ಚನ್ನಪಟ್ಟಣ:ಕ್ರಿಕೆಟ್ ಮಾತ್ರವಲ್ಲದೇ ಎಲ್ಲ ಕ್ರೀಡಾ ಚಟುವಟಿಕೆಗಳು ದೇಹ ಮತ್ತು ಮನಸ್ಸಿಗೆ ಮುದ ನೀಡುತ್ತವೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು. sports
ತಾಲೂಕಿನಲ್ಲಿ ಗಂಗೋತ್ಸವದ ಪ್ರಯುಕ್ತ ಹೋಬಳಿಮಟ್ಟದ ವಿವಿಧ ಭಾಗಗಳಲ್ಲಿ ಶನಿವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಅಥವಾ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡಾಕೂಟದಲ್ಲಿ ಹೆಚ್ಚಿನ ತಂಡಗಳು ಭಾಗವಹಿಸಿರುವುದು ಸಂತಸದ ವಿಚಾರ ಎಂದರು.
ಪ್ರಸ್ತುತ ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಾಗಿರದೆ, ವೈಯಕ್ತಿಕ ಆರ್ಥಿಕ ಪ್ರಗತಿಗೂ ಕಾರಣವಾಗಿದೆ. ಕ್ರೀಡೆಯಲ್ಲೇ ಸಾಧನೆ ಮಾಡಿ ಸಾವಿರಾರು ಮಂದಿ ಉತ್ತಮ ಬದುಕು ಕಟ್ಟಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಗಂಗೋತ್ಸವದ ಮೊದಲ ದಿನವೇ ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದು, ಹೋಬಳಿ, ಬಳಿಕ ಜಿಪಂ ಮಟ್ಟ, ತಾಲೂಕುಮಟ್ಟ ಸ್ಪರ್ಧೆಯಲ್ಲಿ ಆಯ್ಕೆಯಾದ ಆಟಗಾರರನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಗಂಗೋತ್ಸವ ಸಂಚಾಲಕ ದುಂತೂರು ವಿಶ್ವನಾಥ್ ಮಾತನಾಡಿ, ತಾಲೂಕಿನಲ್ಲಿ ತಿಂಗಳ ಕಾಲ ಸಾಂಸ್ಕೃತಿಕ, ಶೈಕ್ಷಣಿಕ, ಕೃಷಿ ಮತ್ತು ಜಾನಪದ ಕಾರ್ಯಕ್ರಮಗಳ ತೆಗೆ ವಿವಿಧ ಚಟುವಟಿಕೆಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ಆಯ್ಕೆಯಾದವರಿಗೆ ನಗದು ಬಹುಮಾನ ಸೇರಿದಂತೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಲಾಗುವುದು ಎಂದರು.
ಅಕ್ಕೂರು ಜಿಪಂ ಕ್ಷೇತ್ರದ ಅಕ್ಕೂರು-ಹೊಸಹಳ್ಳಿ ವಿದ್ಯಾಸಂಸ್ಥೆ ಆವರಣ, ಕೊಡಂಬಳ್ಳಿ ಜಿಪಂನ ಕೊಂಡಾಪುರ ಗ್ರಾಮ, ಬೇವೂರು ಜಿಪಂನ ನಾಗವಾರ ಗ್ರಾಮದ ಕೆಂಬಾರೆ ಶಾಲೆ ಮೈದಾನ, ಹೊಂಗನೂರು ಜಿಪಂ ಕ್ಷೇತ್ರದ ಮಹದೇಶ್ವರ ದೇವಸ್ಥಾನದ ಹಿಂಭಾಗದ ಆವರಣದಲ್ಲಿ, ಮಳೂರು ಜಿಪಂನ ಬೆಳಕೆರೆ ಗೇಟ್ ಬಳಿಯ ಮೈದಾನ ಸೇರಿದಂತೆ ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಕ್ರೀಡಾಕೂಟಕ್ಕೆಂದು ಹೆಸರು ನೋಂದಾಯಿಸಿಕೊಂಡಿದ್ದ ನೂರಾರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕ್ರಿಡಾಕೂಟದಲ್ಲಿ ಭಾಗಿಯಾದ ಪ್ರತಿ ತಂಡಗಳಿಗೂ ಉಚಿತ ಕಿಟ್ ವಿತರಿಸಲಾಯಿತು. ಪ್ರಾರಂಭಿಕವಾಗಿ ಹೋಬಳಿ ಮಟ್ಟದ ಕ್ರೀಡಾಕೂಟ ಆರಂಭವಾಗಿದ್ದು, ನಂತರ ಜಿಪಂ ವ್ಯಾಪ್ತಿ ಹಾಗೂ ತಾಲೂಕುಮಟ್ಟದ ಪಂದ್ಯಾವಳಿ ನಡೆಯಲಿವೆ.