ಭಾರತದಲ್ಲಿ 8 ಲಕ್ಷ ಪಿರೆಲ್ಲಿ ಪ್ರೀಮಿಯಂ ಟೈರ್ ಉತ್ಪಾದನೆ ಗುರಿ

ಪಿರೆಲ್ಲಿ-ಬಿಕೆಟಿ ನಡುವೆ ಒಪ್ಪಂದ
A partnership agreement was signed between Pirelli and BKT and the heads of both firms, Giuliano Menassi, Andrea Casaluci, Rajeev Poddar, Antonio Bartoli, Marco Tronchetti Provera, Satish Sharma were present.
ಪಿರೆಲ್ಲಿ ಮತ್ತು ಬಿಕೆಟಿ ನಡುವೆ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ವೇಳೆ ಉಭಯ ಸಂಸ್ಥೆಗಳ ಮುಖ್ಯಸ್ಥರಾದ ಗಿಯುಲಿಯಾನೊ ಮೆನಾಸ್ಸಿ, ಆಂಡ್ರಿಯಾ ಕ್ಯಾಸಲೂಸಿ, ರಾಜೀವ್ ಪೊದ್ದಾರ್, ಆಂಟೋನಿಯೊ ಬಾರ್ಟೋಲಿ, ಮಾರ್ಕೊ ಟ್ರೋನ್ಚೆಟ್ಟಿ ಪ್ರೊವೆರಾ, ಸತೀಶ್ ಶರ್ಮಾ ಉಪಸ್ಥಿತರಿದ್ದರು.
Published on: 

ಮುಂಬೈ: ಭಾರತದ ವೇಗವಾಗಿ ಬೆಳೆಯುತ್ತಿರುವ ವಾಹನೋದ್ಯಮ ಮತ್ತು ಪ್ರೀಮಿಯಂ ಕಾರು ಟೈರ್ ಮಾರುಕಟ್ಟೆಯ ಅವಕಾಶಗಳನ್ನು ಬಳಸಿಕೊಳ್ಳಲು ಇಟಲಿಯ ಪ್ರಮುಖ ಟೈರ್ ತಯಾರಿಕಾ ಕಂಪನಿ ಪಿರೆಲ್ಲಿ ಮತ್ತು ಭಾರತದ ಬಾಲಕೃಷ್ಣ ಇಂಡಸ್ಟ್ರೀಸ್ ಲಿಮಿಟೆಡ್ (ಬಿಕೆಟಿ) ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಿದ್ದು, 2030ರ ವೇಳೆಗೆ ಪಿರೆಲ್ಲಿ ಬ್ರ್ಯಾಂಡ್‌ನ 8 ಲಕ್ಷ ಪ್ರೀಮಿಯಂ ಕಾರು ಟೈರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿವೆ.

ಒಪ್ಪಂದದ ಮೊದಲ ಹಂತದಲ್ಲಿ ಬಿಕೆಟಿ ತನ್ನ ನೂತನ ಉತ್ಪಾದನಾ ಘಟಕವೊಂದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಿರೆಲ್ಲಿ ಬ್ರ್ಯಾಂಡ್‌ನ ಟೈರ್‌ಗಳನ್ನು ತಯಾರಿಸಲಿದೆ. ಈ ಉತ್ಪನ್ನಗಳು ಪಿರೆಲ್ಲಿಯ ನಿರ್ದಿಷ್ಟ ತಾಂತ್ರಿಕ ಮತ್ತು ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲಿವೆ. ಎರಡನೇ ಹಂತದಲ್ಲಿ ನಿಗದಿತ ಷರತ್ತುಗಳು ಈಡೇರಿದರೆ, ಉಭಯ ಕಂಪನಿಗಳು ತಲಾ ಶೇ.50ರಷ್ಟು ಪಾಲುದಾರಿಕೆಯ ಜಂಟಿ ಉದ್ಯಮ ಸ್ಥಾಪಿಸುವ ಯೋಜನೆ ಹೊಂದಿವೆ.

