ಶಿವಾನಂದ ನೀಲಣ್ಣನವರ್ ಮತ್ತೇ ಬಂಧನ

ಶಿವಾನಂದ ನೀಲಣ್ಣನವರ್‌
ಶಿವಾನಂದ ನೀಲಣ್ಣನವರ್‌
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರು ವಿಭಾಗದ ಇ.ಡಿ ಅಧಿಕಾರಿಗಳಿಂದ ಅರೆಸ್ಟ್
  • 12 ದಿನಗಳ ಕಾಲ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

ಬೆಂಗಳೂರು:

ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಶಿವಂ ಅಸೋಸಿಯೇಟ್ಸ್ ಮುಖ್ಯಸ್ಥ ಶಿವಾನಂದ ನೀಲಣ್ಣನವರ್‌ನನ್ನು ಮಂಗಳೂರು ವಿಭಾಗದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಆ.13ರಂದು ಬಂಧಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ಮಂಗಳೂರಿನ ಇಡಿ ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಿದ ಅಧಿಕಾರಿಗಳು, ತನಿಖೆ ವಿಚಾರವಾಗಿ ಒಟ್ಟು 12 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಆ.7ರಂದು ಬೆಳಗಾವಿ, ಚಿಕ್ಕೋಡಿ ಹಾಗೂ ನಿಪ್ಪಾಣಿಯ ಹಲವು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆ ಹಾಗೂ ಡಿಜಿಟಲ್ ಸಾಕ್ಷಿಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ತನಿಖೆ ಮುಂದುವರಿಸಲು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ಸಂಸ್ಥೆಯು 2019ರಿಂದಲೇ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ ಅನುಭವಿಸಿತ್ತು. ಆಗ ಹಳೆಯ ಹೂಡಿಕೆದಾರರಿಗೆ ಬಡ್ಡಿ ಪಾವತಿಸಲು, ಹೊಸ ಹೂಡಿಕೆದಾರರ ಹಣ ಬಳಸಿಕೊಳ್ಳುತ್ತಿತ್ತು. ಈ ಅಕ್ರಮ ಹಣದಿಂದ ಐಷರಾಮಿ ವಾಹನಗಳ ಖರೀದಿ, ಭವ್ಯ ಬಂಗಲೆಗಳ ನಿರ್ಮಾಣ ಹಾಗೂ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಹಣ ಹೂಡಿಕೆ ಮಾಡಿರುವುದು ಇಡಿ ತನಿಖೆಯಲ್ಲಿ ಬಯಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಡಿಜಿಟಲ್ ಮ್ಯಾಪಿಂಗ್ ವ್ಯವಸ್ಥೆ ಮತ್ತು ಏಜೆಂಟರ ಬೃಹತ್ ನೆಟವರ್ಕ್ ಬಳಸಿ ಸಾರ್ವಜನಿಕರನ್ನು ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು. ಹೊಸ ಹೂಡಿಕೆದಾರರನ್ನು ತರಲು ಏಜೆಂಟರಿಗೆ ಶೇ.0.5ರಷ್ಟು ಕಮಿಷನ್ ನೀಡಲಾಗುತ್ತಿತ್ತು ಎಂದು ಇ.ಡಿ ಪ್ರಕಟಣೆ ತಿಳಿಸಿದೆ. ತನಿಖೆ ಮುಂದುವರೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net