ಶೂಟೌಟ್ ಪ್ರಕರಣ ನ್ಯಾಯಾಧೀಶರಿಂದ ತನಿಖೆಯಾಗಲಿ

ಶೂಟೌಟ್ ಪ್ರಕರಣ ಖಂಡಿಸಿ ಹನೂರಿನಲ್ಲಿ ವಿವಿಧ ರೈತಪರ, ಪ್ರಗತಿಪರ ಸಂಘಟನೆ ಹಾಗೂ ಮೃತರ ಕುಟುಂಬಸ್ಥರಿಂದ ಪ್ರತಿಭಟನೆ ನಡೆಯಿತು.
ಶೂಟೌಟ್ ಪ್ರಕರಣ ಖಂಡಿಸಿ ಹನೂರಿನಲ್ಲಿ ವಿವಿಧ ರೈತಪರ, ಪ್ರಗತಿಪರ ಸಂಘಟನೆ ಹಾಗೂ ಮೃತರ ಕುಟುಂಬಸ್ಥರಿಂದ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶೂಟೌಟ್ ಪ್ರಕರಣ ಖಂಡಿಸಿ
  • ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು

ಹನೂರು:

ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು...ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು... ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು... ಕುಟುಂಬಸ್ಥರಿಗೆ ಉದ್ಯೋಗ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು...

ಇವು ಶೂಟೌಟ್ ಪ್ರಕರಣ ಖಂಡಿಸಿ ಗುರುವಾರ ಹನೂರಿನಲ್ಲಿ ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರಿಂದ ಕೇಳಿ ಬಂದ ಪ್ರಮುಖ ಒತ್ತಾಯಗಳು.
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ನೆರೆದಿದ್ದ ರೈತ ಸಂಘ, ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ, ಬಹುಜನ ಸಮಾಜ ಪಾರ್ಟಿ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಕೆಆರ್‌ಎಸ್ ಸಂಘಟನೆಯ ಪದಾಧಿಕಾರಿಗಳು, ರೈತರು ಹಾಗೂ ಕುಟುಂಬಸ್ಥರು ಮೃತರ ಭಾವಚಿತ್ರವನ್ನು ಹಿಡಿದು ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿ ತಲುಪಿದರು. ನಂತರ ಶೂಟೌಟ್ ಪ್ರಕರಣದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಮಾತನಾಡಿ, ಆ.15ರಂದು ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಬೇಟೆಗಾರರು ಎಂದು ಬಿಂಬಿಸಿ ಗುಂಡಿಕ್ಕಿ ಕೊಂದಿರುವುದು ಖಂಡನೀಯ. ಆದರೆ ತಪ್ಪಿತಸ್ಥರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ನೊಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಹಾಗಾಗಿ ತಪ್ಪಿತಸ್ಥರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಸತ್ಯ ಹೊರ ಬರುತ್ತದೆ. ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಹೈ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ, ಉದ್ಯೋಗ ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಮೂಲಕ ನೊಂದ ಕುಟುಂಬಕ್ಕೆ ಸರ್ಕಾರ ನ್ಯಾಯ ದೊರಕಿಸಿ ಕೊಡಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಹತ್ತಿರದಿಂದಲೇ ಗುಂಡು ಹಾರಿಸಿರುವುದರಿಂದ ಮೂವರು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯ ವರದಿ ಖಚಿತ ಪಡಿಸಿದೆ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪ್ರಕರಣದ ವಿರುದ್ಧ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಇದಕ್ಕೂ ಮುನ್ನ ಮೃತ ಡೇವಿಡ್ ಕುಮಾರ್‌ಪತ್ನಿ ಲಿಯೋಮೇರಿ ಮಾಧ್ಯಮದವರೊಂದಿಗೆ ಮಾತನಾಡಿ, ಘಟನೆ ನಡೆದು 12 ದಿನ ಕಳೆದಿದೆ. ಆದರೆ ತಪ್ಪಿತಸ್ಥರನ್ನು ಈವರೆಗೂ ಬಂಧಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಸುಮ್ಮನೇ ಕೂರುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಪೀಟರ್ ಸಹೋದರಿ ಮಾರ್ಗರೇಟ್ ಮಾತನಾಡಿ, ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗಿದೆ. ಆದರೆ ಗುಂಡಿಕ್ಕಿ ಕೊಂದಿರುವ ತಪ್ಪಿತಸ್ಥರನ್ನು ಈವರೆಗೂ ಬಂಧಿಸಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ 3 ಕುಟುಂಬಗಳು ಹೋರಾಟ ನಡೆಸಲಿದೆ. ನಿರ್ಲಕ್ಷ್ಯ ವಹಿಸಿದರೆ ಮೃತದೇಹಗಳನ್ನು ಹೊರತೆಗೆದು ಪೊಲೀಸ್ ಠಾಣೆ ಮುಂಭಾಗ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೂಟೌಟ್ ಪ್ರಕರಣ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹನೂರು ತಾಲೂಕು ಬಂದ್‌ಗೆ ಕರೆ ನೀಡಿತ್ತು. ಆದರೆ ವರ್ತಕರು ಹಾಗೂ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡಲಿಲ್ಲ. ಇದರಿಂದ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಜನರ ಸಂಚಾರ ಸಾಮಾನ್ಯವಾಗಿತ್ತು. ಮುಂಜಾಗ್ರತಾ ಗ್ರಾಮವಾಗಿ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಎಸ್‌ಪಿ ಮುತ್ತುರಾಜ್, ಎಎಸ್‌ಪಿ ಶಶಿಧರ್ ಹಾಗೂ ಡಿವೈಎಸ್ಪಿ ಮೋಹನ್ ಮೊಕ್ಕಾಂ ಹೂಡಿದ್ದರು. ಪಟ್ಟಣಕ್ಕೆ ಪ್ರವೇಶಿಸುವ ಆರ್.ಎಸ್.ದೊಡ್ಡಿ, ಬಂಡಳ್ಳಿ ಎಲ್ಲೇಮಾಳ, ಅಜ್ಜೀಪುರ ಹಾಗೂ ಲೊಕ್ಕನಹಳ್ಳಿ ಮುಖ್ಯರಸ್ತೆಯ ನಾಲ್ಕು ಕಡೆಗಳಲ್ಲೂ ಚೆಕ್‌ಪೋಸ್ಟ್ ಸ್ಥಾಪಿಸಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಕಟ್ಟೆಚ್ಚರ ವಹಿಸಿದ್ದರು. ಬಂದ್ ಶಾಂತಿಯುತವಾಗಿ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net