ಸ್ವಚ್ಛತಾ ಕಾರ್ಯಕ್ಕೆ ಎಸ್‌ಜೆವಿಎನ್ ವಿಶೇಷ ಅಭಿಯಾನ

16 ಲಕ್ಷ ಮೌಲ್ಯದ 13 ಟನ್ ಇ-ತ್ಯಾಜ್ಯ ವಿಲೇವಾರಿ
Senior officials of the organization themselves participated in the collection of waste materials as part of a special cleanliness drive undertaken by SJVN.
ಎಸ್‌ಜೆವಿಎನ್ ಸಂಸ್ಥೆ ಹಮ್ಮಿಕೊಂಡಿದ್ದ ವಿಶೇಷ ಸ್ವಚ್ಛತಾ ಅಭಿಯಾನದಡಿ ತ್ಯಾಜ್ಯವಸ್ತುಗಳ ಸಂಗ್ರಹದಲ್ಲಿ ಸ್ವತಃ ಸಂಸ್ಥೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವುದು, ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಬಾಕಿ ಕಡತಗಳ ವಿಲೇವಾರಿಗೆ ಆದ್ಯತೆ ನೀಡುವ ಉದ್ದೇಶದಿಂದ ಎಸ್‌ಜೆವಿಎನ್ ಸಂಸ್ಥೆ ವಿಶೇಷ ಅಭಿಯಾನ 6.0 ಅಡಿಯಲ್ಲಿ ತನ್ನ ಎಲ್ಲ ಯೋಜನಾ ಪ್ರದೇಶಗಳು ಮತ್ತು ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ಕೇಂದ್ರ ವಿದ್ಯುತ್ ಸಚಿವಾಲಯ ಹಾಗೂ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಮಾರ್ಗದರ್ಶನದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತೆಯನ್ನು ಸಾಂಸ್ಥಿಕ ಕಾರ್ಯವೈಖರಿಯ ಭಾಗವಾಗಿಸುವುದು, ಸರ್ಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆ ಮಾಡುವುದು ಹಾಗೂ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಒತ್ತು ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

ಅಭಿಯಾನದಡಿ ಎಸ್‌ಜೆವಿಎನ್ ಸಂಸ್ಥೆಯ ಪ್ರಧಾನ ಕಚೇರಿಯಿಂದ 7.5 ಸಾವಿರ ಕೆ.ಜಿ. ಹಾಗೂ ನಾಥ್ಪಾ ಝಾಕ್ರಿ ಜಲವಿದ್ಯುತ್ ಕೇಂದ್ರದಿಂದ 5.8 ಸಾವಿರ ಕೆ.ಜಿ. ಸೇರಿದಂತೆ ಒಟ್ಟು 13.32 ಟನ್ ಬಳಕೆಯಾದ ಬ್ಯಾಟರಿಗಳನ್ನು ವಿಲೇವಾರಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ 16,11,453 ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಸುಮಾರು 25 ಟನ್ ಇ-ತ್ಯಾಜ್ಯ ಮತ್ತು ಬಳಕೆಗೆ ಬಾರದ ವಸ್ತುಗಳನ್ನು ವಿಲೇವಾರಿಗೆ ಗುರುತಿಸಲಾಗಿದೆ. ಇದರಲ್ಲಿ 800 ಕೆ.ಜಿ. ಟೈರ್‌ಗಳೂ ಸೇರಿವೆ.

ಪರಿಸರ ಸಂರಕ್ಷಣೆಯ ಕ್ರಮಗಳ ಜತೆಗೆ ಆಡಳಿತಾತ್ಮಕ ಸುಧಾರಣೆಗೂ ಸಂಸ್ಥೆ ಆದ್ಯತೆ ನೀಡಿದೆ. ವಿವಿಧ ಯೋಜನೆಗಳಲ್ಲಿ ಬಾಕಿ ಉಳಿದಿದ್ದ ಸುಮಾರು 322 ಕಡತಗಳು ಮತ್ತು ದಾಖಲೆಗಳನ್ನು ವಿಲೇವಾರಿ ಮಾಡಲಾಗಿದೆ. ಇವುಗಳ ಒಟ್ಟು ತೂಕ ಸುಮಾರು 585 ಕೆ.ಜಿ. ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಸರಳೀಕರಿಸುವುದು, ಸಾರ್ವಜನಿಕರಿಂದ ಬಂದಿದ್ದ ಬಾಕಿ ಕುಂದುಕೊರತೆಗಳು ಹಾಗೂ ಮೇಲ್ಮನವಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದೆ.

ಎಸ್‌ಜೆವಿಎನ್ ಗುರುತಿಸಿದ 14 ಘಟಕಗಳಲ್ಲಿ ವಿಶೇಷ ಸ್ವಚ್ಛತೆ ಮತ್ತು ನೈರ್ಮಲ್ಯ ಅಭಿಯಾನಗಳನ್ನು ನಡೆಸಲಾಗಿದ್ದು, ಸ್ವಚ್ಛತೆ, ದಾಖಲೆಗಳ ವ್ಯವಸ್ಥಿತ ನಿರ್ವಹಣೆ ಹಾಗೂ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಯನ್ನು ಸಾಂಸ್ಥಿಕ ಕಾರ್ಯವೈಖರಿಯೊಂದಿಗೆ ಸಂಯೋಜಿಸುವ ಮೂಲಕ ದಕ್ಷತೆ, ಹೊಣೆಗಾರಿಕೆ ಮತ್ತು ಪರಿಸರ ಕಾಳಜಿಗೆ ಆದ್ಯತೆ ನೀಡುವ ಕಾರ್ಯಸಂಸ್ಕೃತಿಯನ್ನು ಬೆಳೆಸಲು ಸಂಸ್ಥೆ ಮುಂದಾಗಿದೆ.