ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು, ಕನಕದಾಸರಾದಿಯಾಗಿ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದವರೆಲ್ಲರನ್ನು ಹಣಿಯುವ, ದಮನಿಸುವ, ಮುಗಿಸುವ ಸಂಚು-ಒಳಸಂಚುಗಳು ನಡೆಯುತ್ತಲೇ ಬಂದಿದೆ. ಬಸವಣ್ಣ ಏನು ತಪ್ಪು ಮಾಡಿದ್ದರು? ಜಾತಿ ವಿನಾಶಕ್ಕೆ ಪ್ರಯತ್ನ ಮಾಡಿದ್ದರು, ಅಂತರ್ಜಾತಿ ಮದುವೆ ಮಾಡಿಸಿದ್ದರು, ಅವಕಾಶ ವಂಚಿತ ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ಕೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು.