

ಕಲಬುರಗಿ: ನದಿಸಿನ್ನೂರ್ ಮತ್ತು ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 100 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ಘಟಕವನ್ನು ಜೇವರ್ಗಿ ತಾಲೂಕಿನ ಮದರಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ ಅವರ ಪ್ರಶ್ನೆಗೆ ಉತ್ತರಿಸಿ, ಮದರಿ ಗ್ರಾಮದಲ್ಲಿ ಖಾಸಗಿ ಜಮೀನು ಗುರುತಿಸಲಾಗಿದ್ದು, ಈ ಜಮೀನು ಸೋಲಾರ್ ಘಟಕ ಸ್ಥಾಪನೆಗೆ ಗುತ್ತಿಗೆಗೆ ನೀಡಲು ಜಮೀನು ಮಾಲಿಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸೋಲಾರ್ ಯೋಜನೆಗೆ ಭೂ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದ ನಂತರ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಗುತ್ತಿಗೆ ದರದ ಆಧಾರದ ಮೇಲೆ ಕೆಆರ್ಇಡಿಎಲ್ ಸಂಸ್ಥೆ ಭೂ ಮಾಲೀಕರಿಂದ ಜಮೀನು ಗುತ್ತಿಗೆ ಪಡೆದು ಜೆಎಸ್ಡಬ್ಲೂ ನಿಯೋ ಎನರ್ಜಿ ಲಿಮಿಟೆಡ್ ಸಂಸ್ಥೆಗೆ ಉಪ ಗುತ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು. ನದಿಸಿನ್ನೂರ್, ಕಿರಣಗಿ ಗ್ರಾಮಗಳ ವ್ಯಾಪ್ತಿಯ ಸೋಲಾರ್ ಘಟಕ ಸ್ಥಾಪನೆ ಪ್ರಸ್ತಾಪಿತ ಸ್ಥಳದಿಂದ 3 ಕಿ.ಮೀ ಅಂತರದಲ್ಲಿ ಸಿಮೆಂಟ್ ಕಾರ್ಖಾನೆಗಳು ಸ್ಥಾಪನೆಯಾಗುತ್ತಿರುವುದರಿಂದ ಈ ಸ್ಥಳದಲ್ಲಿ ಸೋಲಾರ್ ಘಟಕ ಸ್ಥಾಪಿಸುವುದು ತಾಂತ್ರಿಕವಾಗಿ ಕಾರ್ಯಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಯೋಜನೆ ಸ್ಥಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.