

ದೇವನಹಳ್ಳಿ :
ಶಿಕ್ಷಕರನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು, ಮಹಿಳಾ ಶಿಕ್ಷಕಿಯರು ಅನುಭವಿಸುತ್ತಿರುವ ಅಂತರಿಕ, ವರ್ಗಾವಣೆ ಸಮಸ್ಯೆ ಸೇರಿ ಶಿಕ್ಷಕರ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ಎಂಎಲ್ಸಿ ಪಿ.ಪುಟ್ಟಣ್ಣ ಹೇಳಿದರು.
ಪಟ್ಟಣದ ಖಾಸಗಿ ಮತ್ತು ಸರ್ಕಾರಿ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಕುಂದುಕೊರತೆ ಆಲಿಸಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಗುಣಮಟ್ಟದ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ ಮತ್ತು ಕಲಿಕಾ ವಾತಾವರಣದ ಸ್ಥಿತಿಗತಿ ಪರಿಶೀಲಿಸಿ ಸುಧಾರಣೆಗೆ ಕ್ರಮವಹಿಸಲಾಗಿದೆ.
ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೌಚಗೃಹ, ಸ್ವಚ್ಛತಾ ಸಿಬ್ಬಂದಿ, ಪ್ರೌಢಶಾಲೆಗಳಲ್ಲಿ ಅಟೆಂಡರ್ಗಳ ಅಭಾವವಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಶಾಲಾ ಶೌಚಗೃಹಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಬೇಕು. ಶಾಲೆಗಳ ನಿರ್ವಹಣೆಗೆ ಸರ್ಕಾರ ನೀಡುತ್ತಿರುವ ಅನುದಾನ ಕಡಿಮೆಯಾಗಿದ್ದು, ಹೆಚ್ಚು ಅನುದಾನ ಬಿಡುಗಡೆ ಮಾಡಲು ಸರ್ಕಾಕ್ಕೆ ಪತ್ರ ಬರೆಯಲಾಗುವುದು ಎಂದರು.
ಶಿಕ್ಷಕರ ವೇತನ ಭತ್ಯೆ, ಅನುದಾನಿತ ಶಾಲೆಗಳ ತೊಡಕು ಹಾಗೂ ಬೋಧಕೇತರ ಕಾರ್ಯದ ಒತ್ತಡದ ಕುರಿತು ಶಿಕ್ಷಕರಿಂದ ಮನವಿ ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರೌಢಶಾಲೆ, ಪಿಯು ಕಾಲೇಜು ಶಿಕ್ಷಕರನ್ನು ಪಾಠ ಬಿಟ್ಟು ಇತರೆ ಕೆಲಸಗಳಿಗೆ ಬಳಸಿಕೊಳ್ಳದಂತೆ ಕಾನೂನು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸಿ.ಜಗನ್ನಾಥ್, ಕಾಂಗ್ರೆಸ್ ಮುಖಂಡರಾದ ಶ್ರೀಧರ್ಮೂರ್ತಿ, ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ನಿಲಕಂಠಗಾವಕರ್, ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಜ್ಜಯ್ಯ, ಮುನಿವೀರಪ್ಪ, ಅನಂತ ವಿದ್ಯಾನಿಕೇತನ ಶಾಲೆ ಕಾರ್ಯದರ್ಶಿ ಕೆಂಪೇಗೌಡ, ಆದರ್ಶ, ಕೊಟ್ರೇಶ್ ಇತರರು ಇದ್ದರು.