ಕಲಕೇರಿ ಗ್ರಾಮದ ಅನುದಾನಿತ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ. ಬಸವರಾಜ ಯಲಿಗಾರ, ಶರಣಯ್ಯ ಭಂಡಾರಿಮಠ, ವಿ.ಆರ್. ಝಳಕಿ, ದೇವೀಂದ್ರ ಗುಮಶೆಟ್ಟಿ, ಅಪ್ಪಾಸಾಬ ಗುಮಶೆಟ್ಟಿ ಇತರರಿದ್ದರು.
ಕಲಕೇರಿ: ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಮಹತ್ತರ ತಿರುವು. ಮೊಬೈಲ್ ಬಳಕೆಯಿಂದ ದೂರವಿದ್ದು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕಲಬುರ್ಗಿ ಲೋಕಾಯುಕ್ತ ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ ಹೇಳಿದರು.
ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ 2026-27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಸಾಂಸ್ಕೃತಿಕ ಹಾಗೂ ಶಾರೀರಿಕ ಮತ್ತು ರೋವರ್ ರೇಜಂರ್ಸ್, ಇಎಲ್‌ಸಿ ಕ್ಲಬ್ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ, ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಬದುಕಿಗಾಗಿ ನಿರಂತರ ಅಧ್ಯಯನಶೀಲರಾಗಬೇಕು ಎಂದು ಅವರು ಹೇಳಿದರು.
ಎಸ್‌ಬಿ ವಿಸ್ಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ಗಳಿಗೆ ಸ್ವಾಗತಿಸುವುದು ಹಾಗೂ ಗೌರವ ದೊಂದಿಗೆ ಬೀಳ್ಕೊಡುವ ಪದ್ಧತಿ ಬಾಂಧವ್ಯ ಬೆಸೆಯುವ ಕಾರ್ಯವಾಗಿದೆೆ ಎಂದು ಹೇಳಿದರು.
ಜಿಲ್ಲಾ ಯುವ ಪರಿಷತ್ತ ಅಧ್ಯಕ್ಷ ಶರಣು ಸಬರದ, ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಪಾಟೀಲ, ಬಸವರಾಜ್ ಕುಂಬಾರ, ಪ್ರಾಚಾರ್ಯ ರವಿಕುಮಾರ ಗುಮಶೆಟ್ಟಿ ಮಾತನಾಡಿದರು. ಕಲಕೇರಿ ಗುರು ಮರುಳಾರಾಧ್ಯರ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿರ್ವಚನ ನಿಡಿದರು.
ಸಂಸ್ಥೆಯಲ್ಲಿ 37 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತ ಬಿ.ಜಿ. ಚನಗೊಂಡ ದಂಪತಿ ಹಾಗೂ ಮಲಘಾಣದ ಶರಣಬಸವೇಶ್ವರ ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸುನೀಲ ಜಾಧವ, ಕೋರವಾರದ ಎನ್.ಎಸ್. ಢವಳಗಿ ಪಪೂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಂಗಮೇಶ ಮೋರಟಗಿ, ಸಿಂದಗಿ ತಾಲೂಕು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸತೀಶ ಬಸರಕೋಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.