ಕಲಾಕೃತಿಗಳಲ್ಲಿ ಗಾಂಭೀರ್ಯತೆ ಮುಖ್ಯ

ಕಲಬುರಗಿ ಎಂ.ಬಿ.ಲೋಹಾರ್​ ಆರ್ಟ್​ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಚಂದ್ರಹಾಸ ಜಾಲಿಹಾಳ, ವಿಜಯಕುಮಾರ, ಚಂದ್ರಶೇಖರ ಆರ್​.ಡಿ, ಶಿವಾನಂದ ಬಂಟನೂರ ಇತರರು ಕಲಾಕೃತಿಗಳನ್ನು ವೀಕ್ಷಿಸಿದರು.
ಕಲಬುರಗಿ ಎಂ.ಬಿ.ಲೋಹಾರ್​ ಆರ್ಟ್​ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನದಲ್ಲಿ ಚಂದ್ರಹಾಸ ಜಾಲಿಹಾಳ, ವಿಜಯಕುಮಾರ, ಚಂದ್ರಶೇಖರ ಆರ್​.ಡಿ, ಶಿವಾನಂದ ಬಂಟನೂರ ಇತರರು ಕಲಾಕೃತಿಗಳನ್ನು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಕಲಾವಿದ ಜಾಲಿಹಾಳ ಅನಿಸಿಕೆ
  • ಲೋಹಾರ ಆರ್ಟ್​ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ
ಕಲಬುರಗಿ: ಚಿತ್ರಕಲಾವಿದರು ರಚಿಸುವ ಕಲಾಕೃತಿಗಳಲ್ಲಿ ಗಾಂಭೀರ್ಯತೆ ಬಹಳ ಮುಖ್ಯ. ವಿಜಯಕುಮಾರ ಪ್ರದರ್ಶಿಸಿದ ಬಹುತೇಕ ಕಲಾಕೃತಿಗಳಲ್ಲಿ ರಚನಾ ತಂತ್ರಗಾರಿಕೆ, ಕೌಶಲದೊಂದಿಗೆ ವಿಶಿಷ್ಟ ಅಚ್ಚುಕಟ್ಟುತನ ಕಾಣಬಹುದು ಎಂದು ಹಿರಿಯ ಚಿತ್ರಕಲಾವಿದ ಚಂದ್ರಹಾಸ ಜಾಲಿಹಾಳ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಡಿ ಓಂ ನಗರದ ಎಂ.ಬಿ. ಲೋಹಾರ ಆರ್ಟ್​ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಿದ್ದ ಯುವ ಚಿತ್ರಕಲಾವಿದ ವಿಜಯಕುಮಾರ ಎಸ್​. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಗಂಭೀರ ಮತ್ತು ಕಲಾತ್ಮಕ ಕಲಾಕೃತಿಗಳನ್ನು ರಚಿಸಿ ಅದರ ಮೌಲ್ಯ ಹೆಚ್ಚಿಸಿಕೊಳ್ಳಬೇಕು. ಜನಸಾಮಾನ್ಯರೂ ಪ್ರದರ್ಶನ ವೀಸಲು ಆಗಮಿಸುವಂತಾಗಬೇಕು. ಕಲಬುರಗಿಯಲ್ಲಿ ಚಿತ್ರಕಲಾವಿದರು ಮತ್ತು ಕಲಾ ಪ್ರದರ್ಶನಗಳ ಕೊರತೆಯಿಲ್ಲ. ಆದರೆ ಸಾಮಾನ್ಯ ವೀಕ್ಷಕರು, ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಮಾತನಾಡಿ, ಕಲಾವಿದ ವಿಜಯಕುಮಾರ ಕಲಾಕೃತಿಗಳಲ್ಲಿ ಚಲನಶೀಲತೆ, ಪ್ರಮಾಣ ಬದ್ಧತೆ, ನೆರಳು-ಬೆಳಕಿನ ನಿರ್ವಹಣೆಯೊಂದಿಗೆ ಪ್ರಯೋಗಶೀಲತೆ ಕಾಣಬಹುದು. ಗೂಳಿ, ಹಸು, ಮೀನು, ಕುದುರೆ ಮತ್ತು ಆನೆ ಆಕಾರಗಳನ್ನು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾವಿದ ಸೂರ್ಯಕಾಂತ ನಂದೂರ ಮಾತನಾಡಿ, ಕಲಾವಿದ ತನ್ನ ಕಲಾಕೃತಿಗಳ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಬೇಕು. ಒಂದು ಚಿತ್ರಕಲಾಕೃತಿ ರಚಿಸಲು ಸಾಕಷ್ಟು ಸಮಯ ಮತ್ತು ಹಣದ ಅಗತ್ಯವಿದ್ದು, ವರ್ಗದ ಜನರು ಚಿತ್ರಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಜೆಸ್ಕಾಂನ ನಿವೃತ್ತ ಮುಖ್ಯ ಇಂಜಿನಿಯರ್​ ಚಂದ್ರಶೇಖರ ಆರ್​.ಡಿ. ಮಾತನಾಡಿದರು. ಯುವ ಕಲಾವಿದ ವಿಜಯಕುಮಾರ ಎಸ್​. ಪ್ರಾಸ್ತಾವಿಕ ಮಾತನಾಡಿದರು. ಡಾ.ಪರಶುರಾಮ ಪಿ., ಡಾ.ಕೆ.ಎಂ. ಕುಮಾರಸ್ವಾಮಿ, ಕುಪೇಂದ್ರ, ಕವಿತಾ ಕಟ್ಟೆ, ಕಾವ್ಯ ಗಡ್ಡಿ, ಗಿರೀಶ್​ ಕುಲಕರ್ಣಿ, ಶಂಕರಗೌಡ, ಶಶಿಕಾಂತ ಪಾಟೀಲ್​, ರಾಮಗಿರಿ ಪೊಲೀಸ್​ ಪಾಟೀಲ್​, ಸುರೇಶ, ಮಹೇಶ, ಶಿವಶರಣ, ಗೋಪಾಲ ಕೆ.ಪಿ. ಇತರರಿದ್ದರು. ಮಲ್ಲಿಕಾರ್ಜುನ ಮುಗಳಿ ಸ್ವಾಗತಿಸಿ ನಿರೂಪಣೆ ಮಾಡಿ ವಂದಿಸಿದರು. ಪ್ರದರ್ಶನದ ಮೊದಲ ದಿನವೇ ಕಲಾಕೃತಿಯೊಂದು ಮಾರಾಟವಾಗಿದ್ದು ವಿಶೇಷ.
"

ಕಲಾ ಪ್ರದರ್ಶನಗಳು ನಿರಂತರ ನಡೆಯುವುದರಿಂದ ಕಲಾವಿದರು ಮತ್ತು ನೋಡುಗರ ಮಧ್ಯೆ ಸಂಪರ್ಕ ಬೆಳೆಯುತ್ತದೆ. ಕಲಾವಿದರ ನೇರ ಪರಿಚಯ ಮತ್ತು ಅವರು ರಚಿಸಿದ ಕಲಾಕೃತಿಗಳನ್ನು ಆಸ್ವಾದಿಸುವ ಮೂಲಕ ಸೌಂದರ್ಯ ಪ್ರೆ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net