ಎಸ್‌ಎಂ ಕೃಷ್ಣ ಸ್ಮಾರಕ ಓಪನ್ ಟೆನಿಸ್: ಕ್ವಾರ್ಟರ್​ಫೈನಲ್‌ಗೇರಿದ ಮುಕುಂದ್

 ಮುಕುಂದ್
ಮುಕುಂದ್
Published on
ಬೆಂಗಳೂರು: ಭಾರತದ ಮುಕುಂದ್ ಶಶಿಕುಮಾರ್ 2ನೇ ಆವೃತ್ತಿಯ ಎಸ್.ಎಂ. ಕೃಷ್ಣ ಸ್ಮಾರಕ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಕ್ವಾ ಕ್ವಾರ್ಟರ್​ಫೈನಲ್‌ಗೇರಿದ್ದಾರೆ. ಕರ್ನಾಟಕದ ಕ್ರಿಷ್ ತ್ಯಾಗಿ, ಮನೀಷ್ ಸುರೇಶ್ ಕುಮಾರ್, ಸಿದ್ಧಾರ್ಥ್ ರಾವತ್ ಸಹಿತ ಇತರ ಭಾರತೀಯರು 2ನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.
ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮುಕುಂದ್ ಜಪಾನ್‌ನ ತೈಯೊ ಮಯನಕ ವಿರುದ್ಧ 6-4, 7-6 ನೇರಸೆಟ್‌ಗಳಿಂದ ಗೆಲುವು ದಾಖಲಿಸಿದರು. ಅವರು ಒಂದು ಗಂಟೆ, 46 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು. ಅವರೀಗ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕೊನೇ ಆಶಾಕಿರಣವಾಗಿದ್ದಾರೆ. ಮುಕುಂದ್ ಡಬಲ್ಸ್ ವಿಭಾಗದಲ್ಲೂ ಕನ್ನಡಿಗ ಆದಿಲ್ ಕಲ್ಯಾಣ್‌ಪುರ್ ಜತೆಗೆ ಕ್ವಾರ್ಟರ್​ಫೈನಲ್‌ಗೇರಿದ್ದಾರೆ. ಮುಕುಂದ್-ಆದಿಲ್ ಜೋಡಿ ಜೆಕ್ ಗಣರಾಜ್ಯದ ಡೊಮಿನಿಕ್ ಪಲನ್ ಮತ್ತು ಭಾರತದ ದಿಗ್ವಿಜಯ್‌ಪ್ರತಾಪ್ ಸಿಂಗ್ ವಿರುದ್ಧ 6-3, 7-5 ನೇರಸೆಟ್‌ಗಳಿಂದ ಗೆಲುವು ಸಾಧಿಸಿತು.
ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಬೆಂಗಳೂರಿನ ಯುವ ಆಟಗಾರ ಕ್ರಿಷ್ ತ್ಯಾಗಿ 2ನೇ ಸುತ್ತಿನಲ್ಲಿ 3ನೇ ಶ್ರೇಯಾಂಕಿತ ಬ್ರಿಟನ್‌ನ ಹಮಿಶ್ ಸ್ಟೀವರ್ಟ್ ವಿರುದ್ಧ 6-4, 4-6, 3-6ರಿಂದ ವೀರೋಚಿತ ಸೋಲು ಅನುಭವಿಸಿದರು. ಕ್ರಿಷ್ ತ್ಯಾಗಿ ಡಬಲ್ಸ್‌ನಲ್ಲೂ ಪ್ರಣವ್ ಸೆಂಥಿಲ್ ಕುಮಾರ್ ಜತೆ ಪರಾಭವಗೊಂಡರು.
ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಹಾಗೂ ಕರ್ನಾಟಕ ಓಪನ್ ಚಾಂಪಿಯನ್ ಕೀಗನ್ ಸ್ಮಿತ್‌ಗೆ ಸೋಲುಣಿಸಿ ಗಮನಸೆಳೆದಿದ್ದ ಮನೀಷ್ ಸುರೇಶ್ ಕುಮಾರ್ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ನಂ. 40 ಬೆಲಾರಸ್‌ನ ಇಲ್ಯಾ ಇವಾಷ್ಕ ವಿರುದ್ಧ 1-6, 1-6 ನೇರಸೆಟ್‌ಗಳಿಂದ ಪರಾಭವಗೊಂಡರು. ಸಿದ್ಧಾಥ್ ರಾವತ್ 6ನೇ ಶ್ರೇಯಾಂಕಿತ ಸೆರ್ಬಿಯಾದ ಒಗ್ನಜೆನ್ ಮಿಲಿಕ್ ವಿರುದ್ಧ 3-6, 1-6ರಿಂದ ಶರಣಾದರು.
ಡಬಲ್ಸ್‌ನಲ್ಲಿ ನಿಕಿ ಕಲಿಯಂಡ ಪೂಣಚ ಮತ್ತು ಸಾಕೇತ್ ಮೈನೇನಿ ಜೋಡಿ ಕೂಡ ಕ್ವಾರ್ಟರ್​ಫೈನಲ್‌ಗೇರಿದೆ. ನಿಕಿ-ಸಾಕೇತ್ ಜೋಡಿ 6-2, 6-3ರಿಂದ ಕ್ಯಾಸಿ ಅಲ್ಕಂತರ ಮತ್ತು ಮ್ಯಾಕ್ಸಿಮಸ್ ಜೋನ್ಸ್ ಜೋಡಿಯನ್ನು ಮಣಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net