ಮಾರುಕಟ್ಟೆ ವಿಸ್ತರಣೆಗೆ ಕಾರ್ಯತಂತ್ರ

2030ರ ವೇಳೆಗೆ ಭಾರತದಲ್ಲಿ ಕಾರು ನೋಂದಣಿ ಪ್ರಮಾಣ ಶೇ.5ರಿಂದ 7ರಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಪ್ರೀಮಿಯಂ ಕಾರು ಟೈರ್ ಮಾರುಕಟ್ಟೆ ಸುಮಾರು 5 ಪಟ್ಟು ವಿಸ್ತರಿಸಬಹುದೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಿರೆಲ್ಲಿಯ ಉನ್ನತ ತಂತ್ರಜ್ಞಾನ ಮತ್ತು ಪ್ರೀಮಿಯಂ ಉತ್ಪನ್ನಗಳ ಪರಿಣತಿಗೆ ಬಿಕೆಟಿಯ ಭಾರತೀಯ ಉತ್ಪಾದನಾ ಸಾಮರ್ಥ್ಯ ಹಾಗೂ ಕೈಗಾರಿಕಾ ನೆಲೆ ಪೂರಕವಾಗಲಿದೆ. ಇಲ್ಲಿ ಉತ್ಪಾದಿಸುವ ಟೈರ್‌ಗಳನ್ನು ದೇಶೀಯ ಮಾರುಕಟ್ಟೆಯ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೂ ಪೂರೈಸಲು ಉದ್ದೇಶಿಸಿವೆ.

ಪ್ರಸ್ತುತ ಭಾರತದಲ್ಲಿ ವಾಣಿಜ್ಯ ಚಟುವಟಿಕೆಗಳ ಮೂಲಕವೇ ಕಾರ್ಯನಿರ್ವಹಿಸುತ್ತಿರುವ ಪಿರೆಲ್ಲಿಗೆ ಈ ಒಪ್ಪಂದ ದೇಶದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ನೆರವಾಗಲಿದೆ. ಕೃಷಿ, ಕೈಗಾರಿಕೆ, ನಿರ್ಮಾಣ ಮತ್ತು ಗಣಿಗಾರಿಕೆ ಕ್ಷೇತ್ರಗಳಿಗೆ ಟೈರ್‌ಗಳನ್ನು ಉತ್ಪಾದಿಸುವ ಬಿಕೆಟಿ, ಪ್ರಯಾಣಿಕ ಕಾರುಗಳ ಟೈರ್ ಮಾರುಕಟ್ಟೆಯಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಈ ಸಹಭಾಗಿತ್ವವನ್ನು ಬಳಸಿಕೊಳ್ಳಲಿದೆ.

ಜಾಗತಿಕ ವಾಹನೋದ್ಯಮದ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದ್ದು, ಬಿಕೆಟಿ ಜತೆಗಿನ ಪಾಲುದಾರಿಕೆ ದೇಶದ ಮಾರುಕಟ್ಟೆಯಲ್ಲಿ ಕಂಪನಿಯ ಸ್ಥಾನವನ್ನು ಬಲಪಡಿಸುವ ವಿಶ್ವಾಸವಿದೆ.
ಮಾರ್ಕೊ ಟ್ರೊಂಚೆಟ್ಟಿ ಪ್ರೊವೆರಾ, ಪಿರೆಲ್ಲಿ ಕಾರ್ಯನಿರ್ವಾಹಕ ಅಧ್ಯಕ್ಷ

ಬೆಳೆಯುತ್ತಿರುವ ಮಾರುಕಟ್ಟೆಯ ಅವಕಾಶಗಳನ್ನು ಬಳಸಿಕೊಳ್ಳಲು ಈ ಸಹಭಾಗಿತ್ವ ನೆರವಾಗಲಿದ್ದು, ಕಂಪನಿಯ ಉತ್ಪಾದನಾ ಸಾಮರ್ಥ್ಯ, ಗುಣಮಟ್ಟ ಮತ್ತು ದೀರ್ಘಕಾಲದ ಅನುಭವವು ಈ ಪಾಲುದಾರಿಕೆಗೆ ಬಲವಾದ ಅಡಿಪಾಯವಾಗಲಿದೆ.

ಅರವಿಂದ್ ಪೊದ್ದಾರ್, ಬಿಕೆಟಿ ಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net