ಸಿಂದಗಿ : ನಗರದ 19ನೇ ವಾರ್ಡ್ ನಿವಾಸಿ, ಶಿಕೋಣಿ (ಟ್ಯೂಷನ್) ಶಿಕ್ಷಕ ಎಂದೇ ಖ್ಯಾತರಾಗಿದ್ದ ಹೆಚ್.ಟಿ. ಕುಲಕರ್ಣಿ (76) ಅವರು ಶುಕ್ರವಾರ ಬೆಳಗ್ಗೆ ಹದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
ಕಳೆದ ನಾಲ್ಕು ದಶಕ ಗಳಿಗೂ ಅಧಿಕ ಕಾಲದಿಂದ ಗಣಿತ, ವಿಜ್ಞಾನ ವಿಷಯವನ್ನು ಸರಳವಾಗಿ ಬೋಧಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದ ಅಪರೂಪದ ಗುರುವಾಗಿದ್ದರು. ವಿದ್ಯಾರ್ಥಿಗಳ ಆತ್ಮವಿಶ್ವಾಸದ ಪ್ರತೀಕವಾಗಿದ್ದ ಅವರು ನಗರದ ಮನೆ-ಮನೆಗೂ ಚಿರಪರಿಚಿತರಾಗಿದ್ದರು.
ನೆಚ್ಚಿನ ಗುರುಗಳ ನಿಧನದ ಸುದ್ದಿ ಹರಡುತ್ತಿದ್ದಂತೆ ಅವರ ಶಿಷ್ಯರ ದಂಡೇ ಹರಿದು ಬಂದಿತು. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಗುರುಕೃಪಾ ಶಾಲಾ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 4 ಗಂಟೆ ನಂತರ ಕುಲಕರ್ಣಿ ಗುರುಗಳ ಅಂತಿಮ ಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಾಗಿತು.
ನಗರದ ಜನಪ್ರತಿನಿಧಿಗಳು, ಗಣ್ಯ ವರ್ತಕರು, ವಿದ್ಯಾರ್ಥಿ ಪಾಲಕರು ಹಾಗೂ ಅವರಿಂದ ಜ್ಞಾನ ಪಡೆದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಗುರುಗಳ ಅಗಲಿಕೆಗೆ ತಮ್ಮ ನೋವು ವ್ಯಕ್ತಪಡಿಸಿ, ಎಚ್.ಟಿ. ಕುಲಕರ್ಣಿ ಸರ್ ಅಮರ್ ಹೈ ಎನ್ನುತ್ತ ಅಭಿಮಾನದ ಘೋಷಣೆ ಕೂಗುತ್ತ ಅಂತಿಮ ವಿದಾಯ ಹೇಳಿದರು.
ಸಾರ್ಥಕತೆ ಮೆರೆದ ಗುರುಗಳು: ಗುರುಗಳ ಇಚ್ಛೆಯಂತೆ ಅವರ ಪಾರ್ಥಿವ ಶರೀರವನ್ನು ಕರ್ನಾಟಕ ರಾಜ್ಯ ದೇಹದಾನ ಸಂಸ್ಥೆ, ಅಂಗ ರಚನಾ ಶಾಸ ವಿಭಾಗದ ವಿಜಯಪುರದ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಕುಟುಂಬಸ್ಥರು ಹಸ್ತಾಂತರಿಸಿದರು.