ಗೋಡೆಗಳ ತೇವಾಂಶದ ಬಗ್ಗೆ ಮುಂಜಾಗ್ರತೆ ಇರಲಿ

ಕಟ್ಟಡ ನಿರ್ಮಾಣದ ವೇಳೆ ಎಚ್ಚರಿಕೆ ಅಗತ್ಯ
A view of a house wall damaged by a leak
ಮನೆಯ ಗೊಡೆ ಲೀಕೇಜ್ ನಿಂದ ಹಾನಿಗೊಳಗಾಗಿರುವ ದೃಶ್ಯ
Published on: 

ಜೀವನದಲ್ಲಿ ಒಂದು ಸ್ವಂತ ಮನೆ ನಿರ್ಮಾಣ ಮಾಡಬೇಕೆಂಬುದು ಹಲವರ ಕನಸು. ಅವರವರ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿ ಮನೆಗಳನ್ನು ನಿರ್ಮಿಸುತ್ತಾರೆ. ಹಾಗೆ ನಿರ್ಮಿಸುವ ಮನೆಗಳಲ್ಲಿ ಕೆಲವೇ ವರ್ಷದಲ್ಲಿ ಗೋಡೆಗಳಲ್ಲಿ ಕಾಣುಣ ತೇವಾಂಶ ಮನೆಯ ಕಟ್ಟಡದ ಆಯಸ್ಸು ಮಾತ್ರವಲ್ಲದೆ ಅಲ್ಲಿ ವಾಸಿಸುವವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆ ನಿರ್ಮಿಸುವಾಗ ಗೋಡೆಗಳಲ್ಲಿ ತೇವಾಂಶ ಉಳಿಯದಂತೆ ಎಚ್ಚರ ವಹಿಸಬೇಕು.

ಗೋಡೆಗಳ ಮೇಲೆ ಕಾಣಿಸಿಕೊಳ್ಳುವ ಬಣ್ಣದ ಗುಳ್ಳೆಗಳು, ಕಪ್ಪು ಕಲೆಗಳು, ಬಿಳಿ ಉಪ್ಪಿನಂಥ ಪದರ, ಪ್ಲಾಸ್ಟರ್ ಅಥವಾ ಬಣ್ಣ ಕಿತ್ತುಬರುವಿಕೆ, ಗೋಡೆಗಳಿಂದ ಕೆಟ್ಟ ವಾಸನೆ ಇವುಗಳನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ. ಆದರೆ ಆರಂಭದಲ್ಲೇ ಸಮಸ್ಯೆಯನ್ನು ಗುರುತಿಸಿ ಪರಿಹರಿಸದಿದ್ದರೆ ಕಟ್ಟಡದ ಬಾಳಿಕೆ, ಒಳಾಂಗಣದ ಸೌಂದರ್ಯ, ಪೀಠೋಪಕರಣಗಳು ಹಾಗೂ ಮನೆಯವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಗೋಡೆಯ ತೇವಾಂಶಕ್ಕೆ ಕಾರಣಗಳು :

ಕಟ್ಟಡಗಳಲ್ಲಿ ತೇವಾಂಶ ಕಾಣಿಸಿಕೊಳ್ಳಲು ಪ್ರಮುಖವಾಗಿ ನಾಲ್ಕೈದು ಕಾರಣಗಳಿರುತ್ತವೆ. ನೆಲದಿಂದ ಗೋಡೆಗಳ ಮೂಲಕ ಮೇಲಕ್ಕೆ ಏರುವ ತೇವಾಂಶ. ಮಣ್ಣಿನಲ್ಲಿರುವ ನೀರು ಇಟ್ಟಿಗೆ, ಕಾಂಕ್ರೀಟ್ ಮತ್ತು ಗಾರೆಗಳಲ್ಲಿನ ಸೂಕ್ಷ್ಮ ರಂಧ್ರಗಳ ಮೂಲಕ ಮೇಲಕ್ಕೆ ಚಲಿಸುತ್ತದೆ. ಅಡಿಪಾಯದಲ್ಲಿ ಸೂಕ್ತ ತೇವ ನಿರೋಧಕ ಪದರ ಅಳವಡಿಸದಿದ್ದರೆ ಈ ಸಮಸ್ಯೆ ಹೆಚ್ಚಾಗಬಹುದು. ಮಳೆನೀರಿನ ಸೋರಿಕೆ, ಮೇಲ್ಛಾವಣಿ, ಪ್ಯಾರಪೆಟ್ ಗೋಡೆ, ಕಿಟಕಿಗಳ ಅಂಚು, ಬಾಲ್ಕನಿ ಹಾಗೂ ಹೊರಗೋಡೆಗಳಲ್ಲಿನ ಬಿರುಕುಗಳ ಮೂಲಕ ನೀರು ಒಳನುಗ್ಗಬಹುದು. ಮೂರನೆಯದು ನೀರಿನ ಪೈಪ್‌ಗಳ ಸೋರಿಕೆ. ಗೋಡೆಯೊಳಗೆ ಅಳವಡಿಸಿರುವ ಪೈಪ್‌ಗಳಲ್ಲಿ ಸಣ್ಣ ಪ್ರಮಾಣದ ಸೋರಿಕೆಯಿದ್ದರೂ ದೀರ್ಘಕಾಲದಲ್ಲಿ ಗೋಡೆ ಸಂಪೂರ್ಣ ತೇವಗೊಳ್ಳಬಹುದು. ನಾಲ್ಕನೆಯದು ಗಾಳಿಯಲ್ಲಿನ ತೇವಾಂಶ ತಂಪಾದ ಗೋಡೆ ಅಥವಾ ಮೇಲ್ಮೈಯನ್ನು ತಾಕಿದಾಗ ನೀರಿನ ಹನಿಗಳಾಗಿ ಪರಿವರ್ತನೆಯಾಗಬಹುದು. ಗಾಳಿಯ ಸಂಚಾರ ಕಡಿಮೆಯಿರುವ ಕೊಠಡಿಗಳಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಗೋಡೆ ತೇವಗೊಂಡಾಗ ಅದರ ಮೇಲೆ ಹೊಸ ಬಣ್ಣ ಬಳಿಯುವುದು ಅಥವಾ ಜಲನಿರೋಧಕ ಲೇಪನ ಹಚ್ಚುವುದರಿಂದ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಸಮಸ್ಯೆಯ ಮೂಲವನ್ನು ಹುಡುಕಿ ಸೂಕ್ತ ದುರಸ್ತಿ ಮಾಡಬೇಕು.

