ಆಲೂರಲ್ಲಿ ಭತ್ತ ಕೃಷಿಗೆ ಹಿನ್ನಡೆ

ಪಾಳ್ಯ ಹೋಬಳಿಯ ಸಿಂಗೋಡನಹಳ್ಳಿ ಗ್ರಾಮದಲ್ಲಿ ರೈತರು ಭತ್ತ ನಾಟಿಯಲ್ಲಿ ತೊಡಗಿರುವುದು.
ಪಾಳ್ಯ ಹೋಬಳಿಯ ಸಿಂಗೋಡನಹಳ್ಳಿ ಗ್ರಾಮದಲ್ಲಿ ರೈತರು ಭತ್ತ ನಾಟಿಯಲ್ಲಿ ತೊಡಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆಲೂರು ಮೂಲತಃ ಕೃಷಿ ಪ್ರಧಾನ ತಾಲೂಕಾಗಿದ್ದು
  • ಭತ್ತ ಬೆಳೆಗೆ ತಾಲೂಕಿನಲ್ಲಿ ಬಹಳ ಮಹತ್ವ

ಆಲೂರು:

ಆಲೂರು ಮೂಲತಃ ಕೃಷಿ ಪ್ರಧಾನ ತಾಲೂಕಾಗಿದ್ದು, ಅದರಲ್ಲಿಯೂ ಭತ್ತ ಬೆಳೆಗೆ ತಾಲೂಕಿನಲ್ಲಿ ಬಹಳ ಮಹತ್ವವಿದೆ. ಆದರೆ ಈ ವರ್ಷ ಮಳೆ ಕೊರತೆ ಭತ್ತದ ಕೃಷಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಹಬ್ಬಹರಿದಿನಗಳೊಂದಿಗೆ ಇಲ್ಲಿನ ಕೃಷಿ ಬೆಸೆದುಕೊಂಡಿದೆ. ಅದರಲ್ಲಿಯೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಭತ್ತ ಕೃಷಿ ಅನಾದಿ ಕಾಲದಿಂದ ಮಳೆ ಆಧಾರಿತವಾಗಿದೆ. ಆದರೆ ಈ ವರ್ಷ ಮಳೆ ಕೊರತೆ ಎದುರಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೆ 628.6 ಮಿಲಿಮೀಟರ್ ಮಳೆಯಾಗಬೇಕಿತ್ತು. ಆದರೆ 429.4 ಮಿಲಿಮೀಟರ್ ಮಳೆಯಾಗಿದೆ. ಕಳೆದ ವಷರ್ ಇದೇ ಅವಧಿಯಲ್ಲಿ 684.2 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ತಾಲೂಕಿನಲ್ಲಿ ಸುಮಾರು ಶೇ.37ರಷ್ಟು ಮಳೆ ಕೊರತೆ ಎದುರಾಗಿದೆ.
ವಾಡಿಕೆ ಪ್ರಕಾರ ಈ ಭಾಗದ ರೈತರು ಪ್ರತಿ ವಷರ್ ಜೂನ್ ಅಂತ್ಯ ಹಾಗೂ ಜುಲೈ ಆರಂಭಿಕ ಹಂತದಲ್ಲಿ ಕೃಷಿ ಭೂಮಿಯನ್ನು ಉಳುಮೆ ಮಾಡಿ ಭತ್ತದ ಸಸಿ ಮಡಿಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ ಈ ಬಾರಿ ಮಳೆ ಕೊರತೆಯಿಂದ ಸಸಿ ಮಡಿ ತಯಾರಿಗೆ ಭಾರಿ ಹಿನ್ನಡೆಯಾಗಿದ್ದು, ಕೆಲವು ಕಡೆ ಇತ್ತೀಚೆಗೆ ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ. ಇನ್ನು ವಾಡಿಕೆ ಪ್ರಕಾರ ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಬಹುತೇಕ ನಾಟಿ ಕೆಲಸ ಪೂರ್ಣಗೊಳ್ಳಬೇಕಿತ್ತು. ಆದರೆ ಮಳೆ ಕೊರತೆಯಿಂದ ಸಸಿ ಮಡಿ ತಯಾರಿಕೆ ಈಗ ಆರಂಭವಾಗಿದೆ. ಗದ್ದೆ ಉಳುಮೆ ಹಾಗೂ ಬಿತ್ತನೆಗೆ ಸಹಕಾರಿಯೆಂಬಂತೆ ಜುಲೈ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿತ್ತು. ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತ ಬಂದು ಬಿಸಿಲಿನ ವಾತಾವರಣ ಆರಂಭವಾಗುತ್ತಿತ್ತು.
