_1788170090632.webp?w=480&auto=format%2Ccompress&fit=max)
_1788170090632.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಜಮಖಂಡಿ: ನಗರದಲ್ಲಿ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸಲು ನಗರದ ಕಲ್ಯಾಣ ಮಠದಲ್ಲಿ ಸೆ. 2ರಂದು ಸಂಜೆ 4 ಗಂಟೆಗೆ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲ ಮುಖಂಡರ ಸಾರ್ವಜನಿಕರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಮುತ್ತಿನಕಂತಿ ಹಿರೇಮಠದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಧರ್ಮಸಭೆ, ಪ್ರವಚನ, ಸಂಗೀತ, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಾಡಿನ ವಿವಿಧ ಭಾಗಗಳ ಮಠಾಧೀಶರು, ಪಂಡಿತರು, ತತ್ವಜ್ಞಾನಿಗಳು, ಕಲಾವಿದರು ಹಾಗೂ ಗಣ್ಯರು ಭಾಗವಹಿಸಲಿದ್ದು, ಮಹಿಳೆಯರು, ಯುವಕರು, ಮಕ್ಕಳು ಹಾಗೂ ಹಿರಿಯರಿಗೆ ಜೀವನ ಮೌಲ್ಯಗಳ ಕುರಿತು ಮಾರ್ಗದರ್ಶನ ದೊರೆಯಲಿದೆ. ಈ ಸಮ್ಮೇಳನವು ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆಯಲಿದೆ ಎಂದು ಹೇಳಿದರು.
ಸಮ್ಮೇಳನದ ಪೂರ್ವಭಾವಿ ಸಾರ್ವಜನಿಕ ಸಭೆಯಲ್ಲಿ ಸ್ವಾಗತ, ಪ್ರಚಾರ, ಹಣಕಾಸು, ಕಾರ್ಯನಿರ್ವಹಣೆ ಸೇರಿ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗುವುದು. ಎಲ್ಲ ಸಮಾಜದ ಗುರು-ಹಿರಿಯರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಗರದ ಕಲೂತಿ ಕಲ್ಯಾಣ ಮಂಟಪದಲ್ಲೇ ರಂಭಾಪುರಿ ಜಗದ್ಗುರುಗಳು ವಾಸ್ತವ್ಯ ಹೂಡಿ ಅಲ್ಲೆ ಇಷ್ಟಲಿಂಗ ಪೂಜೆ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ ಪಂಚ ಪೀಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ನ್ಯೂನತೆ ಆಗದಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಬನಹಟ್ಟಿಯ ಶರಣಬಸವ ಶಿವಾಚಾರ್ಯ ಶ್ರೀಗಳು, ಹಿರೆಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಇದ್ದರು.