ಸಿದ್ದರಾಮಯ್ಯನವರೇ ಅಧಿಕಾರ ಹಂಚಿಕೆಯ ಸಂದೇಶ ನೀಡಲಿದ್ದಾರೆ: ಸಂಚಲನ ಸೃಷ್ಟಿಸಿದ ಡಿಸಿಎಂ ಡಿಕೆಶಿ ಹೇಳಿಕೆ | D K Shivakumar

D K Shivakumar |  ಡಿಸಿಎಂ ಡಿ.ಕೆ. ಶಿವಕುಮಾರ್
D K Shivakumar | ಡಿಸಿಎಂ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ಸಚಿವ ಹೆಚ್.ಸಿ ಮಹದೇವಪ್ಪ ಬಹಳ ದೊಡ್ಡ ನಾಯಕರು, ಸದ್ಯ ಅವರೂ ನಮ್ಮ ಹೈಕಮಾಂಡ್​ನ ಭಾಗವಾಗಿದ್ದು, ಅವರ ಕುರಿತಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಹೇಳಿದ್ದಾರೆ.
ನಗರದ ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ಅಧಿಕಾರ ಹಂಚಿಕೆ ವಿಚಾರವಾಗಿ ಯಾವ ನಾಯಕರು ಹೇಳಿಕೆ ನೀಡಿದರು ಅದರ ಬಗ್ಗೆ ಸಿಎಂ ಮತ್ತು ವರಿಷ್ಟರು ಕ್ರಮ ಕೈಗೊಳ್ಳುತ್ತಾರೆ, ನಾನು ಮಹದೇವಪ್ಪನಿಗೆ, ಬೇರೆಯವರಿಗೆ ಉತ್ತರ ನೀಡಲು ತಯಾರಿಲ್ಲ ಎಂದರು.
ನಾಯಕತ್ವ ವಿಚಾರವಾಗಿ ಈ ಹಿಂದೆ ಹೇಳಿರುವಂತೆಯೇ ನಾನು, ಸಿದ್ದರಾಮಯ್ಯನವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ. ಈ ತೀರ್ಮಾನ ಏನು ಎಂಬುದು ಸಮಯ ಬಂದಾಗ ತಿಳಿಯುತ್ತದೆ. ಇದು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟು ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸಮಯ ಬಂದಾಗ ರಾಜ್ಯದ ಜನಕ್ಕೆ ಇದರ ಕುರಿತಾಗಿ ಸಂದೇಶ ನೀಡುತ್ತಾರೆ ಎಂದು ಹೇಳಿದರು.

ಶಾಸಕರ ವಿದೇಶ ಪ್ರವಾಸದ ಗೊತ್ತಿಲ್ಲ

ನನಗೆ ಯಾವ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ. ಈ ವಿಷಯವನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ, ಇದು ಅವರ ವೈಯಕ್ತಿಕ ಪ್ರವಾಸವೋ, ಬೇರೆಯವರು ಅವರನ್ನು ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಪ್ರವಾಸಕ್ಕೆ ಕಳುಹಿಸುತ್ತಿರುವವರು ಉಂಟು ಹಾಗೂ ಪ್ರವಾಸ ಹೋಗುತ್ತಿರುವವರು ಉಂಟು. ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಚಾಣಾಕ್ಯ ವಿವಿ, ಆರ್ ಎಸ್ಎಸ್ ಕಚೇರಿಗೆ ನೂರಾರು ಎಕರೆ ಕೊಟ್ಟಿಲ್ಲವೇ?

ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಖಂಡಿತವಾಗಿ ನಮ್ಮ ಪಕ್ಷದ ಭವನಗಳಿಗೆ ಸರ್ಕಾರಿ ಜಾಗ ಬಳಸಿಕೊಳ್ಳುತ್ತಿದ್ದೇವೆ, ಮಹಾತ್ಮಾ ಗಾಂಧಿಜಿ ಕಾಂಗ್ರೆಸ್​​ನ ಅಧ್ಯಕ್ಷತೆ ವಹಿಸಿಕೊಂಡು 100 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ನಾವು 5-10 ಸಾವಿರ ಚದರ ಅಡಿಗಳಷ್ಟು ಜಾಗವನ್ನು ಮಂಜೂರು ಮಾಡುತ್ತಿದ್ದೇವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಟ್ರಸ್ಟ್ ಗಳ ಹೆಸರಿನಲ್ಲಿ ಜಾಗ ಪಡೆದಿದ್ದಾರೆ. ಚಾಣಾಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ರೂಪಾಯಿ ಬೆಳೆಬಾಳುತ್ತದೆ. ಆದರೆ ಅವರು ಪ್ರತಿ ಎಕರೆಗೆ 50 ಲಕ್ಷದ ದರದಲ್ಲಿ 100 ಎಕರೆ ಜಾಗ ಮಂಜೂರು ಮಾಡಿದ್ದು, ಸಿಎಸ್ಆರ್ ನಿಧಿ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ಈ ಹಿಂದೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಅವರ ಸರ್ಕಾರ ಜಾಗ ಮಂಜೂರು ಮಾಡದೇ, ಆರ್ ಎಸ್ಎಸ ಕಚೇರಿ ನಿರ್ಮಾಣವಾಗಿದ್ದು ಹೇಗೆ..? ಸದಾಶಿವನಗರದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಪಾರ್ಕನ್ನು ವೆಲ್ ನೆಸ್ ಸೆಂಟರ್ ನ ಯೋಗಾ ಕಚೇರಿಗೆ ನೀಡಿದ್ದು, ಅವರು ಕಚೇರಿ ಕಟ್ಟಿಕೊಂಡಿದ್ದಾರೆ. ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ ಎಂದರು.
ಬಿಜೆಪಿ ನಾಯಕರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ವಿಪಕ್ಷವಾಗಿ ಅವರು ಏನಾದರೂ ಆರೋಪ ಮಾಡಿಕೊಳ್ಳಲಿ. ನಾವು ನಮ್ಮ ಪಕ್ಷದ ದೇವಾಲಯವನ್ನು ಕಟ್ಟಲು ಈ ತೀರ್ಮಾನಕ್ಕೆ ಬಂದಿದ್ದೇವೆ. ಇದು ನಮ್ಮ ಕರ್ತವ್ಯ. ನಾನು ಇದನ್ನು ಮಾಡಿಯೇ ಮಾಡುತ್ತೇನೆ. ಎಲ್ಲಾ ಮಾನದಂಡಗಳು, ಅರ್ಹತೆ ಆಧಾರದ ಮೇಲೆ ನಾವು ಈ ಜಾಗವನ್ನು ಮಂಜೂರು ಮಾಡುತ್ತಿದ್ದೇವೆ. ಈ ಬಗ್ಗೆ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹತ್ತಲಿ ಎಂದು ಸವಾಲ್​ ಹಾಕಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net