ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಪಡಿಕ್ಕಲ್ ಶತಕ, ರಾಜ್ಯದ ಆಸೆ ಜೀವಂತ

ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ವಿರುದ್ಧ 145 ರನ್ ಬೃಹತ್ ಗೆಲುವು
  • ಡಿ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದ ಮಯಾಂಕ್ ಅಗರ್ವಾಲ್ ಪಡೆ
ಅಹಮದಾಬಾದ್: ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (102* ರನ್, 46 ಎಸೆತ, 10 ಬೌಂಡರಿ, 6 ಸಿಕ್ಸರ್) ಆಕರ್ಷಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ನಿರ್ವಹಣೆಯ ಬಲದಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ಎದುರು 145 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಇದರೊಂದಿಗೆ ಡಿ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದ ಮಯಾಂಕ್ ಅಗರ್ವಾಲ್ ಪಡೆ ಸೂಪರ್ ಲೀಗ್ ಹಂತಕ್ಕೇರುವ ಆಸೆ ಜೀವಂತವಿರಿಸಿಕೊಂಡಿದೆ.
ನಮೋ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ತನ್ನ 4ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕಕ್ಕೆ ಬಿಆರ್ ಶರತ್ (56 ರನ್, 23 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನ ಆರಂಭ ಒದಗಿಸಿದರು. ನಂತರ ಪಡಿಕ್ಕಲ್ ಹಾಗೂ ಆರ್. ಸ್ಮರಣ್ (46* ರನ್, 29 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ ಮುರಿಯದ 4ನೇ ವಿಕೆಟ್‌ಗೆ 56 ಎಸೆತಗಳಲ್ಲಿ 115 ರನ್ ಕಸಿಯಿತು. ಇದರೊಂದಿಗೆ ಕರ್ನಾಟಕ 3 ವಿಕೆಟ್‌ಗೆ 245 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಟಿ20ಯಲ್ಲಿ ಕರ್ನಾಟಕ ತಂಡದ 2ನೇ ಗರಿಷ್ಠ ಮೊತ್ತವೂ ಇದಾಗಿದೆ.
ಪ್ರತಿಯಾಗಿ ಸ್ಪಿನ್ನರ್‌ಗಳಾದ ಪ್ರವೀಣ್ ದುಬೆ (15ಕ್ಕೆ 3) ಹಾಗೂ ಶ್ರೇಯಸ್ ಗೋಪಾಲ್ (21ಕ್ಕೆ 3) ಸಹಿತ ರಾಜ್ಯದ ಇತರ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ತಮಿಳುನಾಡು 8 ರನ್ ಅಂತರದಲ್ಲಿ ಕೊನೇ 6 ವಿಕೆಟ್ ಕಳೆದುಕೊಂಡು 14.2 ಓವರ್‌ಗಳಲ್ಲಿ ಭರ್ತಿ 100 ರನ್‌ಗಳಿಗೆ ಸರ್ವಪತನ ಕಂಡಿತು. ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್ ಬದಲಿಗೆ ಬಿಆರ್ ಶರತ್ ಹಾಗೂ ಶುಭಾಂಗ್ ಹೆಗ್ಡೆ ಹನ್ನೊಂದರ ಬಳದಲ್ಲಿ ಸ್ಥಾನ ಪಡೆದರು.
ಕರ್ನಾಟಕ: 3 ವಿಕೆಟ್‌ಗೆ 245 (ಬಿಆರ್ ಶರತ್ 53, ಮಯಾಂಕ್ 24, ಪಡಿಕ್ಕಲ್ 102*, ಕರುಣ್ ನಾಯರ್ 4, ಸ್ಮರಣ್ 46*, ಸೋನು 34ಕ್ಕೆ 2). ತಮಿಳುನಾಡು: 14.2 ಓವರ್‌ಗಳಲ್ಲಿ 100 (ಅಮಿತ್ 15, ತುಷಾರ್ 29, ಸಾಯಿ ಸುದರ್ಶನ್ 8, ಎನ್.ಜಗದೀಶನ್ 21, ರಾಜಕುಮಾರ್ 16, ಶಾರುಖ್ ಖಾನ್ 2, ಸಾಯಿ ಕಿಶೋರ್ 2,ನಟರಾಜನ್ 1, ಪ್ರವೀಣ್ 15ಕ್ಕೆ 3, ಶ್ರೇಯಸ್ ಗೋಪಾಲ್ 21ಕ್ಕೆ 3, ವೈಶಾಕ್ 7ಕ್ಕೆ 2).
245. ಕರ್ನಾಟಕ ತಂಡ ಟಿ20 ಕ್ರಿಕೆಟ್‌ನಲ್ಲಿ ದಾಖಲಿಸಿದ 2ನೇ ಗರಿಷ್ಠ ಮೊತ್ತ ಇದಾಗಿದೆ. 2019-20ರ ಆವೃತ್ತಿಯಲ್ಲಿ ಸರ್ವೀಸಸ್ ಎದುರು 250 ರನ್‌ಗಳಿಸಿರುವುದು ಅತ್ಯಧಿಕ ಮೊತ್ತ ಎನಿಸಿದೆ.
145. ರನ್ ಲೆಕ್ಕಾಚಾರದಲ್ಲಿ ಕರ್ನಾಟಕ ತಂಡಕ್ಕೆ 2ನೇ ದೊಡ್ಡ ಅಂತರದ ಗೆಲುವು ಇದಾಗಿದೆ. 2018-19ರಲ್ಲಿ ಅರುಣಾಚಲ ಪ್ರದೇಶ ಎದುರು 146 ರನ್‌ಗಳಿಂದ್ದ ಗೆದ್ದಿರುವುದು, ಅತಿ ದೊಡ್ಡ ಜಯವಾಗಿದೆ.
3. ದೇವದತ್ ಪಡಿಕ್ಕಲ್ ಟಿ20 ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ಸಿಡಿಸಿದ 3ನೇ ಶತಕ ಇದಾಗಿದೆ. ಒಟ್ಟಾರೆ ಕರ್ನಾಟಕ ಪರ ದಾಖಲಾದ 8ನೇ ಸೆಂಚುರಿಯಾಗಿದೆ.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಎದುರಾಳಿ: ದೆಹಲಿ
ಯಾವಾಗ: ಗುರುವಾರ
ಆರಂಭ: ಮಧ್ಯಾಹ್ನ 1.30
ಎಲ್ಲಿ: ಅಹಮದಾಬಾದ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net