ಪಠ್ಯಜ್ಞಾನದಿಂದಲೇ ಯಶಸ್ಸು ಸಾಧ್ಯವಿಲ್ಲ

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ ಏರ್ಪಡಿಸಿದ್ದ ಸರ್ಕಾರಿ ವಲಯ ಹಾಗೂ ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳು ವಿಷಯದ ಕುರಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ ಏರ್ಪಡಿಸಿದ್ದ ಸರ್ಕಾರಿ ವಲಯ ಹಾಗೂ ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳು ವಿಷಯದ ಕುರಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on

ಮಡಿಕೇರಿ:

ವಿದ್ಯಾರ್ಥಿಗಳು ತಮ್ಮ ನೈಜ ಸಾಮರ್ಥ್ಯ, ಆಸಕ್ತಿ ಹಾಗೂ ಸ್ಪಷ್ಟ ಗುರಿಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿಕೊಂಡು ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಹೇಳಿದರು.


ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸರ್ಕಾರಿ ವಲಯ ಹಾಗೂ ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳು ವಿಷಯದ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಅಥವಾ ಪಠ್ಯಪುಸ್ತಕದ ಜ್ಞಾನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಜ್ಞಾನವನ್ನು ಕೌಶಲವಾಗಿ, ಕೌಶಲವನ್ನು ಸಾಮರ್ಥ್ಯವಾಗಿ ಹಾಗೂ ಸಾಮರ್ಥ್ಯವನ್ನು ಸಾಧನೆಯಾಗಿ ಪರಿವರ್ತಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.


ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಕೇವಲ ವಿಷಯ ಜ್ಞಾನವಿದ್ದರೆ ಸಾಲದು, ಅದರೊಂದಿಗೆ ಸಮಯ ನಿರ್ವಹಣೆ, ಸೃಜನಶೀಲ ಚಿಂತನೆ, ಆತ್ಮವಿಶ್ವಾಸ, ಪರಿಣಾಮಕಾರಿ ಸಂವಹನ ಕೌಶಲ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮ ಮುಂದೆ ಬರುವ ಸವಾಲುಗಳನ್ನು ಅಥವಾ ಸಮಸ್ಯೆಗಳನ್ನು ಅಡೆತಡೆಗಳೆಂದು ಭಾವಿಸದೆ, ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚುವ ಅವಕಾಶಗಳಾಗಿ ಸ್ವೀಕರಿಸಬೇಕು.


ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ನಿರಂತರ ಅಧ್ಯಯನ, ದಿನನಿತ್ಯದ ದಿನಪತ್ರಿಕೆಗಳ ಓದು, ಪ್ರಸ್ತುತ ವಿದ್ಯಮಾನಗಳ ಅರಿವು, ಸಾಮಾನ್ಯ ಜ್ಞಾನ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಸಮಯದ ಸಮರ್ಪಕ ಬಳಕೆ ಅತ್ಯಂತ ಪ್ರಮುಖವಾಗಿವೆ ಎಂದರು.


ಪ್ರೊ.ಜಿ.ಚಂದ್ರಶೇಖರನ್, ನರಸಿಂಹಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾಹಿತಿ ನೀಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಎನ್. ಗಾಯತ್ರಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶೈಲಾಶ್ರೀ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಅಲೋಕ್, ಉಪನ್ಯಾಸಕರಾದ ನಿವಿಯಾ ಮೇದಪ್ಪ ಹಾಗೂ ಶರತ್, ಡಾ.ಕೆ. ಸೌಮ್ಯಾ, ಕೆ.ಎಸ್. ಡಾ.ಶೃಂಗಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net