ಮಲತಾಯಿ ಧೋರಣೆ ಸಲ್ಲ

ದೇವರಹಿಪ್ಪರಗಿ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ ಚಲವಾದಿ, ಅಣ್ಣಪ್ಪ ಪೂಜಾರಿ, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮತ್ತಿತರರಿದ್ದರು.
ದೇವರಹಿಪ್ಪರಗಿ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ ಚಲವಾದಿ, ಅಣ್ಣಪ್ಪ ಪೂಜಾರಿ, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ಎಸ್ ಪಕ್ಷ, ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ದೇವರಹಿಪ್ಪರಗಿ: ತಾಲೂಕನ್ನು ಬರಪ್ರದೇಶವೆಂದು ಘೋಷಿಸಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕೆಆರ್‌ಎಸ್ ಪಕ್ಷ, ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ಮೊಹರೆ ಹನುಮಂತರಾಯ ವೃತ್ತದಿಂದ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಮೆರವಣಿಗೆ ಮೂಲಕ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೇಲಿಂದ ತೆರಳಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಭೆ ನಡೆಸಿದರು.
ನಂತರ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಶಿವಾನಂದ ಯಡಳ್ಳಿ, ರಾಜ್ಯ ಸರ್ಕಾರ ಬರ ಪ್ರದೇಶಗಳನ್ನು ಘೋಷಿಸುವಲ್ಲಿ ಮಲತಾಯಿ ಧೋರಣೆ ತಳೆದು ವಿಜಯಪುರ ಜಿಲ್ಲೆಗೆ ಅನ್ಯಾಯ ಮಾಡಿದೆ. ತಾಲೂಕಿನಲ್ಲಿ ಸುಮಾರು 116 ಗ್ರಾಮಗಳಿದ್ದು, ಶೇ.90ರಷ್ಟು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿವೆ.
ಇಷ್ಟಾದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ದೇವರಹಿಪ್ಪರಗಿ ತಾಲೂಕು ಬರ ಪ್ರದೇಶವೆಂದು ಘೋಷಿಸಿಲ್ಲ. ಇಚ್ಛಾಶಕ್ತಿ ಕೊರತೆಯಿಂದ ಜನಸಾಮಾನ್ಯರು, ರೈತರು ಪರಿತಪಿಸುವಂತಾಗಿದೆ. ಪ್ರತಿಯೊಂದು ಅಭಿವೃದ್ಧಿ ವಿಷಯದಲ್ಲಿ ತಾಲೂಕಿಗೆ ಅನ್ಯಾಯವಾಗುತ್ತಲೇ ಇದೆ ಇಲ್ಲಿಯ ಜನರು ಸಹ ರೋಷಿ ಹೋಗಿದ್ದಾರೆ. ಅಭಿವೃದ್ಧಿ ಕುಂಟಿತಗೊಂಡು ಮಮ್ಮಲ ಮರಗುತ್ತಿದ್ದಾರೆ.
ಸರ್ಕಾರ ತಕ್ಷಣವೇ ದೇವರಹಿಪ್ಪರಗಿ ತಾಲೂಕು ಸೇರಿ ಇಡೀ ವಿಜಯಪುರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು. ತಕ್ಷಣವೇ ಪರಿಹಾರ ಒದಗಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಈ ಮೂಲಕ ರೈತರ ನೆರವಿಗೆ ಬರಬೇಕು. ಕೆಲವೇ ದಿನಗಳಲ್ಲಿ ಬರ ಘೋಷಿಸದಿದ್ದರೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ನಂತರ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಾಘವೇಂದ್ರ ಚಲವಾದಿ, ಅಣ್ಣಪ್ಪ ಪೂಜಾರಿ, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು, ವಿವಿಧ ಸಂಘಟನೆ ಪ್ರಮುಖರು, ರೈತರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net