ಸಸಿ ಮಡಿಗಳಿಗೆ ನಿರಂತರ ನೀರನ್ನು ಕಟ್ಟಿ ಬೆಳೆಸಲು ಸಾಧ್ಯವಿಲ್ಲದಿರುವುದರಿಂದ ಹಳೆಯ ನೀರನ್ನು ಹೊರಬಿಟ್ಟು ಹೊಸ ನೀರನ್ನು ಗದ್ದೆಗೆ ಸೇರಿಸುವ ಮೂಲಕ ಸಸಿ ಮಡಿ ಬೆಳವಣಿಗೆ ಮಾಡುವುದು ಇಲ್ಲಿನ ವಾಡಿಕೆ. ಇಲ್ಲವಾದಲ್ಲಿ ಸಸಿ ಮಡಿಯ ತಳಭಾಗದಲ್ಲಿ ಪಾಚಿ ಕಟ್ಟಲು ಆರಂಭವಾಗುತ್ತದೆ. ಸದ್ಯದ ಮಟ್ಟಿಗೆ ಕೆಲವು ರೈತರು ಕೆರೆಯಿಂದ ನೀರನ್ನು ಪೂರೈಕೆ ಮಾಡುತ್ತಿದ್ದರೆ, ಇನ್ನೂ ಕೆಲವು ರೈತರು ಬಾವಿ ನೀರನ್ನು ಪೈಪ್‌ಗಳ ಮೂಲಕ ಹರಿಸಿ ಸಸಿ ಮಡಿ ಬೆಳೆಸಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಕೆಲವು ರೈತರು ಹಳೆಯ ಕಾಲದಿಂದ ಬಂದ ಇಂಟಾನ್, ತುಂಗ, ಆರ್.ಎನ್.ಆರ್, ರಾಜಮುಡಿಯಂತ ದೀರ್ಘಾವಧಿ ತಳಿಯ ಭತ್ತದ ಸಸಿ ಮಡಿಯನ್ನು ಜೂನ್‌ನಲ್ಲಿ ತಯಾರಿಸಿ ನಾಟಿ ಕಾರ್ಯ ಆರಂಭಿಸುತ್ತಿದ್ದರು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಹುತೇಕ ರೈತರಿಗೆ ಸಸಿಮಡಿ ಮಾಡಲು ಸಾಧ್ಯವಾಗಿಲ್ಲ. ಆಗಸ್ಟ್ ಮೊದಲ ವಾರ ಮುಗಿಯುತ್ತಿದ್ದರೂ ಉರಿಬಿಸಿಲು ಮುಂದುವರಿದಿದ್ದು ಗದ್ದೆಗಳಲ್ಲಿ ಸಂಗ್ರಹವಾಗಿದ್ದ ನೀರೂ ಸಹ ಬತ್ತಿ ಹೋಗುತ್ತಿದೆ. ತಾಲೂಕಿನ ಕೆಲವು ಕಡೆಗಳಲ್ಲಿ ನೀರಿನ ತೇವಾಂಶ ಉಳಿದಿರುವ ಕೃಷಿ ಭೂಮಿಗಳಲ್ಲಿ ಮಾತ್ರ ಉಳುಮೆ, ಗದ್ದೆ ಸಿದ್ಧತೆ ಹಾಗೂ ಸಸಿಮಡಿ ಕಾರ್ಯ ನಡೆಯುತ್ತಿದೆ. ಮಳೆ ಸಮರ್ಪಕವಾಗಿ ಸುರಿಯದಿದ್ದರೆ ದೀರ್ಘಾವಧಿ ತಳಿಗಳ ನಾಟಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ಇಳುವರಿ ಕುಸಿತವಾಗುವ ಆತಂಕವೂ ಎದುರಾಗಿದೆ.
