ಜ್ಞಾನಭಾರತಿ ಆವರಣದಲ್ಲಿ ಅಪಘಾತ ವಿದ್ಯಾರ್ಥಿನಿ ಸಾವು: ಸಾರ್ವಜನಿಕ ರಸ್ತೆ ನಿರ್ಬಂಧಕ್ಕೆ ಆಗ್ರಹ

ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ರಸ್ತೆ ನಿರ್ಬಂಧಕ್ಕೆ ಆಗ್ರಹ
ಜ್ಞಾನಭಾರತಿ ಆವರಣದಲ್ಲಿ ಸಾರ್ವಜನಿಕ ರಸ್ತೆ ನಿರ್ಬಂಧಕ್ಕೆ ಆಗ್ರಹ
Published on

ಪ್ರಮುಖ ಮುಖ್ಯಾಂಶಗಳು

  • ಜು.30ರಂದು ಗಾಂಧಿ ಮಾರ್ಗ ರಸ್ತೆ ದಾಟುತ್ತಿದ್ದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿನಿ, ಆಟೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯ
  • ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನಮೃತಪಟ್ಟ ವಿದ್ಯಾರ್ಥಿನಿ
  • ಗಾಂಧಿಮಾರ್ಗದ ರಸ್ತೆಯನ್ನು ಈ ಕ್ಷಣದಿಂದಲೇ ಮುಚ್ಚಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ
  • ಗಾಂಧಿಮಾರ್ಗ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಸೂಕ್ತ ಕ್ರಮ: ಕುಲಪತಿ ಪ್ರೊ. ಶಿವರಾಜು
ಬೆಂಗಳೂರು:

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಜು.30ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮಾನಸ (23) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟ ಪರಿಣಾಮ, ವಿದ್ಯಾರ್ಥಿಗಳು ರಸ್ತೆ ತಡೆದು ಇಡೀ ದಿನ ಪ್ರತಿಭಟನೆ ನಡೆಸಿದರು. ವಿಶ್ವವಿದ್ಯಾಲಯ ಆವರಣದಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸುವಂತೆ ಆಗ್ರಹಿಸಿದರು.

ನಾಗರಬಾವಿಯಿಂದ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮೂಲಕ ಮೈಸೂರು ರಸ್ತೆ ಮತ್ತು ಮರಿಯಪ್ಪನಪಾಳ್ಯ ತಲುಪುವ ಗಾಂಧಿಮಾರ್ಗದ ರಸ್ತೆಯನ್ನು ಈ ಕ್ಷಣದಿಂದಲೇ ಮುಚ್ಚಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ಮಾರ್ಗದಲ್ಲಿ ವಾಹನಗಳು ವಿಪರೀತ ವೇಗವಾಗಿ ಸಂಚರಿಸುವ ಪರಿಣಾಮ, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳಿನಿಂದಲೇ 5ರಿಂದ 6 ಪ್ರಕರಗಳು ನಡೆದಿವೆ. ಅಂತಿಮವಾಗಿ ಈಗ ಸಾವು ಸಂಭವಿಸಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರರನ್ನು ಸಮಾಧಾನಪಡಿಸಲು ಕುಲಪತಿಗಳು, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರು ಸೇರಿ ಆಡಳಿತ ಮಂಡಳಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.


ಸಮಸ್ಯೆಯಾಗುತ್ತಿರುವುದು ಏಕೆ?

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು 47 ವಿಭಾಗಗಳು, 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 1,000ಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಕಚೇರಿಯಿಂದ ನಾಗರಬಾವಿ ವೃತ್ತದವರೆಗೆ ಇರುವ ಗಾಂಧಿ ಮಾರ್ಗ ರಸ್ತೆ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ರಸ್ತೆ ದಾಟಲು ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ.

2022ರಲ್ಲಿಯೂ ವಿದ್ಯಾರ್ಥಿನಿ ಸಾವು

ಜ್ಞಾನಭಾರತಿ ಆವರಣದಲ್ಲಿ ರಸ್ತೆ ಅಪಘಾತಗಳು ಮರುಕಳಿಸುತ್ತಿದ್ದು, 2022ರಲ್ಲಿ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯೊಬ್ಬರು ಬಿಎಂಟಿಸಿ ಬಸ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ವಿಶ್ವವಿದ್ಯಾಲಯ ಆವರಣದಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಕಠಿಣ ನಿಯಂತ್ರಣ ಜಾರಿಗೊಳಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ದೃಶ್ಯಕಲಾ ವಿಭಾಗ ವಿದ್ಯಾರ್ಥಿನಿ

ಮಾನಸ ದೃಶ್ಯಕಲಾ ವಿಭಾಗದ ಸ್ನಾತಕೋತ್ತರ ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಜು.30ರಂದು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಕಡೆಯಿಂದ ನಾಗರಬಾವಿ ವೃತ್ತದ ಕಡೆಗೆ ವೇಗವಾಗಿ ಸಂಚರಿಸುತ್ತಿದ್ದ ಆಟೋ,
ಅಪಘಾತದ ಬಳಿಕ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪಾಲಕರು ಮೈಸೂರಿಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು ಎಂದು ವಿವಿ ಮೂಲಗಳು ತಿಳಿಸಿವೆ.


ಗಾಂಧಿಮಾರ್ಗ ರಸ್ತೆ ಸಂಚಾರ ನಿರ್ಬಂಧಕ್ಕೆ ಕ್ರಮ: ಪ್ರೊ. ಶಿವರಾಜು

ಗಾಂಧಿಮಾರ್ಗ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸುವ ಕುರಿತು ರಾಜ್ಯ ಸರ್ಕಾರದ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ವಿಶ್ವವಿದ್ಯಾಲಯದ ವತಿಯಿಂದ ಪರಿಹಾರ ನೀಡಲಾಗುವುದು. ಅಲ್ಲದೆ, ಇಂತಹ ದುರ್ಘಟನೆಗಳಿಂದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ತಕ್ಷಣದಿಂದಲೇ ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ. ಸಿ. ಶಿವರಾಜು ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net