

ಬೆಂಗಳೂರು:
ಯಾವುದೇ ರೀತಿಯ ಕೌಟುಂಬಿಕ ಕಿರುಕುಳವಿಲ್ಲದೆ ನೆಮ್ಮದಿ ಮತ್ತು ಶಾಂತಿಯಿಂದ ಜೀವಿಸುವುದು ಹಿರಿಯ ನಾಗರಿಕರ ಮೂಲಭೂತ ಹಕ್ಕಾಗಿದೆ ಎಂದಿರುವ ಹೈಕೋರ್ಟ್, ವೃದ್ಧ ತಾಯಿಗೆ ಕಿರುಕುಳ ನೀಡುತ್ತಿದ್ದ ಮಗನಿಗೆ ಮನೆ ತೊರೆಯುವಂತೆ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯ ಮೇಲ್ಮನವಿ ಪ್ರಾಧಿಕಾರ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಆ ಮೂಲಕ ಮಗನನ್ನು ಮನೆಯಿಂದ ಹೊರಕ್ಕೆ ಕಳುಹಿಸಲು ಕೋರಿದ್ದ ತಾಯಿಯ ಮನವಿ ಪರಿಗಣಿಸಿದೆ
⚠️
ಷರತ್ತು ಪಾಲಿಸದ ಮಗ
ಪ್ರಾಧಿಕಾರದ ಆದೇಶ ಪ್ರಶ್ನಿಸಿ ಪುತ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ತಾಯಿಯ ಹೆಸರಿನಲ್ಲಿ 1 ಲಕ್ಷ ರೂ. ಠೇವಣಿ ಇಡುವ ಷರತ್ತಿನ ಮೇಲೆ ಪ್ರಾಧಿಕಾರದ ಆದೇಶಕ್ಕೆ ಏಕಸದಸ್ಯ ಪೀಠ ತಡೆ ನೀಡಿತ್ತು. ಆದರೆ, ಈ ಷರತ್ತನ್ನು ಅರ್ಜಿದಾರ ಪಾಲಿಸಿರಲಿಲ್ಲ. ಆದ್ದರಿಂದ ಏಕಸದಸ್ಯ ನ್ಯಾಯಪೀಠ ತಡೆ ತೆರವುಗೊಳಿಸಿ ಮನೆ ತೊರೆಯುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ, ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಅಶಾಂತಿಯ ವಾತಾವರಣವಿದೆ. ಹಿರಿಯ ನಾಗರಿಕರಿಗೆ ನೆಮ್ಮದಿ ಅಗತ್ಯವಾಗಿದೆ. ಮಗನಿಗೆ ಆಸ್ತಿಯ ಮೇಲೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ. ಆದ್ದರಿಂದ ಪ್ರಾಧಿಕಾರದ ಆದೇಶವು ಸೂಕ್ತವಾಗಿದೆ ಎಂದು ಹೇಳಿದೆ.