ಕಲಬುರಗಿ: ಶರಣಬಸವೇಶ್ವರ ಕೆರೆ ಅತ್ಯಾಕರ್ಷಕ, ಪರಿಸರ ಸ್ನೇಹಿ ಹಾಗೂ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತಹ ಸಮಗ್ರ ಜನಸ್ನೇಹಿ ಸಾರ್ವಜನಿಕ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಸ್ಥಳಗಳ ಗುಣಮಟ್ಟ ಹೆಚ್ಚಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶರಣಬಸವೇಶ್ವರ ಕೆರೆಯ ಸುತ್ತಮುತ್ತಲಿನ ಪ್ರದೇಶ ಸಮಗ್ರ ಅಭಿವೃದ್ಧಿಪಡಿಸಿ, ನಾಗರಿಕರಿಗೆ ಉತ್ತಮ ವಾತಾವರಣ, ಮನರಂಜನೆ, ವಾಯುವಿಹಾರ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಆಧುನಿಕ ಸಾರ್ವಜನಿಕ ತಾಣವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಶರಣಬಸವೇಶ್ವರ ಕೆರೆಯ ದಡವನ್ನು ಸುಂದರವಾಗಿ ಮರುರೂಪಿಸುವುದರ ಜತೆಗೆ, ಕೆರೆಯ ನೈಸರ್ಗಿಕ ಪರಿಸರ ಸಂರಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಹಸಿರು ಪರಿಸರದೊಂದಿಗೆ ವಿನ್ಯಾಸಗೊಳಿಸಿ ನಡಿಗೆ ಮಾರ್ಗ, ಆಸನ ವ್ಯವಸ್ಥೆ, ಮನರಂಜನಾ ಸ್ಥಳ, ಮಕ್ಕಳ ಆಟದ ವಲಯ ಹಾಗೂ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಈ ಪ್ರದೇಶ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕಲಬುರಗಿ ನಗರಕ್ಕೆ ಅಗತ್ಯವಿರುವ ಆಧುನಿಕ ಸಾರ್ವಜನಿಕ ಮೂಲಸೌಕರ್ಯ ಹಂತ, ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ನಗರದ ಸೌಂದಯೀರ್ಕರಣದ ಜತೆಗೆ ನಾಗರಿಕರ ಜೀವನಮಟ್ಟ ಸುಧಾರಿಸುವಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಯೋಜನೆಯು ಮತ್ತೊಂದು ಪ್ರಮುಖ ಸಾರ್ವಜನಿಕ ಆಸ್ತಿ ರೂಪಿಸಿದೆ ಎಂದು ಹೇಳಿದ್ದಾರೆ.
"
ಶರಣಬಸವೇಶ್ವರ ಕೆರೆಯನ್ನು ಸೌಂದಯೀರ್ಕರಣಗೊಳಿಸಿ, ಹಸಿರು ಮತ್ತು ಆರೋಗ್ಯಕರ ಹಾಗೂ ಚೈತನ್ಯಮಯ ಸಾರ್ವಜನಿಕ ತಾಣವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. ಭವಿಷ್ಯದಲ್ಲಿ ನಗರದ ಹೊಸ ಹೆಗ್ಗುರುತಾಗಬೇಕು ಎಂಬುದು ಆಶಯ.