ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್​: 8 ಮಂದಿ ಬಂಧನ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್​ಪಿ! Chhatrapati Shivaji

ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ 8 ಮಂದಿ ಅರೆಸ್ಟ್​ ( Chhatrapati Shivaji )
ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ 8 ಮಂದಿ ಅರೆಸ್ಟ್​ ( Chhatrapati Shivaji )
Published on

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ
  • 8 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ದಾರ್ಥ್​ ಗೊಯಲ್ ಮಾಹಿತಿ
  • ಡಿಜೆ ಹಾಡಿಗೆ ಹಿಂದೂ ಯುವಕರು ಕುಣಿಯುತ್ತಿದ್ದ ವೇಳೆ ಆರೋಪಿಗಳು ಕಲ್ಲು ಎಸೆದಿದ್ದಾರೆ ಎಂದ ಎಸ್​ಪಿ
  • ನಿಷ್ಪಕ್ಷಪಾತ ತನಿಖೆ ನಡೆಸಿ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡಲು ಸಿಎಂ ಸೂಚನೆ
ಬಾಗಲಕೋಟೆ: ಶಿವಾಜಿ ಮೂರ್ತಿ ( Chhatrapati Shivaji ) ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ 8 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ದಾರ್ಥ್​ ಗೊಯಲ್ ತಿಳಿಸಿದ್ದಾರೆ.
ಬಂಧಿತರನ್ನು ತನ್ವೀರ್ ಹವಾಲ್ದಾರ ( 25 ), ಸದ್ದಾಮ್ (22), ಮುಜ್ಜು ಕಮತಗಿ, ಫಯಾಜ್ ಹನುಮಸಾಗರ (24), ಸರ್ಪರಾಜ ಚಾವುಸ್ (33), ರಿಯಾನ್ ಶೇಖ್ (21), ಆಯಾನ್ ಗುಳೇದಗುಡ್ಡ (19) ಮತ್ತು ವಸೀಮ್ ಶೇಖ್ (22) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಸಿದ್ದಾರ್ಥ್ ಗೋಯಲ್, ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ. ತಂಜೀರ್ ಎಂಬ ವ್ಯಕ್ತಿಯಿಂದ ಕಲ್ಲು ತೂರಾಟ ನಡೆದಿದೆ. ಡಿಜೆ ಹಾಡಿಗೆ ಹಿಂದೂ ಯುವಕರು ಕುಣಿಯುತ್ತಿದ್ದ ವೇಳೆ ಆರೋಪಿಗಳು ಕಲ್ಲು ಎಸೆದಿದ್ದಾರೆ. ಮಸೀದಿಯಲ್ಲಿ ಶೂ ರ್ಯಾಕ್​ಗೆ ಇಡಲಾಗಿದ್ದ ಕಲ್ಲನ್ನು ತೆಗೆದುಕೊಂಡು ಎಸೆದಿದ್ದಾರೆ. ಅಲ್ಲದೆ, ಮಸೀದಿಯಿಂದ ಚಪ್ಪಲಿಯನ್ನು ಸಹ ಎಸೆದಿದ್ದಾರೆ ಎಂದು ತಿಳಿಸಿದರು.
ಮೆರವಣಿಗೆ ನಡೆಯುವ ವೇಳೆ ಯುವಕರು ಮಸೀದಿಯಲ್ಲಿ ಜಮಾವಣೆಗೊಂಡಿದ್ದರು. ಇಬ್ಬರು ಪಿಸಿ ಹಾಗೂ ಓರ್ವ ವ್ಯಕ್ತಿ ಮೇಲೆ ಕಲ್ಲು ಬಿದ್ದಿದೆ. ಈ ಕೇಸ್‌ನಲ್ಲಿ ತಂಜೀರ್​ ಎ 1 ಆರೋಪಿ‌ಯಾಗಿದ್ದಾನೆ. ಈತನ ಬಿಟ್ಟು ಬೇರೆ ಯಾರೂ ಕಲ್ಲು ಎಸೆದಿಲ್ಲ. ಸದ್ಯ ತಂಜೀರ್ ಸೇರಿ 8 ಜನರನ್ನ ಬಂದಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಬಂಧನ ಮಾಡಲಾಗಿದೆ. ಈ ಘಟನೆಯ ನಂತರವೂ ಮೆರವಣಿಗೆ ಶಾಂತಿಯುತವಾಗಿ ಮುಗಿಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಈ ತಪ್ಪಿಗೆ ಕಾರಣವಾದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಸಿದ್ಧರ್ಥ್​ ಗೋಯಲ್​ ತಿಳಿಸಿದ್ದಾರೆ.

ಕ್ರಮಕ್ಕೆ ಸಿಎಂ ಸೂಚನೆ

ಈ ಘಟನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ, ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ. ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ. ನಾಡಿನ ಜನರಿಗೆ ಭಯಮುಕ್ತ ನೆಮ್ಮದಿಯ ಬದುಕು ನೀಡುವುದು ನಮ್ಮ‌ ಮೊದಲ ಆದ್ಯತೆ. ಜನರ ಶಾಂತಿ - ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ - ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಿನ್ನೆ ರಾತ್ರಿ ಸಮುದಾಯದಿಂದ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಯಿತು. ಎಸ್ಪಿ ಸಿದ್ಧಾರ್ಥ್​ ಗೋಯಲ್ ಸೇರಿದಂತೆ ಕೆಲವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾದವು. ಈ ಘಟನೆ ಗುರುವಾರ ರಾತ್ರಿ ಬಾಗಲಕೋಟೆಯ ಕಿಲ್ಲಾದ ಪಂಕಾ ಮಸೀದಿ ಬಳಿ ನಡೆಯಿತು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಬೆಳಗ್ಗೆ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ನಡೆಸಲಾಗಿತ್ತು. ಮಧ್ಯಾಹ್ನದ ಬಳಿಕ ಸಮುದಾಯದಿಂದ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ಸಾಗಿತ್ತು. ಈ ವೇಳೆ ರಾತ್ರಿ ಮೆರವಣಿಗೆ ಪಂಕಾ ಮಸೀದಿ ಮಾರ್ಗದಲ್ಲಿ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಮಸೀದಿಯಲ್ಲೂ ಸಹ ಪ್ರಾರ್ಥನೆ ನಡೆದಿತ್ತು. ಇದೇ ಪರಿಸ್ಥಿತಿಯನ್ನ ಬಂಡವಾಳ ಮಾಡಿಕೊಂಡ ಕೆಲ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಕರ್ತವ್ಯದಲ್ಲಿ ಇದ್ದ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ಕುತ್ತಿಗೆ ಬಳಿ ತರುಚಿ ಅವರ ಸಮವಸ್ತ್ರದ ಮೇಲೆ ರಕ್ತದ ಕಲೆ ಆಗಿರುವ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿವೆ. ಪರಿಸ್ಥಿತಿ ಕೈಮೀರುವ ಮುನ್ನವೇ ಎಸ್ಪಿ ಗೋಯಲ್ ನೇತೃತ್ವದಲ್ಲಿ ಪೊಲೀಸರ ತಂಡ ಪರಿಸ್ಥಿತಿ ತಹಬದಿಗೆ ತಂದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net