100 ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ

ಬಬಲೇಶ್ವರ ತಾಲೂಕಿನ ಮದಗುಣಕಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಬಸವರಾಜ ತಳವಾರ, ಅಭಿನವ ಮುರುಗೇಂದ್ರ ಸ್ವಾಮೀಜಿ, ಮುತ್ತಪ್ಪ ಶಿವಣ್ಣವರ ಮತ್ತಿತರರಿದ್ದಾರೆ.
ಬಬಲೇಶ್ವರ ತಾಲೂಕಿನ ಮದಗುಣಕಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಬಸವರಾಜ ತಳವಾರ, ಅಭಿನವ ಮುರುಗೇಂದ್ರ ಸ್ವಾಮೀಜಿ, ಮುತ್ತಪ್ಪ ಶಿವಣ್ಣವರ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭರವಸೆ
  • ಅಭಿವೃದ್ಧಿ ಕಾಮಗಾರಿಗೆ ಚಾಲನೆ
ವಿಜಯಪುರ: ಆರು ತಿಂಗಳಲ್ಲಿ ಬಬಲೇಶ್ವರ ಮತಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ಸೌಲಭ್ಯ ಸಿಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಬಬಲೇಶ್ವರ ತಾಲೂಕಿನ ಮದಗುಣಕಿ ಬಳಿ ಲೋಕೋಪಯೋಗಿ ಇಲಾಖೆಯ ವತಿಯಿಂದ 150 ಲಕ್ಷ ರೂ. ವೆಚ್ಚದ ಶಿವಣ್ಣವರ ವಸ್ತಿಯಿಂದ ಕೊಡಬಾಗಿವರೆಗಿನ ರಸ್ತೆ ಕಾಮಗಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಷದ ಸಿಸಿ ರಸ್ತೆಗೆ ಭೂಮಿಪೂಜೆ ಹಾಗೂ ಕೆಎಸ್‌ಐಐಡಿಸಿ ಸಿಎಸ್‌ಆರ್ ಅನುದಾನದಲ್ಲಿ ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಲಾ ಕಟ್ಟಡವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಸಿಎಸ್‌ಆರ್ ಅನುದಾನದಡಿ ಈಗಾಗಲೇ 100 ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ನೀಡಲಾಗಿದೆ. ಬಾಕಿ 100 ಸರ್ಕಾರಿ ಶಾಲೆಗಳಿಗೆ ಆರು ತಿಂಗಳೊಳಗೆ ಕ್ರೀಡಾ ಸಲಕರಣೆ ಒದಗಿಸಲಾಗುವುದು. ಅಲ್ಲದೇ, ಈ ಅನುದಾನದಲ್ಲಿ ಸುಂದರ ಶಾಲಾ ಕೊಠಡಿಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್, ಶೌಚಗೃಹ ನಿರ್ಮಾಣ, ಕ್ರೀಡಾ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಹಂತಹಂತವಾಗಿ 5 ರಿಂದ 7ನೇ ತರಗತಿವರೆಗೆ ವಿಸ್ತರಿಸುವ ಯೋಜನೆಯಿದೆ. ಶಿಕ್ಷಕರೂ ಕೂಡ ವಿದ್ಯಾರ್ಥಿಗಳಿಗೆ ಒಳ್ಳೆಯ ಬೋಧನೆ ಮಾಡಬೇಕು. ಪೋಷಕರು ಲಿಂಗ ತಾರತಮ್ಯವಿಲ್ಲದೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಸಚಿವರು ಸಲಹೆ ನೀಡಿದರು.
ಅಂತರ್ಜಲ ಹೆಚ್ಚಿಸಲು ಕಾಲುವೆಗಳಿಂದ ಹಳ್ಳಗಳಿಗೆ ನೀರು ತುಂಬಿಸಲಾಗುತ್ತಿದೆ. ಹೈನುಗಾರಿಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಅಕ್ಷಯಕಲ್ಪ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಪೈಲಟ್ ಯೋಜನೆ ಉತ್ತಮ ಫಲಿತಾಂಶ ನೀಡುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಕೃಷಿ ಮಾಡುವ ಯುವಕರಿಗೆ ಬೇಡಿಕೆ ಹೆಚ್ಚಾಗಲಿದೆ. ಅದಕ್ಕೆ ಪೂರಕವಾಗಿ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ, ವಿವಿಧ ಕಾರ್ಖಾನೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ಭೂಮಿ ದಾನ ಮಾಡಿದ ಮಲ್ಲಪ್ಪ ಶಿವಣ್ಣವರ ಮತ್ತು ಧರೆಪ್ಪ ಶಿವಣ್ಣವರ ಸಹೋದರರನ್ನು ಸಚಿವರು ಸನ್ಮಾನಿಸಿ ಗೌರವಿಸಿದರು. 
ಮಮದಾಪುರ ಅಭಿನವ ಮುರುಗೇಂದ್ರ ಸ್ವಾಮೀಜಿ, ಮುಖಂಡರಾದ ಮುತ್ತಪ್ಪ ಶಿವಣ್ಣವರ, ಕೆ.ಎಚ್. ಮುಂಬಾರಡ್ಡಿ, ಸೋಮಶೇಖರ ಪಾಟೀಲ, ಹಣಮಂತ ಸೊನ್ನದ, ಉಮೇಶ ಮಲ್ಲಣ್ಣವರ, ಬಸವರಾಜ ಪಾಟೀಲ, ಪರಮಾನಂದ ಚಲವಾದಿ, ಬಸವರಾಜ ಬೊಮಾರ, ಹಣಮಂತ ಛಲವಾದಿ, ಎಂ.ಕೆ. ಶಿವಣ್ಣವರ, ಕಲ್ಲಪ್ಪ ಶಿವಣ್ಣವರ, ಲೋಕೋಪಯೋಗಿ ಇಲಾಖೆ ಎಇಇ ಪ್ರಮೋದಕುಮಾರ ಹಟ್ಟಿ, ಎಇ ವಿಜಯ ಹಿರೇಮಠ, ಕೆಆರ್‌ಐಡಿಎಲ್ ಎಇಇ ಪ್ರವೀಣ ಮಠಪತಿ, ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಶಿಕ್ಷಣಾಧಿಕಾರಿ ವಸಂತ ಚವಾಣ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net