ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಎ.ನರಸಿಂಹಯ್ಯ, ಈ. ರಾಜಪ್ಪ, ಡಾ.ಅರ್ಜುನ ಪಂಗಣ್ಣನವರ ಇತರರಿದ್ದಾರೆ.
ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿಕೆ
ಎಸ್‌ಸಿ-ಎಸ್‌ಟಿ ಒಬಿಸಿಗಳಿಗೆ ಅನ್ಯಾಯ ಕೇಂದ್ರ-ರಾಜ್ಯ ಸರ್ಕಾರಕ್ಕೆ ಒತ್ತಾಯ
ವಿಜಯಪುರ: ‘ಮೀಸಲಾತಿ ಯಾರ ಅಪ್ಪನ ಸ್ವತ್ತೂ ಅಲ್ಲ ಮತ್ತು ಅದು ಭಿಕ್ಷೆಯೂ ಅಲ್ಲ, ಕುರುಬ, ಬೆಸ್ತ, ಗೊಲ್ಲ ಯಾವುದೇ ಸಮುದಾಯ ಬೇಕಾದರೂ ಎಸ್‌ಟಿಗೆ ಸೇರ್ಪಡೆಗೊಳಿಸಿ. ಆದರೆ, ಕುಲಶಾಸ್ತ್ರೀಯ ಅಧ್ಯಯನ ನಡೆಸಿ ನಂತರ ಅರ್ಹತೆ ಆಧರಿಸಿ ಮೀಸಲಾತಿ ಕಲ್ಪಿಸಿ. ಅದಕ್ಕೂ ಮೊದಲು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ’ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಹಾನ್ ಕಲಾಕಾರ. ಈ ಹಿಂದೆ ಕಲಬುರಗಿಯಲ್ಲಿ ಕೋಲಿ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವುದಾಗಿ ಹೇಳಿದರು. ಇನ್ನೊಂದು ಕಡೆ ಕುರುಬ, ಗೊಲ್ಲ ಸಮುದಾಯದವರನ್ನೂ ಎಸ್‌ಟಿಗೆ ಸೇರ್ಪಡೆಗೊಳಿಸುವುದಾಗಿ ಹೇಳಿದರು. ಮೀಸಲಾತಿ ನೀಡಲು ನಮ್ಮದು ಯಾವುದೇ ರೀತಿಯ ಅಭ್ಯಂತರ ಇಲ್ಲ. ಆದರೆ, ಅದಕ್ಕೂ ಮುನ್ನ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನೈಜತೆ ಆಧರಿಸಿ ಮೀಸಲಾತಿ ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಎಸ್‌ಸಿ-ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಾಲಯಿತು. ಎಸ್.ಟಿ. ಮೀಸಲಾತಿಯನ್ನು 9ನೇ ಷೆಡ್ಯೂಲ್‌ಗೆ ಸೇರಿಸಲು ನಿರ್ಧಾರ ಕೈಗೊಳ್ಳಲಾಯಿತು. ಆದರೆ, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಸಚಿವರು, ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗಿ ಸಾಮಾಜಿಕ ನ್ಯಾಯಕ್ಕೆ ಹಿನ್ನಡೆಯಾಗುತ್ತಿರುವುದನ್ನು ಮನವರಿಕೆ ಮಾಡಬೇಕು. ರಾಜ್ಯ ಸರ್ಕಾರ ಮಾಡಿರುವ ಕಾನೂನನ್ನು 9ನೇ ಷಡ್ಯೂಲ್‌ಗೆ ಸೇರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಮೀಸಲಾತಿ ಪ್ರಮಾಣ ಜಾಸ್ತಿ ಮಾಡಿ 2023ರಲ್ಲಿಯೇ ಕಳುಹಿಸಿಕೊಟ್ಟರೂ ಕೇಂದ್ರ ಸರ್ಕಾರ ಈವರೆಗೂ ತೀರ್ಮಾನ ತೆಗೆದುಕೊಂಡಿಲ್ಲ. ಸಂಸದರಾದ ರಮೇಶ ಜಿಗಜಿಣಗಿ, ಪ್ರಲ್ಹಾದ್ ಜೋಷಿ, ಸೋಮಣ್ಣ, ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದೀರಿ? ಅನ್ಯಾಯವಾದಾಗಲೂ ಮಾತನಾಡಲಾಗುವುದಿಲ್ಲವೇ, ನನಗನಿಸುತ್ತದೆ ದೇಶದಲ್ಲಿ ಸಂವಿಧಾನ ಜಾರಿಯಲ್ಲಿಲ್ಲ, ಜಾರಿಯಲ್ಲಿರುವುದು ಮನು ಧರ್ಮ ಶಾಸ್ತ್ರ ಎಂದರು.
