 ಲಕ್ಷ ವಂಚಿಸಿರುವ ಆರೋಪವಿದೆ. ಗೋವಿಂದರಾಜನಗರ ವ್ಯಾಪ್ತಿಯಲ್ಲಿ ಗಿರೀಶ್ ವಿರುದ್ಧ ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೀಸ್‌ಗೆ ಮನೆ ನೀಡುವಾಗ ಮಾಡಿಕೊಂಡಿರುವ ಕರಾರು, ಹಣ ವರ್ಗಾವಣೆಯ ದಾಖಲೆಗಳು ಮತ್ತು ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳೇ ಸಂತ್ರಸ್ತರಿಗೆ ನ್ಯಾಯ ಪಡೆಯಲು ಪ್ರಮುಖ ಆಧಾರಗಳಾಗಿವೆ. ಆದರೂ, ಹಣ ವಾಪಸ್ ಪಡೆಯುವುದು ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದ ಬಗೆಹರಿಸಿಕೊಳ್ಳುವುದು ಸುಲಭವಾಗಿಲ್ಲ ಎಂಬುದು ಸಂತ್ರಸ್ತರ ಅಳಲು.

ದೂರು ನೀಡಲು ಹೋದರೂ

ಸಬೂಬು ಹೇಳುವ ಪೊಲೀಸರು?

ಲೀಸ್ ಹೆಸರಿನಲ್ಲಿ ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಹಣಕಾಸು ಮತ್ತು ಆಸ್ತಿ ವಿಚಾರಗಳು ಸಿವಿಲ್ ಸ್ವರೂಪದ್ದಾಗಿದ್ದು, ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಪೊಲೀಸರು ಸಲಹೆ ನೀಡುತ್ತಿದ್ದಾರೆ ಎಂಬುದು ಸಂತ್ರಸ್ತರ ಆರೋಪವಾಗಿದೆ.

ಆದರೆ, ಲೀಸ್ ಹೆಸರಿನಲ್ಲಿ ಹಣ ಪಡೆದು, ಅದೇ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು ಅಥವಾ ದಾಖಲೆಗಳನ್ನು ಬಳಸಿ ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ ವಂಚನೆಯ ಉದ್ದೇಶವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುವ ಅಗತ್ಯವಿದೆ. ಸಂತ್ರಸ್ತರ ಪ್ರಕಾರ, ಕೆಲ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಲು ಹಿಂದೇಟು ಹಾಕಲಾಗುತ್ತಿದೆ. ಹೀಗಾಗಿ, ವಂಚನೆಗೆ ಒಳಗಾದವರು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ.

ಲೀಸ್ ಹಣ ನೀಡಿದವರ ಗೋಳು

ಬೆಂಗಳೂರಿನಲ್ಲಿ ಮನೆ ಖರೀದಿಸಲು ಸಾಧ್ಯವಾಗದೆ, ಬಾಡಿಗೆ ಅಥವಾ ಲೀಸ್ ಮೂಲಕ ನೆಲೆ ಕಂಡುಕೊಳ್ಳಲು ಮುಂದಾಗುವ ಮಧ್ಯಮ ವರ್ಗದ ಕುಟುಂಬಗಳು ಇಂತಹ ವಂಚನೆಗಳಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ತಮ್ಮ ಉಳಿತಾಯದ ಹಣ, ಸಾಲ ಅಥವಾ ಕುಟುಂಬದ ನೆರವಿನಿಂದ ಲಕ್ಷಾಂತರ ರೂಪಾಯಿ ಹೊಂದಿಸಿ ಭೋಗ್ಯದ ಹಣ ಪಾವತಿಸಿದವರಿಗೆ, ಹಣ ಕಳೆದುಕೊಂಡ ಬಳಿಕ ಮತ್ತೊಂದು ಮನೆ ಹುಡುಕುವುದೂ ಸವಾಲಾಗುತ್ತಿದೆ.

ನೀಡಿದ ಹಣ ಮರಳಿ ಸಿಗುವ ಭರವಸೆ ಇಲ್ಲ:

ಬ್ಯಾಂಕ್ ನೋಟಿಸ್ ಬಂದರೆ ಮನೆಯನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾನೂನು ಹೋರಾಟಕ್ಕೆ ಹಣ ಹೊಂದಿಸುವುದು, ವಕೀಲರ ನೆರವು ಪಡೆಯುವುದು ಮತ್ತು ಕುಟುಂಬದ ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸಂತ್ರಸ್ತರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ.

ಮನೆಗಳನ್ನು ಪಡೆಯುವ ಮುನ್ನ:

ಸಾರ್ವಜನಿಕರು ಲೀಸ್‌ಗೆ ಮನೆ ಪಡೆಯುವ ಮುನ್ನ ಆಸ್ತಿಯ ಮಾಲೀಕತ್ವದ ದಾಖಲೆಗಳು, ನೋಂದಾಯಿತ ಕ್ರಯಪತ್ರ, ಆಸ್ತಿಯ ಮೇಲಿರುವ ಸಾಲ ಅಥವಾ ಅಡಮಾನದ ವಿವರಗಳನ್ನು ಪರಿಶೀಲಿಸುವುದು ಅತ್ಯವಾಗಿದೆ. ಸಾಧ್ಯವಾದಷ್ಟು ವಕೀಲರ ಮೂಲಕ ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡು, ಹಣ ಪಾವತಿಸುವಾಗ ಬ್ಯಾಂಕ್ ವಹಿವಾಟು ನಡೆಸಿ, ಕರಾರು ಪತ್ರದಲ್ಲಿ ಹಣದ ಮೊತ್ತ, ಅವಧಿ, ಮರುಪಾವತಿ ಷರತ್ತುಗಳು ದಾಖಲಿಸಿಕೊಳ್ಳುವುದು ಸೂಕ್ತವಾಗಿದೆ.

ಸರಸ್ವತಿನಗರದಲ್ಲಿ ಮನೆಯನ್ನು ಭೋಗ್ಯ ಪಡೆದು ವಂಚನೆಗೆ ಒಳಗಾಗಿದ್ದೇವೆ. ಮನೆ ಮಾಲೀಕ ಕೆ.ಎಸ್.ವಿಶ್ವನಾಥ್ ಅವರ ಸ್ನೇಹಿತರು ಸೇರಿ ಮೂವರು 61 ಲಕ್ಷ ರೂ. ವಂಚನೆ ಮಾಡಿದ್ದಾರೆ. ಈಗ ಬ್ಯಾಂಕ್‌ನವರು ಮನೆ ಖಾಲಿ ಮಾಡಿ, ಮನೆಯ ಮೆಲೆ 63 ಲಕ್ಷ ರೂ. ಬ್ಯಾಂಕ್ ಸಾಲವಿದೆ ಎಂದು ಹೇಳುತ್ತಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಮಾಲೀಕ ಮತ್ತು ಅವರ ಸ್ನೇಹಿತರು ಪರಾರಿಯಾಗಿದ್ದಾರೆ.

-ಆರ್.ವಿಜಯ್ ಮತ್ತು ಎನ್. ಯೋಗೇಶ್, ಸಂತ್ರಸ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net