ಬಾಲ್ಯವಿವಾಹಕ್ಕೆ ಸಾಮಾಜಿಕ, ಸಾಂಸ್ಕೃತಿಕ ಅಜ್ಞಾನ ಕಾರಣ| High court

ಹೈಕೋರ್ಟ್​
ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ತಡೆಗೆ ಜಾಗೃತಿ ಮೂಡಿಸಿ
  • ರಾಯಚೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್​ ನಿರ್ದೇಶನ
  • ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ನ್ಯಾಯಾಲಯದ ಕಳವಳ
ಬೆಂಗಳೂರು: ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮತ್ತು ಅನಕ್ಷರತೆಯ ಕಾರಣ ರಾಯಚೂರು ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚುತ್ತಿವೆ ಎಂದು ಹೈಕೋರ್ಟ್​ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಲ್ಯವಿವಾಹ ತಡೆಗೆ ಸಾಕಷ್ಟು ಶಾಸನಾತ್ಮಕ ಕ್ರಮಗಳಿದ್ದರೂ, ಅಜ್ಞಾನ ಮತ್ತು ಬಡತನದ ಕಾರಣ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸುತ್ತಿವೆ. ಆದ್ದರಿಂದ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ರಾಯಚೂರಿನ ಗುರ್ಜಾಪುರ ಬ್ರಿಡ್ಜ್​ ಬಳಿ ಪತ್ನಿಯೇ ಪತಿಯನ್ನು ನದಿಗೆ ತಳ್ಳಿದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ನಂತರ ಆ ಪ್ರಕರಣ ಬೇರೊಂದು ಆಯಾಮ ಪಡೆದಿಕೊಂಡಿದ್ದು, ಅಪ್ರಾಪ್ತೆಯನ್ನು ವಿವಾಹವಾಗಿದ್ದ ಪತಿ ತಾತಪ್ಪನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ, ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಕೋರಿದ್ದ ತಾತಪ್ಪನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ನೀಡಿದೆ.
ರಾಯಚೂರಿನ ಶಕ್ತಿನಗರದ ತಾತಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್​ನ ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಂಕರ್​ ಸಚಿನ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತನಿಖೆ ಪೂರ್ಣಗೊಂಡಿದ್ದು, ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ಆರೋಪಿಯನ್ನು ಬಂಧನದಲ್ಲಿಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತ ಬಾಲಕಿಯರನ್ನು ಅವರ ಕುಟುಂಬದವರೇ ಮದುವೆಗೆ ಒತ್ತಾಯಿಸುತ್ತಿರುವುದು ಆತಂಕಕಾರಿ ಮತ್ತು ಬೇಸರದ ಸಂಗತಿ. ಇದನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ಪ್ರಕರಣಗಳು ವರದಿಯಾಗುತ್ತಲೆ ಇವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಅಜ್ಞಾನದ ಕಾರಣ ಪ್ರಸ್ತುತ ಪ್ರಕರಣವು ಸಂಭವಿಸಿದ್ದು, ಬಾಲ್ಯವಿವಾಹ ನಿಷೇಧ ಕಾಯ್ದೆಯ ಉಲ್ಲಂನೆಯಾಗಿದೆ. ಪರಿಣಾಮವಾಗಿ ಪೋಕ್ಸೋ ಕಾಯ್ದೆಯನ್ನು ಅನ್ವಯಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಾಯೋಗಿಕ ದೃಷ್ಟಿಕೋನ ಅಗತ್ಯ