ನಿರ್ಮಾಣದ ಹಂತದಲ್ಲೇ ಮುನ್ನೆಚ್ಚರಿಕೆ ವಹಿಸಿ

ಮನೆ ನಿರ್ಮಿಸುವಾಗ ಅಡಿಪಾಯದ ಮೇಲ್ಭಾಗದಲ್ಲಿ ಸೂಕ್ತ ಡ್ಯಾಂಪ್ ಪ್ರೂಫ್ ಕೋರ್ಸ್ ಅಳವಡಿಸುವುದು ಮುಖ್ಯ. ಇದು ನೆಲದಿಂದ ಗೋಡೆಗಳಿಗೆ ತೇವಾಂಶ ಏರುವುದನ್ನು ತಡೆಯುವ ನಿರೋಧಕ ಪದರವಾಗಿದೆ. ಕಟ್ಟಡದ ಸುತ್ತಲಿನ ನೆಲದಲ್ಲಿ ಮಳೆನೀರು ಮನೆಯ ಅಡಿಪಾಯದ ಕಡೆ ನಿಲ್ಲದಂತೆ ಸೂಕ್ತ ಇಳಿಜಾರು ನೀಡಬೇಕು. ಮೇಲ್ಛಾವಣಿಯಲ್ಲಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ, ಗುಣಮಟ್ಟದ ಜಲನಿರೋಧಕ ಪದರ ಹಾಗೂ ಮಳೆನೀರು ಕೊಳವೆಗಳನ್ನು ಅಳವಡಿಸಬೇಕು.

ಸ್ನಾನಗೃಹ, ಶೌಚಗೃಹ, ಅಡುಗೆಮನೆ ಮತ್ತು ಬಾಲ್ಕನಿಗಳಲ್ಲಿ ವಿಶೇಷ ಜಲನಿರೋಧಕ ವ್ಯವಸ್ಥೆ ಮಾಡಿಸುವುದು ಅಗತ್ಯ. ಟೈಲ್ಸ್ ಅಳವಡಿಸುವ ಮೊದಲು ನೆಲ ಮತ್ತು ಗೋಡೆಗಳ ಸಂಧಿ ಭಾಗಗಳಿಗೆ ಸೂಕ್ತ ವಾಟರ್‌ಪ್ರೂಫಿಂಗ್ ಇರಬೇಕು. ಇತ್ತೀಚಿನ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಲವು ಜಲನಿರೋಧಕ ನೂತನ ತಂತ್ರಜ್ಞಾನಗಳು ಲಭ್ಯವಿದ್ದು ಅವುಗಳನ್ನು ಪಾಲಿಸಬೇಕು.

ನಿರಂತರ ತೇವಾಂಶವಿರುವ ಗೋಡೆಗಳಲ್ಲಿ ಶಿಲೀಂಧ್ರ ಬೆಳೆದು ಅಲರ್ಜಿ, ಉಸಿರಾಟದ ತೊಂದರೆ ಹಾಗೂ ಅಸ್ತಮಾ ಸಮಸ್ಯೆಗಳಿಗೆ ಕಾರಣವಾಗಬಹುದು. ಸಣ್ಣ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸದಿದ್ದರೆ ದೊಡ್ಡ ದುರಸ್ತಿ ವೆಚ್ಚ ತೆರಬೇಕಾಗುತ್ತದೆ. ಜೊತೆಗೆ ಕಟ್ಟಡದ ಮೌಲ್ಯದ ಮೇಲು ಇದು ಪರಿಣಾಮ ಬೀರಬಹುದು.