ಸಗಟು ಡೀಸೆಲ್ ಖರೀದಿಗೆ ನಿರ್ಬಂಧಕ್ಕೆ ಸುರ್ಜೇವಾಲ ಕಿಡಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ
Published on
ಬೆಂಗಳೂರು: ಪೆಟ್ರೋಲ್ ಪಂಪ್‌ನಲ್ಲಿ ಸಗಟು ಡೀಸೆಲ್ ಖರೀದಿಗೆ ನಿರ್ಬಂಧ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂ.12ರಂದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಒಂದು ಆದೇಶ ಹೊರಡಿಸಿದ್ದು, 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಅನ್ನು ಬಂಕ್‌ಗಳಲ್ಲಿ ಮಾರಾಟಕ್ಕೆ ನಿರ್ಬಂಧಿಸಿದೆ. 200 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಡೀಸೆಲ್ ಬೇಕಾದಲ್ಲಿ ಸಗಟುದಾರರ ಬಳಿ ಖರೀದಿಸಬೇಕು. ಪೆಟ್ರೋಲ್ ಪಂಪ್‌ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 95ರಿಂದ 97 ರೂ. ಇದೆ. ಸಗಟುದಾರರ ಬಳಿ ಖರೀದಿಸುವಾಗ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 135 ರಿಂದ 140 ರೂ. ಇದೆ. ಅಂದರೆ ಪ್ರತಿ ಲೀಟರ್‌ಗೆ 40 ರೂ. ವ್ಯತ್ಯಾಸ ಇರಲಿದೆ ಎಂದು ಸುರ್ಜೇವಾಲಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ರೈತರ ಮೇಲೆ ಪರಿಣಾಮ ಬೀಳಲಿದೆ. ಬಿತ್ತನೆಯ ಋತು ಆರಂಭವಾಗುತ್ತಿದೆ. ಪ್ರತಿ ರೈತ ಒಂದು ಎಕರೆಗೆ 300 ಲೀಟರ್ ಡೀಸೆಲ್ ಬಳಸುತ್ತಾನೆ. ಭಾರತದಲ್ಲಿ ಸರಾಸರಿ ಒಬ್ಬ ರೈತನಿಗೆ 5 ಎಕರೆ ಜಮೀನು ಇದ್ದರೆ ಒಂದು ಬೆಳೆಯ ಋತುವಿಗೆ ಕನಿಷ್ಠ 1,500 ಲೀಟರ್ ಡೀಸೆಲ್ ಬೇಕು. ಇದು ಸಗಟು ಖರೀದಿಯಾಗುತ್ತದೆ. ಹೀಗಾಗಿ, ಈಗ ರೈತರಿಗೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 40 ರೂ. ಹೆಚ್ಚಾಗಲಿದೆ ಎಂದು ಸುರ್ಜೇವಾಲಾ ಕಿಡಿಕಾರಿದರು.
ಅದೇ ರೀತಿಯಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಗಳು ದೈನಂದಿನ ವಿದ್ಯುತ್‌ಗಾಗಿ ಜನರೇಟರ್ ಬಳಸಿದಾಗ ಪ್ರತಿದಿನ 2 ರಿಂದ 5 ಸಾವಿರ ಲೀಟರ್ ಡೀಸೆಲ್ ಖರೀದಿಸುತ್ತಾರೆ. ಬಸ್‌ನ ಟ್ಯಾಂಕ್‌ನಲ್ಲಿ 200 ಲೀಟರ್‌ಗಿಂತ ಹೆಚ್ಚು ಇಂಧನ ಹಿಡಿಯಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಯ ಒಂದು ನಿರ್ದಿಷ್ಟ ವೇಳಾಪಟ್ಟಿ ಇರುತ್ತದೆ. ಅವರು ಸಹ ಜನರೇಟರ್‌ಗಳನ್ನೇ ಅವಲಂಬಿಸಬೇಕಿದೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net