ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಅಡ್ಡಿ: ಈವರೆಗೆ ಶೇ.25 ಹಂಚಿಕೆ-ration distribute

 ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಸರ್ವರ್ ಸಮಸ್ಯೆ
ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಸರ್ವರ್ ಸಮಸ್ಯೆ
Published on
ಬೆಂಗಳೂರು: ರಾಜ್ಯದಲ್ಲಿ ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಸರ್ವರ್ ಸಮಸ್ಯೆ ಎದುರಾಗಿದೆ.ಈವರೆಗೆ ಶೇ.25 ರೇಷನ್ ವಿತರಿಸಲಾಗಿದೆ. ಹಾಗಾಗಿ, ಕೂಡಲೇ ಸರ್ವರ್ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ, ಆಹಾರ ಸಚಿವ ಕೆ.ಎಚ್. ಮುನಿಯಪ್ಪಗೆ ಪತ್ರ ಬರೆದಿದೆ.
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಮತ್ತು 10.80 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಂದ ಒಟ್ಟು 4.11 ಕೋಟಿ ಲಾನುಭವಿಗಳಿದ್ದಾರೆ. ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಕಾರ್ಡ್‌ದಾರರಿಗೆ ವಿತರಿಸಬೇಕು. ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಹಾಗೂ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ಯೋಜನೆಯಡಿ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ಮತ್ತು ರಾಗಿಯನ್ನು ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ ನೀಡಬೇಕು.
ಅಂತ್ಯೋದಯ ಕಾರ್ಡ್‌ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ನೀಡಬೇಕು. ಆಯಾ ತಿಂಗಳಿನ 5ನೇ ತಾರೀಖಿನಿಂದ ಕಾರ್ಡ್‌ದಾರರಿಗೆ ಪಡಿತರ ಹಂಚಿಕೆ ಶುರು ಮಾಡಲಾಗುತ್ತಿದೆ. ಈ ವೇಳೆ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ, ಕಾರ್ಡ್‌ದಾರರ ಬೆರಳಚ್ಚು (ಬಯೋಮೆಟ್ರಿಕ್ ) ಪಡೆಯಲು ಸರ್ವರ್ ಸಮಸ್ಯೆ ಎದುರಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಿಲು ಲೆಕ್ಕಿಸದೆ ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಕಾರ್ಡ್‌ದಾರರು ಸರದಿ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯದೆ ವಾಪಸ್ ತೆರಳುತ್ತಿದ್ದಾರೆ. ಮುಂದಿನ 5 ದಿನಗಳಲ್ಲಿ ಶೇ.75 ರೇಷನ್ ವಿತರಿಸಬೇಕಿದೆ. ಆಹಾರ ಇಲಾಖೆಯ ಕಾರ್ಯದರ್ಶಿ, ಆಯುಕ್ತರನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಜನಗಣತಿ ಕಾರ್ಯದಲ್ಲಿ ತೊಡಗಿದ್ದಾರೆ. ಇಲಾಖೆಯಲ್ಲಿ ಯಾವೊಬ್ಬದ ಅಧಿಕಾರಿಗಳ ಇಲ್ಲ. ಸರ್ವರ್ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net