ಪ್ರಜ್ವಲ್​ ರೇವಣ್ಣ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್​ಐಟಿಗೆ ಸೂಚನೆ| High court

Prajwal Revanna
Prajwal Revanna
Published on
ಬೆಂಗಳೂರು: ಮಹಿಳೆಯೊಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಡಿಫಾಲ್ಟ್​ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎಸ್​ಐಟಿಗೆ ಹೈಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ.
ವಿಚಾರಣಾ ನ್ಯಾಯಾಲಯ ಜಾಮೀನು ತಿರಸ್ಕರಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಇದು ಯಾವ ಆಧಾರದಲ್ಲಿ ಜಾಮೀನಿಗೆ ಅರ್ಜಿ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಅರ್ಜಿದಾರರ ವಕೀಲರು, ಈ ಪ್ರಕರಣದಲ್ಲಿ ಎಸ್​ಐಟಿ ಈಗಾಗಲೇ ಚಾರ್ಜ್​ಶೀಟ್​ ಸಲ್ಲಿಸಿದೆ. ಆದ್ದರಿಂದ ಡಿಾಲ್ಟ್​ ಜಾಮೀನು ಕೋರಿದ್ದೇವೆ ಎಂದು ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ ಎಸ್​ಐಟಿಗೆ ನೋಟಿಸ್​ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದೆ. ಮುಂದಿನ ವಿಚಾರಣೆ ಜು. 3ಕ್ಕೆ ನಿಗದಿಯಾಗಿದೆ.

ಪ್ರಕರಣದ ಹಿನ್ನೆಲೆ:

ವಿಶ್ವವಿದ್ಯಾನಿಲಯವೊಂದರಲ್ಲಿ ಪುತ್ರನಿಗೆ ಸೀಟು ಕೋಡಿಸುವಂತೆ ಕೋರಿ ಸಂತ್ರಸ್ತ ಮಹಿಳೆಯು ಸಂಸದರಾಗಿದ್ದ ಪ್ರಜ್ವಲ್​ ರೇವಣ್ಣ ಅವರನ್ನು 2019ರಲ್ಲಿ ಸಂಪರ್ಕಿಸಿದ್ದರು. ಮಹಿಳೆಯ ಸಂಪರ್ಕ ಸಂಖ್ಯೆ ಪಡೆದಿದ್ದ ಪ್ರಜ್ವಲ್​, ಅವರಿಗೆ ಕರೆ ಮಾಡಿ ವಿವಸ್ತ್ರವಾಗಿ ವಿಡಿಯೋ ಕಾಲ್​ ಮಾಡುವಂತೆ ಪೀಡಿಸಿದ್ದರು. ಆಕೆಯ ಅನುಮತಿ ಇಲ್ಲದೆ ಈ ವಿಡಿಯೋಗಳನ್ನು ರೆಕಾರ್ಡ್​ ಮಾಡಿಟ್ಟುಕೊಂಡು, ತಾನು ಕರೆ ಮಾಡಿದಾಗ ಸ್ವೀಕರಿಸದಿದ್ದರೆ ಅವುಗಳನ್ನು ಬಹಿರಂಗಗೊಳಿಸುವ ಬೆದರಿಕೆ ಒಡ್ಡಲಾಗಿತ್ತು. ಈ ಬಗ್ಗೆ ಮಹಿಳೆ ನೀಡಿದ್ದ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿರುವ ಎಸ್​ಐಟಿ ಚಾರ್ಜ್​ಶೀಟ್​ ಸಲ್ಲಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net