ತಾಲೂಕಿನಾದ್ಯಂತ ಮಳೆ ವಿಳಂಬವಾಗಿರುವುರಿಂದ ಭತ್ತದ ನಾಟಿ ಕಾರ್ಯವೂ ಸಹ ನಿಧಾನಗತಿಯಲ್ಲಿ ಸಾಗುತ್ತಿದೆ. ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಭತ್ತದ ನಾಟಿ ಮುಗಿಯುತ್ತಿತ್ತು. ಆದರೆ ಈ ವರ್ಷ ನಾಟಿ ಕಾರ್ಯವನ್ನು ಸುಮಾರು ಒಂದು ತಿಂಗಳು ಮುಂದೂಡಲಾಗಿದೆ. ವರ್ಷದಿಂದ ವಷರ್ಕ್ಕೆ ಭತ್ತದ ಬೇಸಾಯದ ಬಗ್ಗೆ ರೈತರ ಒಲವು ಕ್ಷೀಣಿಸುತ್ತಿರುವುದು ನಾಟಿ ಕಾರ್ಯವೂ ತಡವಾಗಲು ಇನ್ನೊಂದು ಕಾರಣ. ಭತ್ತದ ಧಾರಣೆ ಲಾಭದಾಯಕವಾಗಿಲ್ಲ. ಜತೆಗೆ ಕೃಷಿ ಕಾರ್ಮಿಕರ ಕೂಲಿಯು ಕನಿಷ್ಠ ದಿನಕ್ಕೆ 500ರೂ. ಆಗಿರುವುದರಿಂದ ಪ್ರಸ್ತುತ ಭತ್ತ ಬೇಸಾಯ ದುಬಾರಿ ಎನಿಸಿದೆ. ಈಗ ಬಾರದಿರುವ ಮಳೆ ಒಮ್ಮೊಮ್ಮೆ ಕೊಯ್ಲಿನ ಸಮಯದಲ್ಲಿ ಬೀಸಿದಲ್ಲಿ ಬೆಳೆ ಸಂಪೂರ್ಣ ಹಾಳಾಗಲಿದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಸಾಲದ್ದಕ್ಕೆ ಭತ್ತದ ಬೆಳೆಗೆ ಕಾಡುಪ್ರಾಣಿಗಳ ಕಾಟವಿದೆ. ಇನ್ನೂ ಕೆಲವೆಡೆ ಚಿಕ್ಕ ಚಿಕ್ಕ ನದಿ, ಹಳ್ಳಕೊಳ್ಳಗಳ ನೀರು ಉಕ್ಕಿ, ಮರಳು ಹರಿದು ಬಂದು ಬೇಸಾಯ ಕೈಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರೂ ಕೃಷಿ ಇಲಾಖೆ ಮಾತ್ರ ಮೌನವಾಗಿದೆ. ಇಲಾಖೆ ಮುಖ್ಯಸ್ಥರು ಯಂ ತ್ರೋಪಕರಣಗಳ ಖರೀದಿಗೆ ತೋರಿಸುವಷ್ಟು ಆಸಕ್ತಿಯನ್ನು ಭತ್ತ ಬೆಳೆಗಾರರ ಬಗ್ಗೆ ತೋರದಿರುವುದಕ್ಕೆ ಆಶ್ಚರ್ಯವಾಗಿದೆ. ಯಾವ ಅಧಿಕಾರಿಯೂ ಭತ್ತದ ಗದ್ದೆಗಳಿಗೆ ಭೇಟಿ ನೀಡಿಲ್ಲ. ಮಳೆ ಕ್ಷೀಣಿಸಿರುವುದರಿಂದ ಅಲ್ಪಾವಧಿ ತಳಿಯ ಭತ್ತವನ್ನು ಪೂರೈಸುವ ಬಗ್ಗೆ ಸರ್ಕಾರಕ್ಕೆ ಮನವಿ ನೀಡಿಲ್ಲ. ಅಲ್ಲದೆ ರೈತರಿಗೆ ಯಾವುದೇ ಮಾಹಿತಿಯಿಲ್ಲ ಎಂಬುದು ಕೆಲವು ರೈತರ ದೂರು.