ಈ ಪ್ರಕರಣದಲ್ಲಿ ಅರ್ಜಿದಾರ ಮತ್ತು ಸಂತ್ರಸ್ತೆ ಇಬ್ಬರೂ ದುರ್ಬಲ, ಹಿಂದುಳಿದ ವರ್ಗಕ್ಕೆ ಸೇರಿದ್ದು, ಸಂತ್ರಸ್ತೆಯ ವಯಸ್ಸಿನ ಬಗ್ಗೆಯೂ ವಿವಾದವಿದೆ. ಆದ್ದರಿಂದ ಅರ್ಜಿದಾರರ ಬಂಧನ ಮುಂದುವರಿಸಿದರೆ ಸಂವಿಧಾನದ 21ನೇ ವಿಧಿ ಅವರಿಗೆ ಕಲ್ಪಿಸಿರುವ ಹಕ್ಕುಗಳಿಗೆ ಧಕ್ಕೆಯಾಗಬಹುದು. ಆದ್ದರಿಂದ, ಈ ಪ್ರಕರಣದಲ್ಲಿ ಪ್ರಾಯೋಗಿಕ ಮತ್ತು ಸಂವೇದನಾಶೀಲ ದೃಷ್ಟಿಕೋನದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದಾಖಲೆಗಳಲ್ಲಿ ವಿರೋಧಾಭಾಸ:
ಪ್ರಸ್ತುತ ಪ್ರಕರಣದಲ್ಲಿ ಬಾಲಕಿಯ ಶಾಲಾ ದಾಖಲಾತಿಗಳ ಪ್ರಕಾರ, ಆಕೆ ಅಪ್ರಾಪ್ತೆ ಎಂದು ಕಂಡುಬಂದರೂ, ಆಧಾರ್​ ಕಾರ್ಡ್​ನಲ್ಲಿ ಬೇರೊಂದು ಜನ್ಮ ದಿನಾಂಕವಿದೆ. ಅದು ಆಕೆಯನ್ನು ವಯಸ್ಕಳು ಎಂದು ಹೇಳುತ್ತದೆ. ಆಧಾರ್​ ಕಾರ್ಡ್​ನಲ್ಲಿದ್ದ ವಯಸ್ಸನ್ನು ನಂಬಿ ತಾತಪ್ಪ ಆಕೆಯನ್ನು ಮದುವೆಯಾಗಿದ್ದಾನೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಆದ್ದರಿಂದ ವಯಸ್ಸಿನ ಗೊಂದಲದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಬೇಕಾಗಿದೆ. ಹಿಂದುಳಿದ ಪ್ರದೇಶದಿಂದ ಬಂದಿರುವ ಈ ಪ್ರಕರಣದ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ವೈವಾಹಿಕ ಹಕ್ಕು ಚಲಾಯಿಸಬಾರದು

ಸಂತ್ರಸ್ತೆ ಪ್ರಾಪ್ತ ವಯಸ್ಕಳಾಗುವ ತನಕ ತನ್ನೊಂದಿಗೆ ಇರಿಸಿಕೊಳ್ಳುತ್ತೇನೆ. ಅರ್ಜಿದಾರ ಮತ್ತು ಸಂತ್ರಸ್ತೆಯ ನಡುವೆ ಯಾವುದೇ ಸಂಬಂಧ ಏರ್ಪಡದಂತೆ ಖಚಿತಪಡಿಸಿಕೊಳ್ಳುತ್ತೇನೆ ಎಂದು ಸಂತ್ರಸ್ತೆಯ ತಾಯಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಬಾಲಕಿಯು ಪ್ರಾಪ್ತ ವಯಸ್ಕಳಾಗುವವರೆಗೆ ಮತ್ತು ಆಕೆಯ ಸಾಕ್ಷ್ಯ ದಾಖಲಿಸುವ ತನಕ ಸಹಬಾಳ್ವೆ ಆರಂಭಿಸುವುದಿಲ್ಲ ಎಂದು ಅರ್ಜಿದಾರ ಮತ್ತು ಸಂತ್ರಸ್ತೆಯ ತಾಯಿ ನ್ಯಾಯಾಲಯಕ್ಕೆ ಮುಚ್ಚಳಿಕೆ ಸಲ್ಲಿಸಬೇಕು. ಸಾಗೆ ಯಾವುದೇ ಬೆದರಿಕೆ ಅಥವಾ ಆಮೀಷ ಒಡ್ಡಬಾರದು ಎಂದು ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net