ಬ್ರೇಕ್​​ಫಾಸ್ಟ್​​ ಬಳಿಕ CM ರಾಜೀನಾಮೆ? ಡಿಕೆಶಿಗೆ ಪಟ್ಟಾಭಿಷೇಕ್ಕೆ ಕೌಂಟ್‌ಡೌನ್! ರಾಹುಲ್ ನಡೆಗೆ ಸಿದ್ದು ಫ್ಯಾನ್ಸ್​​ ಆಕ್ರೋಶ

CM Siddaramaiah
CM Siddaramaiah
Published on
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ(CM) ಬದಲಾವಣೆ ಪ್ರಕ್ರಿಯೆ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಕಳೆದ ಕೆಲವು ದಿನಗಳಿಂದ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆದ ಹೈವೋಲ್ಟೇಜ್ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ ಎಂಬ ದಟ್ಟ ವದಂತಿಗಳು ಹಬ್ಬಿವೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಕಾಲ ಸನ್ನಿಹಿತವಾಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ನಾಯಕತ್ವ ಬದಲಾವಣೆಯ ಕೌಂಟ್‌ಡೌನ್ ಆರಂಭವಾಗಿದೆ.
ಈ ಎಲ್ಲ ಹೈಡ್ರಾಮಾಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಇಂದು ಬೆಳಿಗ್ಗೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಉನ್ನತ ಮಟ್ಟದ ಉಪಾಹಾರ ಕೂಟವನ್ನು ಆಯೋಜಿಸಿದ್ದಾರೆ. ಇಡೀ ಸಚಿವ ಸಂಪುಟದ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗುತ್ತಿದ್ದು, ಈ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ದೆಹಲಿಯಿಂದ ಆಗಮಿಸಿ ಈ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಜಿದ್ದಾಜಿದ್ದಿನ ರಾಜಕೀಯಕ್ಕೆ ಸಾಕ್ಷಿಯಾಗಿದೆ.
ರಾಜೀನಾಮೆಗೆ ಕೌಂಟ್‌ಡೌನ್ ಶುರುವಾಗಿರುವ ಬೆನ್ನಲ್ಲೇ ಈ ಉಪಾಹಾರ ಕೂಟ ಆಯೋಜನೆಗೊಂಡಿದ್ದು, ಸಿದ್ದರಾಮಯ್ಯ ಅವರು ತಾವು ರಾಜೀನಾಮೆ ನೀಡಲು ಕಾರಣವಾದ ಪರಿಸ್ಥಿತಿ ಮತ್ತು ಹೈಕಮಾಂಡ್ ಒತ್ತಡದ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ತಮ್ಮ ಸಚಿವ ಸಂಪುಟದ ನಾಯಕರು ಹಾಗೂ ಶಾಸಕರು ಯಾವುದೇ ರೀತಿಯ ಭಿನ್ನಮತ ಸೃಷ್ಟಿಸದೆ ಪಕ್ಷದ ಶಿಸ್ತಿಗೆ ಒಳಪಡಬೇಕು ಎಂದು ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ದೆಹಲಿ ಸಭೆ ಬಳಿಕ ಹೆಚ್ಚಿದ ಸಸ್ಪೆನ್ಸ್