ಸದ್ಯ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಈ ತಡೆಯಾಜ್ಞೆ ತೆರವುಗೊಳಿಸಲು ರಾಜ್ಯ ಸರ್ಕಾರ ಕೂಡಲೇ ಅರ್ಜಿ ಸಲ್ಲಿಸಬೇಕು. ತಡೆಯಾಜ್ಞೆ ತೆರವು ಆಗದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಎಸ್.ಎಲ್.ಪಿ. ಹಾಕಿ ನಮಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು, ಒಂದು ವೇಳೆ ಮಾಡದಿದ್ದರೆ ಇದರ ಪರಿಣಾಮ ಎಲ್ಲ ರಾಜಕೀಯ ನಾಯಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಳವಾರ ಎಸ್‌ಟಿ ಸೇರ್ಪಡೆಗೆ ಸಂಬಂಧಿಸಿದಂತೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕಾನೂನು ಬಾಹಿರವಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು ಮತ್ತು ಕೊಡುವುದು ಎರಡೂ ತಪ್ಪು. 2020ರಿಂದ ಈವರೆಗೂ ಸುಮಾರು 2,39,166 ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸುಮಾರು 56,814 ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ.
ರಾಜಕಾರಣಿಗಳು ಜಾತಿ ಪ್ರಮಾಣ ಪತ್ರ ನೀಡಲು ಪೈಪೋಟಿಗಿಳಿದಿದ್ದಾರೆ. ಅದರ ಬದಲು ನೈಜವಾಗಿ ಎಸ್‌ಟಿ ಮಾನ್ಯತೆ ಕೊಡಿಸಲು ಪ್ರಯತ್ನಿಸಬೇಕೆಂದರು. ಈಗ ರಾಜ್ಯ ಸರ್ಕಾರ 56 ಸಾವಿರ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಆದರೆ ಹೊಸ ಮೀಸಲಾತಿಯನ್ವಯ ಹುದ್ದೆಗಳು ಭರ್ತಿಯಾಗಿದ್ದರೆ ಎಸ್.ಸಿ, ಎಸ್.ಟಿ., ಒಬಿಸಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುತ್ತಿದ್ದವು, ಸರ್ಕಾರಗಳ ನಿರ್ಲಕ್ಷೃದಿಂದಾಗಿ ಈ ಸಮುದಾಯಗಳ ಬದುಕಿನ ಮೇಲೆ ಕರಾಳ ಛಾಯೆ ಆವರಿಸಿದೆ ಎಂದರು.
ಮುಖಂಡರಾದ ಎ. ನರಸಿಂಹಯ್ಯ, ಈ. ರಾಜಪ್ಪ, ಡಾ. ಅರ್ಜುನ ಪಂಗಣ್ಣನವರ, ಎಚ್.ಸಿ. ಹನುಮಂತಯ್ಯ, ಮರೆಪ್ಪ ನಾಯಕ, ಅಮೀತ್ ನಾಯ್ಕೋಡಿ, ಯಲಗುರೇಶ ಪಟೇದ, ಶಾಸಪ್ಪ ಹಂಚಿನಾಳ, ಮಲ್ಲಿಕಾರ್ಜುನ ಬಟಗಿ, ರವಿ ಬಿಸನಾಳ ಇತರರಿದ್ದರು.