ತಾಲೂಕಿನ ಕೆಲವು ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಷ್ಟಪಟ್ಟು ಬೆಳೆದ ಭತ್ತದ ಕೃಷಿ ಭೂಮಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಹಾನಿಪಡಿಸುತ್ತವೆ. ಇದರಿಂದಾಗಿ ರೈತರು ಭತ್ತದ ಬಿತ್ತನೆ ಮಾಡಲು ಯೋಚಿಸುವ ಪರಿಸ್ಥಿತಿ ಬಂದೊದಗಿದೆ.

ಕೃಷಿ ಇಲಾಖೆಯಿಂದ ಪವರ್ ವೀಡರ್, ಪವರ್ ಟಿಲ್ಲರ್, ಡೀಸೆಲ್ ಪಂಪ್‌ಸೆಟ್ ಮತ್ತು ರೋಟವೇಟರ್, ಮೇವು ಕಟ್ಟುಮಾಡುವ ಯಂತ್ರಗಳ ಜತೆಗೆ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ಖರೀದಿಸಲು ಎಲ್ಲ ವರ್ಗದ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇವುಗಳ ಖರೀದಿಗೆ ಶೇ.90 ರಷ್ಟು ಸಹಾಯ ಧನ ನೀಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.

ತಾಲೂಕಿನಲ್ಲಿ ಈವರೆಗೂ ಸುಮಾರು 3800 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯ ಆಗಬೇಕಿತ್ತು. ಆದರೆ ಮಳೆ ಕೊರತೆಯಿಂದ ಕೇವಲ 488 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯವಾಗಿದೆ. ಜತೆಗೆ ನಾಟಿ ಮಾಡಿರುವ ಭತ್ತದ ಬೆಳೆಗೆ ಮಳೆ ಅಭಾವ ಕುಂಠಿತವಾಗಿರುವ ಕಾರಣ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.
ಎಂ.ಡಿ.ಮನು ತಾಲೂಕು ಸಹಾಯಕ ಕೃಷಿ ನಿರ್ದೇಶಕ
ಪ್ರಸ್ತುತ ದಿನಗಳಲ್ಲಿ ಭತ್ತ ಕೃಷಿ ದುಬಾರಿಯಾಗಿದೆ. ಜತೆಗೆ ಭತ್ತಕ್ಕೆ ಉತ್ತಮ ಧಾರಣೆಯಿಲ್ಲದಾಗಿರುವ ಕಾರಣ ಭತ್ತ ಕೃಷಿ ಬಗ್ಗೆ ರೈತರಲ್ಲಿ ನಿರಾಸಕ್ತಿ ಮೂಡುತ್ತಿದೆ. ಈ ನಡುವೆ ಪ್ರಕೃತಿಯ ಮುನಿಸಿನಿಂದಾಗಿ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಲದೆ ಭತ್ತ ಕೃಷಿ ಮಾಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಯೋಗೇಶ್ ಪ್ರಗತಿಪರ ರೈತ, ಹೊಂಕರವಳ್ಳಿ, ಆಲೂರು ತಾಲೂಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net