ದೆಹಲಿಯಲ್ಲಿ ಎಐಸಿಸಿ ವರಿಷ್ಠರೊಂದಿಗೆ ನಡೆದ ಸುದೀರ್ಘ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡರಾತ್ರಿ ಬೆಂಗಳೂರಿಗೆ ಮರಳಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲೇ ಮೊಕ್ಕಾಂ ಹೂಡಿ ಹೈಕಮಾಂಡ್ ನಾಯಕರೊಂದಿಗೆ ಮುಂದಿನ ಹೆಜ್ಜೆಗಳ ಕುರಿತು ಮಾತುಕತೆ ನಡೆಸಿ ಇಂದು ಬೆಂಗಳೂರಿಗೆ ಬಂದಿಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜೀನಾಮೆ ಊಹಾಪೋಹಗಳ ಬಗ್ಗೆ ನೇರ ಉತ್ತರ ನೀಡದೆ, "ನಾಳೆ ಎಲ್ಲವನ್ನೂ ಮಾತನಾಡುತ್ತೇನೆ," ಎಂದು ಹೇಳಿರುವುದು ಸಸ್ಪೆನ್ಸ್ ಅನ್ನು ಮತ್ತಷ್ಟು ರೋಚಕಗೊಳಿಸಿದೆ. ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಸಿಎಂ ಆಗಿ ಸಿದ್ದರಾಮಯ್ಯ ಅವರ ಇಂದಿನ ಅಧಿಕೃತ ಕಾರ್ಯಕ್ರಮಗಳೇ ಕೊನೆಯಾಗುವ ಸಾಧ್ಯತೆ ಇದೆ.

ಡಿಕೆಶಿ ಪದಗ್ರಹಣಕ್ಕೆ ವೇದಿಕೆ ಸಿದ್ಧ

ಹಿಂದುಳಿದ ವರ್ಗಗಳು ಮತ್ತು ದಲಿತರ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್‌ಗೆ ಧಕ್ಕೆಯಾಗದಂತೆ ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಲು ಕಾಂಗ್ರೆಸ್ ನಾಯಕತ್ವ ಯೋಜಿಸಿದೆ. ಶೀಘ್ರದಲ್ಲೇ ಶಾಸಕಾಂಗ ಪಕ್ಷದ (CLP) ಸಭೆ ಕರೆಯುವ ಸಾಧ್ಯತೆಯಿದ್ದು, ಹೈಕಮಾಂಡ್ ವೀಕ್ಷಕರ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ನೂತನ ನಾಯಕರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಈ ಹೈಡ್ರಾಮಾಕ್ಕೆ ಇಂದು ಅಧಿಕೃತ ತೆರೆ ಬೀಳುವ ಲಕ್ಷಣಗಳು ದಟ್ಟವಾಗಿವೆ.

ರಾಹುಲ್ ಗಾಂಧಿ ನಡೆಗೆ ತೀವ್ರ ವಿರೋಧ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಅವರ ನೂರಾರು ಕಟ್ಟಾ ಬೆಂಬಲಿಗರು ಬೆಂಗಳೂರಿನಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಹೈಕಮಾಂಡ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು, "ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಬಾರದು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು," ಎಂದು ಪಟ್ಟು ಹಿಡಿದಿದ್ದಾರೆ. "ದಯವಿಟ್ಟು ಹೈಕಮಾಂಡ್ ಈ ಆತುರದ ತೀರ್ಮಾನವನ್ನು ತಕ್ಷಣವೇ ವಾಪಸ್ ಪಡೆಯಬೇಕು" ಎಂದು ಕೈಮುಗಿದು ಆಗ್ರಹಿಸಿದ್ದಾರೆ.

ಸಿದ್ದುಗೆ ರಾಷ್ಟ್ರ ರಾಜಕಾರಣದ ಆಫರ್?

ಮುಂದಿನ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರನ್ನು ಗೌರವಯುತವಾಗಿ ಅಧಿಕಾರದಿಂದ ಕೆಳಗಿಳಿಸಲು 'ಸಾಫ್ಟ್ ಎಕ್ಸಿಟ್' ಫಾರ್ಮುಲಾ ಸಿದ್ಧಪಡಿಸಲಾಗಿದೆ. ಇದರ ಭಾಗವಾಗಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿ, ರಾಷ್ಟ್ರ ಮಟ್ಟದಲ್ಲಿ ಅಖಿಲ ಭಾರತ ಹಿಂದುಳಿದ ವರ್ಗಗಳ (OBC) ಸಮಿತಿಯ ಪ್ರಮುಖ ಜವಾಬ್ದಾರಿ ವಹಿಸಲು ವರಿಷ್ಠರು ಮುಂದಾಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net