ಅಷಾಢ ಕೊನೇ ಶುಕ್ರವಾರ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ
Banashankari Temple
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
* ಬನಶಂಕರಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಭೇಟಿ
ಬೆಂಗಳೂರು:
ಆಷಾಢ ಮಾಸದ ಕೊನೇ ಶುಕ್ರವಾರ ಪ್ರಯುಕ್ತ ಬನಶಂಕರಿ, ರಾಜರಾಜೇಶ್ವರಿ, ಚೌಡೇಶ್ವರಿ ಸೇರಿ ನಗರದ ದೇವಿ ದೇವಾಲಯಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಭೇಟಿ ನೀಡಿದ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಬನಶಂಕರಿ ಅಮ್ಮನಿಗೆ ಹಾಗೂ ಶಾಂಕಾಂಬರಿ ದೇವರಿಗೆ ಭಕ್ತರು ನಿಂಬೆಹಣ್ಣಿನ ಹಾಗೂ ಬೆಲ್ಲದ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬೆಳಗ್ಗೆ ಬನಶಂಕರಿ ದೇವಿಗೆ ಅಭಿಷೇಕ ಮಾಡಿ, ಸೇಬು, ದ್ರಾಕ್ಷಿ, ಕಿತ್ತಳೆ, ಮೂಸಂಬಿ,ಪೈನಾಪಲ್, ಖರ್ಬೂಜ, ಡ್ಯಾಗನ್ ್ರೂಟ್ ಸೇರಿ ವಿವಿಧ ಹಣ್ಣುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಇನ್ನು ದೇವಾಲಯದ ಆವರಣದಲ್ಲಿನ ಶ್ರೀ ಶಾಕಾಂಬರಿ ಅಮ್ಮನವರಿಗೆ ‘ಶ್ರೀ ಕೊರವಂಜಿ ದೇವಿ’ಯನ್ನು ಅಲಂಕಾರಿಸಲಾಗಿತ್ತು.
ಆಷಾಢ ಮಾಸದ ಕೊನೇ ಶುಕ್ರವಾರ ಒಂದೇ ದಿನ 40 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ಈ ವೇಳೆ ತುಂತುರು ಮಳೆಯಲ್ಲೇ ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು. ಭಕ್ತರಿಗೆ ಎಂದಿನಂತೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಕಬ್ಬಿಣದ ಸರಳುಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸರತಿ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ:
ಆಷಾಢ ಮಾಸದಲ್ಲಿ ದೇವಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯನಗರದ ನಿಮಿಷಾಂಬ ದೇವಿ, ಮಲ್ಲೇಶ್ವರದ ಸರ್ಕಲ್ ಮಾರಮ್ಮ ಹಾಗೂ ಗಂಗಮ್ಮ ದೇವಿ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಾಲಯ, ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಾಲಯ, ಸುಂಕದಕಟ್ಟೆಯ ಚೌಡೇಶ್ವರಿ ದೇವಾಲಯ, ಮಲ್ಲೇಶ್ವರದ ಕನ್ನಿಕಾಪರಮೇಶ್ವರಿ, ಕೆಂಪೇಗೌಡನಗರದ ಬಂಡೀಕಾಳಮ್ಮ, ಜಯನಗರದ ದುರ್ಗಾ ಪರಮೇಶ್ವರಿ ದೇವಾಲಯ ಸೇರಿ ವಿವಿಧ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ. ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.