ಮಕ್ಕಳಿಗೆ ಶಿಕ್ಷಣದ ಜತೆಗೆ ಜೀವನಮೌಲ್ಯ ತಿಳಿಸಿ

 ‘ಕಲಾ ಪ್ರತಿಭೋತ್ಸವ’
‘ಕಲಾ ಪ್ರತಿಭೋತ್ಸವ’
Published on

ಪ್ರಮುಖ ಮುಖ್ಯಾಂಶಗಳು

  • * 15 ವರ್ಷ ಬಳಿಕ ‘ಕಲಾ ಪ್ರತಿಭೋತ್ಸವ’ ಆರಂಭ
  • * ಪ್ರತಿಭಾವಂತರಿಗೆ ನಗದು ಬಹುಮಾನಸಹಿತ ಪ್ರೋತ್ಸಾಹ
ಬೆಂಗಳೂರು: ಶಿಕ್ಷಣ ಎಂದರೆ ಮಕ್ಕಳು ಕೇವಲ ಅಂಕ ಗಳಿಸುವುದಲ್ಲ. ಲೋಕಜ್ಞಾನ ಹೊಂದಿರಬೇಕು, ಜೀವನಮೌಲ್ಯ ತಿಳಿದಿರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಲಾ ಪ್ರತಿಭೋತ್ಸವ’ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಹೊರಾಂಗಣ ಚಟುವಟಿಕೆಗಳಿಗಿಂತ ಮೊಬೈಲ್ ಗೀಳು ಹೆಚ್ಚಾಗಿದೆ. ವಿಡಿಯೋ ಗೇಮ್ಸ್‌ನಿಂದಾಗಿ ಮಕ್ಕಳು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದು, ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಪೋಷಕರು ಜಾಗೃತರಾಗಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಆವರ ಆಸಕ್ತಿಯ ವಿಷಯದಲ್ಲಿ ಮುನ್ನಡೆಯಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಭೋತ್ಸವ ಪುನಾರಂಭ:

ಕಳೆದ 15 ವರ್ಷಗಳಿಂದ ಸ್ಥಗಿತಗೊಂಡಿದ್ದ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಪುನಾರಂಭ ಮಾಡಲಾಗಿದೆ. ಇಂತಹ ಸ್ಪರ್ಧೆಗಳು ಮಕ್ಕಳನ್ನು ಪ್ರೋತ್ಸಾಹಿಸುವುದರ ಜತೆಗೆ, ಅವರಲ್ಲಿ ಧೈರ್ಯ ತುಂಬುತ್ತದೆ. ಏಕವ್ಯಕ್ತಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಕ್ರಮವಾಗಿ 15 ಸಾವಿರರೂ., 10 ಸಾವಿರ ರೂ., 7,500 ರೂ. ಹಾಗೂ ಸಮೂಹ ಪ್ರಕಾರದ ನಾಟಕ ಸ್ಪರ್ಧೆಯಲ್ಲಿ ಕ್ರಮವಾಗಿ 50 ಸಾವಿರ ರೂ., 40 ಸಾವಿರ ರೂ. ಹಾಗೂ 30 ಸಾವಿರ ರೂ. ಬಹುಮಾನ ನೀಡಲಾಗುವುದು. ಹಾಗೆಂದು ಇಲ್ಲಿ ಹಣ ಮುಖ್ಯವಲ್ಲ. ಬದಲಿಗೆ, ಮಕ್ಕಳಲ್ಲಿನ ಪ್ರತಿಭೆಯನ್ನು ಪೋಷಿಸುವುದು ಮುಖ್ಯವಾಗಿದೆ ಎಂದರು.

ಮಕ್ಕಳ ಬೆಳವಣಿಗೆ ಸಂವೇದನೆ ಅಗತ್ಯ:

ಮಕ್ಕಳ ಬೆಳವಣಿಗೆಗೆ ಎಷ್ಟು ಆದ್ಯತೆ ನೀಡಲಾಗಿದೆ ಎನ್ನುವುದಕ್ಕೆ ಆ ದೇಶದ ಸಂವೇದನೆ ಸಾಕ್ಷಿಯಾಗುತ್ತದೆ. ಸ್ವೀಡನ್‌ನಲ್ಲಿ ಪ್ರಧಾನಿ ಬೇಕಾದರೆ ಆಗಬಹುದು. ಆದರೆ, ಶಿಕ್ಷಕನಾಗುವುದು ಸುಲಭವಲ್ಲ. ಏಕೆಂದರೆ, ಆ ದೇಶ ಮಕ್ಕಳ ಬೆಳವಣಿಗೆಯಲ್ಲಿ ಸೂಕ್ಷ್ಮತೆ ಮತ್ತು ಸಂವೇದನೆ ಬಯಸುತ್ತದೆ. ಆದರೆ, ಭಾರತ ಆ ವಿಷಯದಲ್ಲಿ ಬಹಳ ಹಿಂದೆ ಇದ್ದು, ನಮ್ಮಲ್ಲಿ ಮಕ್ಕಳು, ಮಕ್ಕಳ ಸಾಹಿತ್ಯ ಹಾಗೂ ರಂಗಭೂಮಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷದ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ನಟಿ ಯಮುನಾ ಶ್ರೀನಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಇತರರಿದ್ದರು.

ಕಿಶೋರ ವಯಸ್ಸಿನ (13-18) ಮಕ್ಕಳಲ್ಲಿ ಮೂಡಬಹುದಾದ ಎಲ್ಲ ಕುತೂಹಲಗಳು ಇಂದು 7ನೇ ವಯಸ್ಸಿಗೇ ಮೂಡುತ್ತಿವೆ. ಅಪರಾಧ ಕೃತ್ಯಗಳಲ್ಲಿ ಈ ವಯೋಮಾನದ ಮಕ್ಕಳು ಹೆಚ್ಚು ಭಾಗಿಯಾಗುತ್ತಿರುವುದು ಆತಂಕದ ವಿಚಾರ. ಈಗ ಮಕ್ಕಳನ್ನು ಕಲೆ, ಸಂಸ್ಕೃತಿ, ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸದಿದ್ದರೆ ಮುಂದೆ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.

- ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net